ಇತ್ತೀಚಿನ ಸುದ್ದಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ಗೆ ಮತ್ತೆ ಸಂಕಷ್ಟ: ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ ಇಡಿ; ಇಂದು ವಾದ ಮಂಡನೆ
27/05/2022, 08:15
ಹೊಸದಿಲ್ಲಿ(reporterkarnataka.com)
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದೆಹಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 2 ವರ್ಷ 4 ತಿಂಗಳ ಬಳಿಕ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
55 ಪುಟಗಳ ಚಾರ್ಜ್ ಶೀಟ್ ಜೊತೆಗೆ ಒಂದು ಸಣ್ಣ ಟ್ರಂಕ್ ನಲ್ಲಿ ದಾಖಲೆಗಳನ್ನು ಇಡಿ ಅಧಿಕಾರಿಗಳು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ
ಶಿವಕುಮಾರ್ ಅವರು 48 ದಿನಗಳ ಕಾಲ ದೆಹಲಿಯ ತಿಹಾರ್ ಜೈಲಿನಲ್ಲಿ ಬಂಧಿಯಾಗಿದ್ದರು.
ಪ್ರಕರಣದ ಎ1 ಆರೋಪಿ ಡಿ.ಕೆ. ಶಿವಕುಮಾರ್,ಎ2 ಸುನೀಲ್ ಶರ್ಮಾ, ಎ3 ಸಚಿನ್ ನಾರಾಯಣ, ಎ4 ಕರ್ನಾಟಕ ಭವನ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಇವರ ಜೊತೆಗೆ ಹಲವು ಆರೋಪಿಗಳ ಹೆಸರು ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪ ಮಾಡಲಾಗಿದೆ. PMLA ಕಾಯ್ದೆ ಮತ್ತು ಸೆಕ್ಷನ್ 120b ಅಡಿ ಆರೋಪ ಹೊರಿಸಲಾಗಿದ್ದು, ಈ ಆರೋಪಗಳ ಮೇಲೆ ಶನಿವಾರ ಬೆಳಿಗ್ಗೆ ಇಡಿ ವಕೀಲರಿಂದ ವಾದ ಮಂಡನೆಯಾಗಲಿದೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.
ಶಿವಕುಮಾರ್ ವಿರುದ್ಧ ಆದಾಯ ಮೀರಿ ಆಸ್ತಿಗಳಿಕೆ ಪ್ರಕರಣ ಸಂಬಂಧ ದಾಳಿ ನಡೆಸಲಾಗಿತ್ತು. ಗುಜರಾತ್ ರಾಜ್ಯಸಭೆ ಚುನಾವಣೆ ವೇಳೆ, ಅಹ್ಮದ್ ಪಟೇಲ್ ಗೆಲುವಿನ ಸಲುವಾಗಿ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಡಿಕೆಶಿ ಕಸ್ಟಡಿಯಲ್ಲಿಟ್ಟ ಸಂದರ್ಭದ ವೇಳೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. ಇದು ರಾಜಕೀಯ ಪ್ರೇರಿತ ದಾಳಿ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಆದರೆ ದೆಹಲಿಯ ಡಿಕೆಶಿ ನಿವಾಸದಲ್ಲಿ ನಗದು ಲಭ್ಯವಾಗಿತ್ತು. ಈ ಸಂಬಂಧ ಡಿಕೆಶಿ ಅವರನ್ನು ಬಂಧಿಸಲಾಗಿತ್ತು. ಇದೀಗ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಚುನಾವಣೆ ಸಮೀಪವಾಗುತ್ತಿರುವ ಸಂದರ್ಭದಲ್ಲಿ ಶಿವಕುಮಾರ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಇಡಿ ಆರೋಪಗಳು ಏನು?
* ಡಿ.ಕೆ. ಶಿವಕುಮಾರ್ 800 ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬಸ್ಥರ ಹೆಸರಿನಲ್ಲಿ 200 ಕೋಟಿ ಠೇವಣಿ ಇದೆ. 20ಕ್ಕೂ ಅಧಿಕ ಬ್ಯಾಂಕ್, 317 ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್ ಮೂಲಕ ಅಕ್ರಮ ಹಣ ವರ್ಗಾವಣೆ.
* ಮಗಳ ಹೆಸರಿನಲ್ಲಿ 108 ಕೋಟಿ ಅಕ್ರಮ ವ್ಯವಹಾರ ಪುತ್ರಿಗೆ 48 ಕೋಟಿ ಸಾಲ ಇದೆ, ಆದರೆ ಸಾಲದ ಮೂಲ ತಿಳಿಸಿಲ್ಲ.
* ದೆಹಲಿ ನಿವಾಸದ 8.59 ಕೋಟಿ ಹಣಕ್ಕೆ ಲೆಕ್ಕ ಕೊಟ್ಟಿಲ್ಲ . ಡಿಕೆಶಿ ಹೆಸರಲ್ಲಿ 24, ಸಂಸದ ಡಿ.ಕೆ.
ಸುರೇಶ್ ಹೆಸರಲ್ಲಿ 27 , ತಾಯಿ ಹೆಸರಲ್ಲಿ 38 ಆಸ್ತಿಗಳಿವೆ.
* ಡಿಕೆಶಿ ಕುಟುಂಬದ ಬಳಿ ಒಟ್ಟು 300 ಆಸ್ತಿಗಳಿವೆ. ಶಿವಕುಮಾರ್ ವ್ಯವಹಾರದಲ್ಲಿ ಅಕ್ರಮ ಆಸ್ತಿ ಗಳಿಕೆ ಮತ್ತು ಹವಾಲ ದಂಧೆ ನಡೆದಿರುವ ಅನುಮಾನಗಳಿವೆ ಅಂಥ ದೆಹಲಿ ಹೈಕೋರ್ಟ್ ನಲ್ಲಿ ಬೇಲ್ ಅರ್ಜಿಯ ಮೇಲೆ ವಾದ- ಪ್ರತಿವಾದ ನಡೆಯುತ್ತಿದ್ದಾಗ ಇಡಿ ಶಿವಕುಮಾರ್ ಅವರ ಮೇಲೆ ಆರೋಪ ಮಾಡಿತ್ತು.
ಡಿ.ಕೆ. ಶಿವಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿ,
ಪ್ರಧಾನಿ ನರೇಂದ್ರ ಮೋದಿಯವರನ್ನು ವಿರೋಧಿಸುವವರನ್ನು ರಾಜಕೀಯವಾಗಿ ನಿರ್ನಾಮ ಮಾಡುವ ಹುನ್ನಾರ ನಡೆಯುತ್ತಿದೆ. ಒಂದೋ ಅವರಿಗೆ ಶರಣಾಗಬೇಕು ಇಲ್ಲ ಅವರ ಜೊತೆ ಕೈಜೋಡಿಸಬೇಕು, ಇಲ್ಲವಾದಲ್ಲಿ ನಮ್ಮನ್ನು ತುಳಿಯಲು ಯತ್ನಿಸುತ್ತಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂಬುದು ನನಗೆ ಗೊತ್ತಿದೆ, ಅದಕ್ಕಾಗಿಯೇ ನಾನು ಯಾರಿಗೂ ಹೆದರುವುದಿಲ್ಲ. ಎಲ್ಲವನ್ನೂ ಧೈರ್ಯವಾಗಿ ಎದುರಿಸುತ್ತೇನೆ
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರು