ಇತ್ತೀಚಿನ ಸುದ್ದಿ
ನೀರುಮಾರ್ಗ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ: ಹಾಡು, ನೃತ್ಯ, ನಾಟಕ, ಮಾಂಡೊ ಸಂಭ್ರಮ
21/08/2025, 11:39

ಮಂಗಳೂರು(reporterkarnataka.com): ನಗರ ನೀರುಮಾರ್ಗದ ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್ ನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಕಾರ್ಯಕ್ರಮ ಆಗಸ್ಟ್ 17 ರಂದು ಭಾನುವಾರ ನಡೆಯಿತು.
ಮುಖ್ಯ ಅತಿಥಿಯಾಗಿದ್ದ ಅರುಣ್ ರಾಜ್ ರೊಡ್ರಿಗಸ್ ಅವರು ಸಮಾರಂಭವನ್ನು ಆ ದಿನದ ವಿಶೇಷ ಖಾದ್ಯ ಪತ್ರೊಡೆಯನ್ನು ಬಿಡಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಕೊಂಕಣಿ ಭಾಷೆಯು 1992 ಆಗಸ್ಟ್ 20ರಂದು ಭಾರತದ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳ್ಳುವ ಮೂಲಕ ಅಧಿಕೃತ ಭಾಷೆಯ ಸ್ಥಾನ ಮಾನವನ್ನು ಪಡೆಯಿತು. ನಾವು ಅದೇ ಹುಮ್ಮಸ್ಸಿನಿಂದ ಕೊಂಕಣಿ ಭಾಷೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯ ಬೇಕಾದರೆ ಕೊಂಕಣಿ ಮಾತೃ ಭಾಷಿಗರು ತಮ್ಮ ಮನೆಗಳಲ್ಲಿ ಕೊಂಕಣಿಯಲ್ಲಿಯೇ ವ್ಯವಹರಿಸುವ ಅಗತ್ಯವಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನೀರುಮಾರ್ಗ ಚರ್ಚ್ ನ ಧರ್ಮಗುರು ವಂದನೀಯ ಫಾ. ಪೌಲ್ ಪಿಂಟೊ ಅವರು ಮಾತನಾಡಿ, ತಾನು ವೆಲೆನ್ಸಿಯಾ ಚರ್ಚ್ ನಲ್ಲಿ ಧರ್ಮಗುರು ಆಗಿದ್ದಾಗ 25 ವರ್ಷಗಳ ಹಿಂದೆ ಕೊಂಕಣಿ ಮಾನ್ಯತಾ ದಿನವನ್ನು ಆಚರಿಸಲು ಆರಂಭಿಸಿದ್ದೆನು. ಇದೀಗ ಈ ಆಚರಣೆ ಧರ್ಮ ಪ್ರಾಂತ್ಯ ಮಟ್ಟಕ್ಕೆ ವಿಸ್ತರಣೆಗೊಂಡಿದೆ. ಈಗ ಈ ಚರ್ಚ್‌ನಲ್ಲಿ ಆಚರಿಸುತ್ತಿದ್ದೇವೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂದೀಪ್ ಮಿಸ್ಕಿತ್ ಸ್ವಾಗತಿಸಿದರು. ಕಾರ್ಯದರ್ಶಿ ಉಷಾ ಫೆರ್ನಾಂಡಿಸ್, ಸೇಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಮ್ಯಾನೇಜರ್ ಸಿಸ್ಟರ್ ಸುಜಾತಾ, ಕಾರ್ಮೆಲ್ ಆಶ್ರಮದ ಸುಪೀರಿಯರ್ ಸಿಸ್ಟರ್ ಜೇನ್, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಅವರು ಉಪಸ್ಥಿತರಿದ್ದರು. ಕಿರು ಕ್ರೈಸ್ತ ಸಮುದಾಯದ ಸಂಚಾಲಕಿ ಶಬಿತಾ ಸಲ್ದಾನ್ಹಾ ಅವರು ವಂದಿಸಿದರು. ಸವಿತಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಈ ಸಮಾರಂಭದಲ್ಲಿ ಚರ್ಚ್ ವ್ಯಾಪ್ತಿಯ 16 ವಾರ್ಡುಗಳ ಜನರು 14 ವಿಭಾಗಗಳಲ್ಲಿ ಕೊಂಕಣಿ ಹಾಡು, ನೃತ್ಯ, ನಾಟಕ, ಮಾಂಡೊ ಮತ್ತಿತರ ವಿವಿಧ ಕೊಂಕಣಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಕೊಂಕಣಿ ಮಾತೆ ನಿಮಗೆ ನಮ್ಮ ವಂದನೆಗಳು”ಎಂಬ ಸ್ಲೋಗನ್ ಮೊಳಗಿತು. ಕೊನೆಯಲ್ಲಿ ಸಹ ಭೋಜನದಲ್ಲಿ ಪಾಲ್ಗೊಂಡರು.