ಇತ್ತೀಚಿನ ಸುದ್ದಿ
Kodagu | ಪೊನ್ನಂಪೇಟೆ: ಕಕ್ಕಡ ಪದ್’ನೆಟ್ಟ್ ಪ್ರಯುಕ್ತ ಪಂಜಿನ ಮೆರವಣಿಗೆ
04/08/2025, 14:15

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡವ ಹಿತರಕ್ಷಣಾ ಬಳಗ, ಕ್’ಗ್ಗಟ್ಟ್ ನಾಡ್, ಪೊನ್ನಂಪೇಟೆ ಇವರ ವತಿಯಿಂದ ಭಾನುವಾರ 14ನೇ ವರ್ಷದ ಕಕ್ಕಡ ಪದ್ ‘ನೆಟ್ಟ್ ಹಬ್ಬ ಆಚರಣೆ ಮತ್ತು ಹಬ್ಬದ ಪ್ರಯುಕ್ತ ಪೊನ್ನಂಪೇಟೆ ಮುಖ್ಯ ಬೀದಿಯಲ್ಲಿ ಪಂಜಿನ ಮೆರವಣಿಗೆ ಆಕರ್ಷಕವಾಗಿ ನಡೆಯಿತು.
ಪೊನ್ನಂಪೇಟೆ ಕೊಡವ ಸಮಾಜದಿಂದ ಪಂಜು ಹಿಡಿದು ಸಾಂಪ್ರದಾಯಿಕ ಉಡುಗೆ ತೊಡಗೆಗಳನ್ನು ಧರಿಸಿ ವಾಲಗದೊಂದಿಗೆ ಹೊರಟ ಕೊಡವರು ಬಸವೇಶ್ವರ ದೇವಾಲಯ ಸತ್ತು ಹಾಕಿ ನಂತರ ಕೊಡವ ಸಮಾಜದಲ್ಲಿ ಸಮಾಗಮಗೊಂಡರು.
ಕೊಡವ ಸಮಾಜದಲ್ಲಿ ದಿನದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಟೆಲಿಫಿಲ್ಮ್ ಪ್ರದರ್ಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ದಿನದ ಅಂಗವಾಗಿ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮ ಚಿರಿಯಪಂಡ ಎಂ. ರಾಜನಂಜಪ್ಪನವರ ಅಧ್ಯಕ್ಷತೆಯಲ್ಲಿ ಜರುಗಿತು. ಮುಖ್ಯ ಅತಿಥಿಗಳಾಗಿ ಕೊಡವ ಎಜುಕೇಶನ್ ಸೊಸೈಟಿ (ಸಿಐಟಿ) ಅಧ್ಯಕ್ಷರಾದ ಡಾ. ಮುಕ್ಕಾಟಿರ ಸಿ. ಕಾರ್ಯಪ್ಪ, ಮತ್ತು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಕೊಡವ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಭಾಗವಹಿಸಿದ್ದರು.
ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಪ್ರಗತಿಪರ ಕಾಫಿ ಬೆಳೆಗಾರ ಕಳ್ಳಿಚಂಡ ಚಂಗಪ್ಪ, 10ನೇ ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ತಂಬಂಡ ಆಶ್ರಯಿ ಅಕ್ಕಮ್ಮ, ದ್ವಿತೀಯ ಪಿ ಯು ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಅಟ್ರಂಗಡ ಪನ್ಯ ಪೊನ್ನಮ್ಮ ಅವರನ್ನು ಸನ್ಮಾನಿಸಿದರು.
ನಂತರ ಸಾಮೂಹಿಕವಾಗಿ ಸಾಂಪ್ರದಾಯಿಕ ಕಕ್ಕಡ ಖಾದ್ಯ ತಿನಿಸು ಹಾಗೂ ವಿಶೇಷ ಉಟೋಪಚಾರ ಅಚ್ಚುಕಟ್ಟಾಗಿ ನೆರವೇರಿತು. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಸಂಖ್ಯಾ ಕೊಡವರು ಒಟ್ಟಾಗಿ ಸೇರಿ ಕಕ್ಕಡ 18 ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು, ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.