1:12 PM Sunday3 - August 2025
ಬ್ರೇಕಿಂಗ್ ನ್ಯೂಸ್
Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:… ಸ್ಪಾಟ್ 1ರಲ್ಲಿ ದೊರೆತ ಡೆಬಿಟ್, ಪಾನ್ ಕಾರ್ಡ್ ವಾರಸುದಾರರು ಪತ್ತೆ; ಧರ್ಮಸ್ಥಳ ಪ್ರಕರಣಕ್ಕೂ… ಚುನಾವಣೆಯಲ್ಲಿ ಅಕ್ರಮಗಳನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆರೋಪ ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿಯವರ ಬಳಿ ಸಾಕ್ಷಿ ಇದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಗಳ್ಳತನದ ವಿರುದ್ಧ ರಾಹುಲ್ ನೇತೃತ್ವದಲ್ಲಿ ಆ.5ರಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ: ಡಿಸಿಎಂ… ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ: ಮುಂದುವರಿಯಲಿರುವ ಉತ್ಖನನ ಪ್ರಕ್ರಿಯೆ; ತಾತ್ಕಾಲಿಕ ಶೆಡ್ ನಿರ್ಮಾಣ

ಇತ್ತೀಚಿನ ಸುದ್ದಿ

Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ ವಿರೋಧ

03/08/2025, 12:24

ಗಿರಿಧರ್ ಕೊಂಪುಳಿರ ವಿರಾಜಪೇಟೆ

info.reporterkarnataka@gmail.com

ರ್‍ಯಾಂಬುಟನ್ ಹಣ್ಣಿನಿಂದ ಕೇರಳ ರಾಜ್ಯದಲ್ಲಿ ನಿಫಾ ವೈರಸ್ ಯಥೇಚ್ಛವಾಗಿ ಹರಡುತ್ತಿದೆ. ಆದ್ದರಿಂದ ಕೊಡಗಿನಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿರುವ ರ್‍ಯಾಂಬುಟನ್ ಹಣ್ಣನ್ನು ನಿಷೇಧಿಸಬೇಕು ಎಂದು ಅನಾಮಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ. ಇದು ಬೀದಿಬದಿಗಳಲ್ಲಿ ಹೊಟ್ಟೆಪಾಡಿಗಾಗಿ ರ್‍ಯಾಂಬುಟನ್ ಹಣ್ಣನು ಮಾರುತ್ತಿದ್ದ ವ್ಯಾಪಾರಿಗಳ ಪಾಲಿಗೆ ಮುಳುವಾಗಿದೆ. ಯಾರೋ ಅನಾಮಿಕರು ಯಾವುದೇ ವೈಜ್ಞಾನಿಕ ದೃಢತೆಯಿಲ್ಲದ ಮಾಹಿತಿಗಳನ್ನು ಟೈಪ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಸಿದ್ದು ಇತ್ತೀಚಿಗೆ ಭಾರಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಇದರ ಸತ್ಯಶೋಧನೆಗೆ ಮುಂದಾಗದ ಪೋಲಿಸ್ ಇಲಾಖೆ ದಿಢೀರನೆ ರಸ್ತೆ ಬದಿಗಳಲ್ಲಿ ರ್‍ಯಾಂಬುಟನ್ ಮಾರುತ್ತಿದ್ದ ವ್ಯಾಪಾರಸ್ಥರನ್ನು ತೆರವುಗೊಳಿಸಿದೆ.
ಈ ಕುರಿತು ತೀವ್ರ ವಿರೋಧ ವ್ಯಕ್ತಪಡಿಸಿರುವ ಕೆಲವು ಸಾರ್ವಜನಿಕರು ಮತ್ತು ಬೀದಿಬದಿ ರ್‍ಯಾಂಬುಟನ್ ಹಣ್ಣು ಮಾರಾಟಗಾರರು, ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುಳ್ಳು ಸುದ್ದಿಯನ್ನು ಪರಿಗಣಿಸಿ ರ್‍ಯಾಂಬುಟನ್ ಹಣವನ್ನು ಮಾರಾಟ ಮಾಡಲು ನಿರ್ಬಂಧ ವಿಧಿಸಿದ್ದು ಸರಿಯಲ್ಲ. ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಅಥವಾ ಸಂಬಂಧಿಸಿದ ಇಲಾಖೆ ಕನಿಷ್ಠ ಸತ್ಯಶೋಧನೆಗಾದರೂ ಮುಂದಾಗಬೇಕಿತ್ತು ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳದ ಪಟ್ಟಣಂತಿಟ್ಟ ಸೇರಿದಂತೆ ದಕ್ಷಿಣ ಕೇರಳ ಭಾಗದಿಂದ ಕೊಡಗು ಜಿಲ್ಲೆಗೆ ರ್‍ಯಾಂಬುಟನ್ ಹಣ್ಣನ್ನು ಪೂರೈಸಲಾಗುತ್ತಿತ್ತು. ಚಿಕ್ಕ ಪುಟ್ಟ ವ್ಯಾಪಾರಿಗಳು ತಮ್ಮ ಹೊಟ್ಟೆಪಾಡಿಗಾಗಿ ಜಿಲ್ಲೆಯ ಅಲ್ಲಲ್ಲಿ ಇದನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿದ್ದರು. ಕೊಡಗು ಭೇಟಿಯ ನೆನಪಿಗೆ ಪ್ರವಾಸಿಗರು ಮತ್ತು ಈ ಹಣ್ಣಿನ ಸೌಂದರ್ಯಕ್ಕೆ ಮಾರುಹೋಗುವ ಸ್ಥಳೀಯರು ವಿಶಿಷ್ಟ ರುಚಿಯ ವಿದೇಶಿ ಹಣ್ಣು ರ್‍ಯಾಂಬುಟನ್ ಅನ್ನು ಕೊಂಡೊಯ್ಯುತ್ತಿದ್ದರು. ಮೇಲ್ಮೈ ರೋಮದಂತ ಮುಷ್ಠಿ ಗಾತ್ರದ ಕೆಂಪನೆಯ ಈ ರ್‍ಯಾಂಬುಟನ್ ಹಣ್ಣಿನ ಒಳಗಿರುವ ಬೆಳ್ಳಗಿನ ಸಿಹಿ ಸಿಹಿಯಾದ ತಿರುಳು ವಿಶಿಷ್ಟ ರುಚಿಯನ್ನು ನೀಡುತ್ತದೆ. ಇದು ಜಿಲ್ಲೆಯಲ್ಲಿ ರೂ.300 ರಿಂದ 350 ರವರೆಗೆ ಮಾರಾಟವಾಗುತ್ತಿತ್ತು.
ಆದರೆ ಇದೀಗ ಕೇರಳದಲ್ಲಿ ಕಾಣಿಸಿಕೊಂಡ ನಿಫಾ ಪ್ರಕರಣಕ್ಕೆ ರ್‍ಯಾಂಬುಟನ್ ಹಣ್ಣಿನ ನಂಟು ಇರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿರುವುದರಿಂದ ಬೀದಿಬದಿಯ ಸಣ್ಣಪುಟ್ಟ ವ್ಯಾಪಾರಿಗಳು ಈಗ ಕಂಗಾಲಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೀದಿಬದಿ ರ್‍ಯಾಂಬುಟನ್ ವ್ಯಾಪಾರಿಯೊಬ್ಬರು, ಈ ಹಣ್ಣಿಗೂ ನಿಫಾ ವೈರಸ್ಗು ಯಾವುದೇ ಸಂಬಂಧವಿಲ್ಲ. ಈ ಬಗ್ಗೆ ಅನಗತ್ಯವಾಗಿ ಅಪಪ್ರಚಾರ ನಡೆಸಲಾಗಿದೆ. ವಿರಾಜಪೇಟೆ- ಗೋಣಿಕೊಪ್ಪಲು ಮುಖ್ಯ ರಸ್ತೆ ಬದಿಯಲ್ಲಿ ರ್‍ಯಾಂಬುಟನ್ ವ್ಯಾಪಾರ ಮಾಡುತ್ತಿದ್ದವರ ಬಳಿಗೆ ಇತ್ತೀಚೆಗೆ ಬಂದ ಅಪರಿಚಿತ ತಂಡವೊದು ದೊಡ್ಡ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟಿತು. ಈ ಮೊತ್ತದ ಹಣವನ್ನು ನೀಡಲು ಸಾಧ್ಯವಿಲ್ಲ ಎಂದು ವ್ಯಾಪಾರಿ ನಿರಾಕರಿಸಿದ ಕಾರಣ ಮಾರಾಟ ಮಾಡುತ್ತಿದ್ದ ಹಣ್ಣಿನ ಗುಡ್ಡೆಯ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಲಾಗಿದೆ ಎಂಬುದು ಇವರ ಆಪಾದನೆಯಾಗಿದೆ.
ರ್‍ಯಾಂಬುಟನ್ ಅಥವಾ ರಂಬೂಟ ಎಂದು ಕರೆಯಲಾಗುವ ಈ ಹಣ್ಣು ಬ್ಯಾಕ್ಟೀರಿಯಾ ಅಥವಾ ನಂಜು ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ಪ್ರಾಚೀನ ಕಾಲದಿಂದಲೂ ಇದನ್ನ ಬಳಸಲಾಗುತ್ತಿದೆ. ಅಲ್ಲದೆ ಈ ಹಣ್ಣು ದೇಹವನ್ನು ಸೋಂಕುಗಳಿಂದ ರಕ್ಷಿಸುವ ಗುಣ ಹೊಂದಿದೆ . ಈ ಹಣ್ಣನ್ನು ಸೇವಿಸಿದರೆ ದೇಹದಲ್ಲಿ ಯಾವುದೇ ಗಾಯಗಳಾದರು ಅದು ಗುಣವಾಗುತ್ತದೆ. ಜೊತೆಗೆ ಗಾಯದಲ್ಲಿ ಕೀವು ಉಂಟಾಗದಂತೆ ಈ ಹಣ್ಣು ತಡೆಯುತ್ತದೆ. ರ್‍ಯಾಂಬುಟನ್ ಹಣ್ಣಿನಲ್ಲಿ ಫೈಬರ್ ಅಂಶವಿದೆ. ಇದು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದಾಗ ಮಲಬದ್ಧತೆ ಕರುಳಿನ ಸಮಸ್ಯೆ ಅತಿ ಸಾರ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರ್‍ಯಾಂಬುಟನ್ ಹಣ್ಣಿನ ಸೇವನೆ ಮಾಡಿದರೆ ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಎಲ್ಲಾ ಸಮಸ್ಯೆಗಳಿಗೂ ಚಿಕಿತ್ಸೆ ನೀಡಬಲ್ಲದು ಎಂದು ಸ್ಥಳೀಯ ಎಂಎಸ್ಸಿ ಪದವೀಧರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನಿಯಮಿತವಾಗಿ ರ್‍ಯಾಂಬುಟನ್ ಹಣ್ಣು ಸೇವಿಸುತ್ತಾ ಬಂದರೆ ಇದರಲ್ಲಿ ಇರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳಿಂದ ತಲೆಹೊಟ್ಟು, ತಲೆಯಲ್ಲಿ ತುರಿಕೆ ಮೊದಲಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಕೂದಲು ಹೆಚ್ಚು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಅಲ್ಲದೆ ತೂಕ ಇಳಿಕೆ, ಹೃದಯದ ಆರೋಗ್ಯ, ಮೂಳೆಯ ಆರೋಗ್ಯ ವೃದ್ಧಿಸಲು ನೆರವಾಗುವ ಈ ರ್‍ಯಾಂಬುಟನ್ ಹಣ್ಣು ಕ್ಯಾನ್ಸರ್ ರೋಗನಿರೋಧಕ ಶಕ್ತಿಯನ್ನೂ ಹೊಂದಿದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ ಹಣ್ಣಿನಲ್ಲಿ ಔಷಧೀಯ ಗುಣಗಳಿರುವುದರಿಂದ ವಿದೇಶಗಳಲ್ಲೆಡೆ ಇದಕ್ಕೆ ಭಾರಿ ಬೇಡಿಕೆ ಇದೆ ಎಂದು ಅವರು ವಿವರಿಸಿದ್ದಾರೆ.
ಕೇರಳದಲ್ಲಿ ನಿಫಾ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ಅಧಿಕೃತರಿಂದ ಮಾಹಿತಿ ಕಲೆ ಹಾಕಿದಾಗ, ಕೇರಳದ ಮಲಪುರಂ ಜಿಲ್ಲೆಯ ಕೆಲವೆಡೆ ನಿಫಾ ವೈರಸ್ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ. ಆದರೆ ಇದು ಯಥೇಚ್ಛವಾಗಿಲ್ಲ. ಆರಂಭದಿಂದಲೇ ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿರುವುದರಿಂದ ಈ ಸೋಂಕು ಸದ್ಯಕ್ಕೆ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದಿದೆ. ರ್‍ಯಾಂಬುಟನ್ ಹಣ್ಣಿನಿಂದ ಮಾತ್ರ ಈ ವೈರಸ್ ಹರಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಂಶೋಧನಾ ವರದಿಗಳಿಲ್ಲ. ನಿಪಾ ವೈರಸ್ ಪ್ರಾಥಮಿಕವಾಗಿ ಹಣ್ಣು ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ವಿಶೇಷವಾಗಿ ಪ್ಟೆರೋಪಸ್ ಕುಲದ ಬಾವಲಿಗಳು ನಿಫಾ
ವೈರಸ್‌ನ ನೈಸರ್ಗಿಕ ಮೂಲಗಳಾಗಿವೆ. ಸೋಂಕಿತ ಬಾವಲಿಯ ಲಾಲಾರಸ, ಮೂತ್ರ ಅಥವಾ ಕಲುಷಿತ ಆಹಾರದ ಸಂಪರ್ಕದ ಮೂಲಕ ಈ ಸೋಂಕು ಮನುಷ್ಯನಿಗೆ ಹರಡಬಹುದು. ಆದರಿಂದ
ಮನೆ ಆವರಣದ ಸಮೀಪವಿರುವ ಹಣ್ಣಿನ ಮರಗಳನ್ನು ಬಲೆಗಳಿಂದ ಮುಚ್ಚಲು ಸೂಚಿಸಲಾಗುತ್ತದೆ. ಪಪ್ಪಾಯಿ, ಪೇರಲ, ಚಿಕ್ಕೂ (ಸಪೋಟ), ಮಾವು, ರ್‍ಯಾಂಬುಟನ್, ಲಿಚಿ, ಸೇಬು ಮೊದಲಾದ ಹಣ್ಣುಗಳನ್ನು ಭಾವಲಿಗಳು ತಿನ್ನುವುದರಿಂದ ನಿಫಾ ಭೀತಿಯ ಸಮಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನಷ್ಟೇ ತೆಗೆದುಕೊಳ್ಳಲಾಗಿದೆ. ಆದರೆ ಕೇರಳದಲ್ಲಿ ರ್‍ಯಾಂಬುಟನ್ ಹಣ್ಣಿನ ಮಾರಾಟಕ್ಕೆ ಯಾವುದೇ ನಿಷೇಧ ಹೇರಳಾಗಿಲ್ಲ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.
ಕೊಡಗಿನಲ್ಲಿ ಇದೀಗ ರ್‍ಯಾಂಬುಟನ್ ಹಣ್ಣುಗಳ ಮಾರಾಟಕ್ಕೆ ವಿಧಿಸಿರುವ ನಿರ್ಬಂಧವನ್ನು ಕೂಡಲೇ ತೆರವುಗೊಳಿಸಬೇಕು. ಇದೀಗ ಮಳೆಗಾಲವಾದ್ದರಿಂದ ಪ್ರತಿನಿತ್ಯದ ಆದಾಯ ನಂಬಿ ಬದುಕುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳ ಬದುಕಿಗೆ ಪರ್ಯಾಯ ಮಾರ್ಗಗಳಿಲ್ಲ. ಆದ್ದರಿಂದ ಸಂಬಂಧಿಸಿದವರು ಬೀದಿಬದಿ ರ್‍ಯಾಂಬುಟನ್ ಹಣ್ಣು ಮಾರಾಟಗಾರರ ಸಂಕಷ್ಟವನ್ನು ತಿಳಿದು ನ್ಯಾಯ ಒದಗಿಸುವಂತಾಗಬೇಕು ಎಂದು ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು