ಇತ್ತೀಚಿನ ಸುದ್ದಿ
ಕೇಂದ್ರ ಬಿಜೆಪಿ ಸರಕಾರ ಹಿಂದುತ್ವ ನೀತಿಯನ್ನು ಗಾಳಿಗೆ ತೂರಿದೆ: ಡಾ. ಸುಬ್ರಮಣಿಯನ್ ಸ್ವಾಮಿ ಆರೋಪ
08/12/2021, 15:50

ಮಂಗಳೂರು(reporterkarnataka.com): ರಾಮ ಸೇತುವೆಯನ್ನು ಉಳಿಸಲು ನಾನು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ವಿರುದ್ಧ ಹೋರಾಟ ನಡೆಸಿದ್ದೆ. ಆದರೆ ಮೋದಿ ಸರಕಾರ ಅದನ್ನು ಪಾರಂಪರಿಕ ಸ್ಮಾರಕ ಎಂದು ಗುರುತಿಸಲು ವಿಫಲವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನ್ನದೇ ಆದ ಆರ್ಥಿಕ ಹಾಗೂ ಹಿಂದುತ್ವ ನೀತಿಯನ್ನು ಗಾಳಿಗೆ ತೂರಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭೆ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದರು.
ಮಂಗಳವಾರ ರಾತ್ರಿ ನಗರಕ್ಕೆ ಆಗಮಿಸಿದ ಅವರು ಮಾಧ್ಯಮ ಜತೆ ಮಾತನಾಡಿ, ನಾನು ಬಿಜೆಪಿಯಲ್ಲಿ ತೃಪ್ತನಾಗಿದ್ದೇನೆ. ಆದರೆ ಕೇಂದ್ರ ಸರಕಾರದ ಕೆಲವು ನೀತಿಗಳ ಬಗ್ಗೆ ನನ್ನ ವಿರೋಧವಿದೆ. ಪ್ರಧಾನಿ ಮೋದಿ ತನ್ನ ನೀತಿಯನ್ನು ಸರಿಪಡಿಸಿಕೊಂಡರೆ ನನ್ನ ವಿರೋಧವೇನೂ ಇಲ್ಲ ಎಂದರು.
ಬಿಜೆಪಿ ಸರಕಾರದ ಬಗ್ಗೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದೀಗ ಬಿಜೆಪಿ ತನ್ನ ಪ್ರಣಾಳಿಕೆಯನ್ನೇ ಮರೆತಿದೆ. ಹಿಂದುತ್ವ ನೀತಿ, ವಿದೇಶಿ ನೀತಿ, ಆರ್ಥಿಕ ನೀತಿಯನ್ನು ಮರೆತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ ಎಂದು ಅವರು ನುಡಿದರು.
ಡಾ. ಸುಬ್ರಮಣಿಯನ್ ಸ್ವಾಮಿ ಅವರು ಈ ಸಂದರ್ಭದಲ್ಲಿ ಪತ್ನಿ ಜತೆ ಪ್ರಸಿದ್ಧ ವೈದ್ಯ ಡಾ. ಬಿ.ಎಂ. ಹೆಗ್ಡೆ ಮನೆಗೆ ಭೇಟಿ ನೀಡಿದರು.