ಇತ್ತೀಚಿನ ಸುದ್ದಿ
ಕೋಲಾರ ಜಿಲ್ಲೆ: ಮೂವರು ಪತ್ರಕರ್ತರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ
03/01/2025, 15:52
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterlarnataka@gmail.com
ಜಿಲ್ಲೆಯ ಹಿರಿಯ ಪತ್ರಕರ್ತರಾದ ವಾಸುದೇವ ಹೊಳ್ಳ, ಹಾಬಿ ರಮೇಶ್ ಹಾಗೂ ‘ಪ್ರಜಾವಾಣಿ’ ಜಿಲ್ಲಾ ವರದಿಗಾರ ಕೆ.ಓಂಕಾರ ಮೂರ್ತಿ ಅವರು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅಕಾಡೆಮಿ ಅಧ್ಯಕ್ಷರು ಗುರುವಾರ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ವಾಸುದೇವ ಹೊಳ್ಳ ಅವರಿಗೆ 2023ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ ಹಾಗೂ ಹಾಬಿ ರಮೇಶ್ ಅವರಿಗೆ 2024ನೇ ಸಾಲಿನ ‘ವಾರ್ಷಿಕ ಪ್ರಶಸ್ತಿ’ ಒಲಿದಿದೆ.
ಓಂಕಾರ ಮೂರ್ತಿ ಅವರು ಅಕಾಡೆಮಿಯ 2024ನೇ ಸಾಲಿನ ‘ಅಭಿಮಾನಿ ದತ್ತಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ‘ಕೆರೆ ಒಡಲಿಗೆ ಬೆಂಗಳೂರಿನ ಚರಂಡಿ ನೀರು; ತರಕಾರಿ ಗುಣಮಟ್ಟ ಕುಸಿತ, ಅವಳಿ ವ್ಯಾಲಿಯಲ್ಲಿ ಅಪಾಯ’ ವಿಶೇಷ ವರದಿಗೆ ಈ ಪ್ರಶಸ್ತಿ ಒಲಿದಿದೆ.
ಪ್ರಶಸ್ತಿ ಪುರಸ್ಕೃತರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್ ಕುಮಾರ್ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು ಅಭಿನಂದನೆ ಸಲ್ಲಿಸಿದ್ದಾರೆ.