ಇತ್ತೀಚಿನ ಸುದ್ದಿ
ಪಾಲ್ದನೆ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ: ಗಾಯನ, ಕವಿತಾ ವಾಚನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
25/08/2025, 19:35

ಮಂಗಳೂರು(reporterkarnataka.com): ನಗರದ ಪಾಲ್ದನೆ ಸಂತ ತೆರೆಸಾ ಚರ್ಚಿನಲ್ಲಿ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲಾಯಿತು.
ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಸಿಯಸ್ ಕುವೆಲ್ಲೊ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕೊಂಕಣಿ ಮಾತೃ ಭಾಷೆಯವರು ತಮ್ಮ ಮನೆಗಳಲ್ಲಿ ಕೊಂಕಣಿಯಲ್ಲಿಯೇ ಮಾತನಾಡುವ ಮೂಲಕ ಈ ಭಾಷೆಯನ್ನು ಉಳಿಸಿ ಬೆಳೆಸಲು ಮುಂದಾಗ ಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ ಅವರು ಮಾತನಾಡಿ ಕೊಂಕಣಿ ಮಾನ್ಯತೆ ಲಭಿಸಿದ ಕುರಿತಂತೆ ಮಾಹಿತಿ ನೀಡಿ ನಮ್ಮ ಮಾತೃ ಭಾಷೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ದಾಟಿಸಲು ಎಲ್ಲರೂ ಮುಂದಾಗ ಬೇಕು ಎಂದು ಸಲಹೆ ಮಾಡಿದರು.
ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಸ್ವಾಗತಿಸಿದರು.
ಕೊಂಕಣಿ ಮಾನ್ಯತಾ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಗಾಯನ ಮತ್ತು ಕವಿತಾ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಕುರಿತಂತೆ ವಿಶಿಷ್ಟ ರೀತಿಯ ಸೇವೆ ಸಲ್ಲಿಸಿದ ಚರ್ಚಿನ ಸದಸ್ಯ ಚಾರ್ಲ್ಸ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಚರ್ಚ್ ನ ಸರ್ವ ಆಯೋಗಗಳ ಸಂಚಾಲಕ ಜೋಸ್ಲಿನ್ ಲೋಬೊ, ಎರಡು ಕಾನ್ವೆಂಟ್ ಗಳ ಸುಪೀರಿಯರ್ ಗಳಾದ ಸಿ. ಮೊಂತಿ ಮತ್ತು ಸಿ. ವಿಭಾ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಪ್ಯಾಟ್ಸಿ ಮೊಂತೇರೊ ಉಪಸ್ಥಿತರಿದ್ದರು.
ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ವಂದಿಸಿದರು. ರೋಶನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.