7:58 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಕಿತ್ತೂರು ಕರ್ನಾಟಕ, ಉತ್ತರ ಕರ್ನಾಟಕದ ಬೇಡಿಕೆಗಳನ್ನು ಸರಕಾರ ಈಡೇರಿಸಿಲ್ಲ: ಪ್ರತಿಪಕ್ಷದ ನಾಯಕ ಆರ್. ಅಶೋಕ್

19/12/2024, 21:30

ಬೆಂಗಳೂರು(reporterkarnataka.com): ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಈಗ ಹಿಡಿದಿರುವುದು ಅಂಬೇಡ್ಕರ್ ವ್ಯಸನ ಅಲ್ಲ, ಅಧಿಕಾರದ ವ್ಯಸನ. ಆತ್ಮವಂಚನೆ ಮಾಡಿಕೊಂಡರೂ ಪರವಾಗಿಲ್ಲವೆಂದು ಅಧಿಕಾರ ಅನುಭವಿಸುವ ಕೆಟ್ಟ ವ್ಯಸನ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಟೀಕಿಸಿದ್ದಾರೆ.
ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷ ಬಾಬಾ ಸಾಹೇಬ್‌ ಅಂಬೇಡ್ಕರ್ ಅವರಿಗೆ ಏನು ದ್ರೋಹ ಬಗೆದಿದೆ ಎಂದು ಇಡೀ ದೇಶಕ್ಕೆ ಗೊತ್ತು.ಸಿದ್ದರಾಮಯ್ಯನವರಿಗೂ ಗೊತ್ತು. ಸಿಎಂ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ ಮೊದಲು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದು ಆಮೇಲೆ ಅಂಬೇಡ್ಕರ್ ಅವರ ಬಗ್ಗೆ ಮಾತಾಡಲಿ ಎಂದು ಸವಾಲು ಹಾಕಿದ್ದಾರೆ.
1920 ರಲ್ಲಿ ಸೈಮನ್‌ ಆಯೋಗ ಬಂದಿತ್ತು. ಆಗ ಅವರನ್ನು ಭೇಟಿ ಮಾಡಿದ್ದ ಅಂಬೇಡ್ಕರ್‌, ದಲಿತರಿಗೆ ಮತದಾನದ ಹಕ್ಕು ನೀಡಬೇಕು ಎಂದು ಕೇಳಿದ್ದರು. ಆಗ ಕಾಂಗ್ರೆಸ್‌ ನಾಯಕರು ಮಧ್ಯಪ್ರವೇಶ ಮಾಡಿ, *ಮತದಾನದ ಹಕ್ಕು* ದಲಿತರಿಗೆ ಕೊಡಬೇಡಿ ಎಂದು ಹೇಳಿತ್ತು. ದಲಿತರಿಗೆ ಅರಿವಿನ ಕೊರತೆ ಇದೆ ಎಂದು ಕಾಂಗ್ರೆಸ್‌ ಹೇಳಿತ್ತು.ದಲಿತರಿಗೆ ಮತದಾನದ ಹಕ್ಕು ಬೇಡ, ದಲಿತರಿಗೆ ಮೀಸಲಾತಿ ಕೊಡುವುದು ಬೇಡ ಎಂದಿದ್ದ ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಸಿಎಂ ಸಿದ್ದರಾಮಯ್ಯನವರಿಗೆ ಯಾವ ನೈತಿಕತೆಯೂ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸೇರುವುದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಸಮ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ ಈಗ ಸಿದ್ದರಾಮಯ್ಯನವರು *ಅಧಿಕಾರಕ್ಕಾಗಿ ಅದೇ ಕಾಂಗ್ರೆಸ್* ಪಕ್ಷ ಸೇರಿದ್ದಾರೆ. ಅಂಬೇಡ್ಕರ್ ಅವರ ಬಗ್ಗೆ ಇನ್ನು ಒಂದೇ ಒಂದು ಮಾತಾಡುವುದಕ್ಕೆ ಮುಂಚೆ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಆಮೇಲೆ ಮಾತಾಡಲಿ. ಅಧಿಕಾರಕ್ಕೋಸ್ಕರ ಕಾಂಗ್ರೆಸ್ ಪಕ್ಷಕ್ಕೆ ತಮ್ಮನ್ನ ತಾವು ಮಾರಿಕೊಂಡು, ಆತ್ಮ ವಂಚನೆ ಮಾಡಿಕೊಂಡ ಸಿದ್ದರಾಮಯ್ಯನವರಿಂದ ಬಿಜೆಪಿ ಪಾಠ ಕಲಿಯಬೇಕಾಗಿಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಅಂದರೆ ಜನರಿಗೆ ಉತ್ತರದಾಯಿ ಆಗಿರಬೇಕು ಎನ್ನುವ ಉದ್ದೇಶದಿಂದ ಅಂಬೇಡ್ಕರ್ ಸಂವಿಧಾನ ತಂದುಕೊಟ್ಟರು. ಆದರೆ ಇಲ್ಲಿ ಸಂವಿಧಾನದ ಮೇಲೆ ಪ್ರಮಾಣ ವಚನ ತೆಗೆದುಕೊಂಡ ಕಾಂಗ್ರೆಸ್ ಸರ್ಕಾರ ಬೆಳಗಾವಿ ಸದನದಲ್ಲಿ ಉತ್ತರ ಕೊಡದೆ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡು ಪಲಾಯನ ಮಾಡುತ್ತಿದೆ. ಇದು ಅಂಬೇಡ್ಕರ್ ಅವರಿಗೆ, ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಡಾ.ಅಂಬೇಡ್ಕರ್ ಅವರು “ಮಹಿಳೆಯರು ಸಾಧಿಸಿದ ಪ್ರಗತಿಯ ಮಟ್ಟದಿಂದ ನಾನು ಸಮುದಾಯದ ಪ್ರಗತಿಯನ್ನು ಅಳೆಯುತ್ತೇನೆ” ಎಂದಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಇಲ್ಲಿ ಒಂದು ಕಡೆ ಅಂಬೇಡ್ಕರ್ ಫೋಟೋ ಹಿಡಿದುಕೊಂಡು ತೋರಿಕೆ ಮಾಡುತ್ತಿದೆ, ಮತ್ತೊಂದು ಕಡೆ ಕಳಪೆ ಔಷಧಿ ಕೊಟ್ಟು ಮಹಿಳೆಯರನ್ನು ಕೊಲ್ಲುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಕಾಟಾಚಾರದ ಅಧಿವೇಶನ*
ಕಾಂಗ್ರೆಸ್ ಸರ್ಕಾರ ಬೆಳಗಾವಿ ಅಧಿವೇಶನವನ್ನು ಕಾಟಾಚಾರಕ್ಕೆ ನಡೆಸಿದೆ. ಸದನದಲ್ಲಿ ಚರ್ಚೆಯಾದ ಯಾವುದೇ ಗಂಭೀರ ವಿಷಯಗಳ ಬಗ್ಗೆಯೂ ಸರ್ಕಾರ ಉತ್ತರ ನೀಡಲಿಲ್ಲ. ಉತ್ತರ ಕರ್ನಾಟಕದ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯುತ್ತಿರುವ ಬಾಣಂತಿ ಮಹಿಳೆಯರು ಮತ್ತು ನವಜಾತ ಶಿಶುಗಳ ಸರಣಿ ಸಾವಿನ ಬಗ್ಗೆ ಸರ್ಕಾರ ಸದನಕ್ಕೆ ಸಮರ್ಪಕ ಉತ್ತರ ನೀಡಲೇ ಇಲ್ಲ. ಬಿಜೆಪಿ, ಜೆಡಿಎಸ್ ಶಾಸಕರು ಮಾತ್ರವಲ್ಲ, ಸ್ವತಃ ಕಾಂಗ್ರೆಸ್ ಶಾಸಕರೇ ಕಾಂಗ್ರೆಸ್ ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಏನೂ ಮಾಡುತ್ತಿಲ್ಲ ಎಂದು ಅಧಿವೇಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.
ಕಲಬುರಗಿಯಲ್ಲಿ ಮೊದಲ ಸಚಿವ ಸಂಪುಟ ಸಭೆ ನಡೆಸಿ ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಹಾಗೂ ಕಲ್ಯಾಣ–ಕರ್ನಾಟಕ ಪ್ರದೇಶಕ್ಕೆ *17,770 ಕೋಟಿ ರೂ.* ಘೋಷಿಸಿತ್ತು. ಎರಡು ತಿಂಗಳು ಕಳೆದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಜಿಡಿಪಿ ದರದಲ್ಲಿ ಮೊದಲ 10 ಜಿಲ್ಲೆಗಳು ದಕ್ಷಿಣ ಕರ್ನಾಟಕದಲ್ಲಿವೆ. ಉತ್ತರ ಕರ್ನಾಟಕದಲ್ಲಿ ತಲಾ ಆದಾಯ 1.2 ಲಕ್ಷ ರೂ ಇದ್ದರೆ ದಕ್ಷಿಣ ಕರ್ನಾಟಕದಲ್ಲಿ 4.7 ಲಕ್ಷ ರೂ ಇದೆ. ಜಿಡಿಪಿ, ಸಾಕ್ಷರತೆ ಪ್ರಮಾಣ, ಉದ್ಯೋಗ ಮತ್ತು ಕೈಗಾರಿಕೆಗಳ ಸಂಖ್ಯೆಯಲ್ಲಿ ಉತ್ತರ ಕರ್ನಾಟಕ ತೀರಾ ಹಿಂದುಳಿದಿದೆ. ಕಾಂಗ್ರೆಸ್ ಸರ್ಕಾರ ನಂಜುಂಡಪ್ಪ ಆಯೋಗದ ವರದಿಯನ್ನು ಜಾರಿಗೊಳಿಸಿ ಉತ್ತರ ಕರ್ನಾಟಕಕ್ಕೆ ಎಲ್ಲ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾವೇರಿ, ಗದಗ, ಧಾರವಾಡ ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ವಾರ್ಧಾ ಅಣೆಕಟ್ಟು ಮತ್ತು ವರ್ಧಾ-ಬಿಡತಿ ನದಿ ಸೇರುವ ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳುವಂತೆ, ಉತ್ತರ ಕರ್ನಾಟಕದ ನೀರಿನ ಸಮಸ್ಯೆ ಬಗೆಹರಿಸಲು ಕಳಸಾ-ಬಂಡೂರಿ ಯೋಜನೆ ಜಾರಿಗೊಳಿಸಬೇಕು ಶಿಗ್ಗಾಂವಿ ಶಾಸಕ ಯಾಸೀರ್ ಪಠಾಣ್ ಸಲಹೆ ನೀಡಿದ್ದಾರೆ. ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಕೃಷ್ಣಾ ನದಿ ತೀರದ ಜೌಗು ಪ್ರದೇಶದಿಂದ ಹಾನಿಗೊಳಗಾದ ಸಾವಿರಾರು ಎಕರೆ ಭೂಮಿಯನ್ನು ಪುನಶ್ಚೇತನಗೊಳಿಸಲು ಕೃಷಿ ಇಲಾಖೆ ಮೂಲಕ ವಿಶೇಷ ಪ್ಯಾಕೇಜ್ ಅನ್ನು ವಿಸ್ತರಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಮಾದರಿಯಲ್ಲೇ ಕಿತ್ತೂರು ಕರ್ನಾಟಕ ಜಿಲ್ಲೆಗಳ ಅಭಿವೃದ್ಧಿಗೆ ಪ್ರತ್ಯೇಕ ಮಂಡಳಿ ರಚಿಸಬೇಕು ಎಂಬ ಬೇಡಿಕೆಯೂ ಕೇಳಿ ಬಂದಿದೆ. ಈ ಎಲ್ಲ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿ ಎಂದು ಆಗ್ರಹಿಸಿದ್ದಾರೆ.
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆಗೆ 5 ಸಾವಿರ ಕೋಟಿ ರೂ. ಮೀಸಲು, ಮಹಾರಾಷ್ಟ್ರ ಗಡಿಭಾಗದ ಎಲ್ಲಾ ಕನ್ನಡ ಶಾಲೆಗಳಿಗೆ ಒಂದು ಬಾರಿಯ ಮೂಲಸೌಲಭ್ಯ ದೇಣಿಗೆಯಾಗಿ 1 ಕೋಟ ರೂ ಹಾಗೂ ಮಾಸಿಕ 1 ಲಕ್ಷ ಸಬ್ಸಿಡಿ ಮತ್ತು ಶಿಕ್ಷಕರ ನೇಮಕಾತಿ, ಕಾರವಾರ, ಧಾರವಾಡ, ವಿಜಯಪುರ ಹಾಗೂ ಬಾಗಲಕೋಟೆಗಳಲ್ಲಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ. ಪ್ರತಿ ಜಿಲ್ಲೆಯಲ್ಲಿ ಬೇಳೆ/ಕಾಳುಗಳ ದಾಸ್ತಾನು ಕೇಂದ್ರ ಸ್ಥಾಪನೆ, ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಪನೆಗೆ 500 ಕೋಟಿ ರೂ. ಮೀಸಲು, ಅನಿವಾಸಿ ಕನ್ನಡಿಗರ ವ್ಯವಹಾರಕ್ಕಾಗಿ ಪ್ರತ್ಯೇಕ ಸಚಿವಾಲಯ. ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಉದ್ಯಮ ನಡೆಸಲು ಉತ್ತೇಜನ ರೂ 1,000 ಕೋಟಿ ಆವರ್ತನ ನಿಧಿ ಮೊದಲಾದ ಘೋಷಣೆಗಳನ್ನು ಸರ್ಕಾರ ಕಾರ್ಯರೂಪಕ್ಕೆ ತಂದಿಲ್ಲ. ಘೋಷಣೆ ಮಾಡಿದಂತೆಯೇ ಈಡೇರಿಕೆಯನ್ನೂ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು