6:08 PM Wednesday27 - November 2024
ಬ್ರೇಕಿಂಗ್ ನ್ಯೂಸ್
ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​

ಇತ್ತೀಚಿನ ಸುದ್ದಿ

ಕಾಯಕಲ್ಪಗೊಂಡಿದೆ ಗುಜ್ಜರಕೆರೆ: ಸಂರಕ್ಷಣೆಗೆ ಮತ್ತೆ  ಬೇಕಾಗಿದೆ ನಮ್ಮ ನಿಮ್ಮೆಲ್ಲರ ಮುತುವರ್ಜಿ

06/12/2021, 14:53

ಮಂಗಳೂರು(reporterkarnataka.com) ಸಾವಿರಾರು ವರ್ಷಗಳ ಇತಿಹಾಸ ಹಾಗೂ ಧಾರ್ಮಿಕ‌ ಹಿನ್ನೆಲೆಯಿರುವ ನಗರದ ಮಂಗಳಾದೇವಿ ಬಳಿಯ ಗುಜ್ಜರಕೆರೆಯು ಒಳಚರಂಡಿ ನೀರು ಹರಿದು ಹೂಳು ತುಂಬಿದ ಕೆಸರು ಹೊಂಡವಾಗಿತ್ತು. ಸೊಳ್ಳೆಗಳ ಆವಾಸ ತಾಣವಾಗಿತ್ತು. ಇದೀಗ ಜನರ ಒತ್ತಾಸೆಯ ಮೇರೆಗೆ ಮಂಗಳೂರು ಮಹಾಗರಪಾಲಿಕೆ ಕೆರೆಗೆ ಕಾಯಕಲ್ಪ ನೀಡಿದೆ. ಪರಿಣಾಮ ಹಾಳು ಕೊಂಪೆಯಾಗಿದ್ದ ಕೆರೆಯ ಪರಿಸರ ಸುಂದರ ತಾಣವಾಗಿ ಬದಲಾಗಿದೆ.

ಬೆಳಗ್ಗೆ ಸಂಜೆ ಇಲ್ಲಿ ವಿಹಾರಿಗಳು ಅಡ್ಡಾಡುತ್ತಾರೆ. ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಮೆಚ್ಚಿನ ತಾಣವಾಗಿದೆ.ಗುಜ್ಜರಕೆರೆಗೆ 1,800 ವರ್ಷಗಳ ಇತಿಹಾಸವಿದೆ.

ಇದು ಉತ್ತರದಿಂದ ಆಗಮಿಸಿದ ನಾಥ ಪಂಥದ ಗುರು ಮತ್ಸ್ಯೇಂದ್ರನಾಥರ ಸ್ನಾನಕ್ಕಾಗಿ ಅವರ ಶಿಷ್ಯ ಗೋರಕ್ಷನಾಥ ನಿರ್ಮಿಸಿರುವ ಕೆರೆ ಎಂಬ ಪ್ರತೀತಿ ಇದೆ. ಅಂದು ‘ಗುರು ಜನರ ಕೆರೆ’ಯೆಂದು ಪ್ರಸಿದ್ಧವಾಗಿದ್ದ ಈ ಕೆರೆಯು ಇಂದು ಜನರ ಬಾಯಲ್ಲಿ ಗುಜ್ಜರಕೆರೆಯಾಗಿ ಬದಲಾವಣೆಗೊಂಡಿದೆ.

ಕುಡಿಯುವ ನೀರಿನ ಮೂಲ: ಐತಿಹಾಸಿಕ, ಧಾರ್ಮಿಕ ಹಿನ್ನೆಲೆಯಿರುವ ಗುಜ್ಜರಕೆರೆಯು ಈ ಪ್ರದೇಶದ ಪ್ರಸಿದ್ಧ ದೇವಾಲಯಗಳಾದ ಮಂಗಳಾದೇವಿ ಹಾಗೂ ಹಳೇಕೋಟೆ ಮಾರಿಯಮ್ಮ ದೇವರ ಜಳಕದ ಕೆರೆಯಾಗಿತ್ತು. ಅಲ್ಲದೆ, ಸುತ್ತಮುತ್ತಲಿನ ಮನೆಗಳಿಗೆ ಕುಡಿಯುವ ನೀರಿನ ಮೂಲವಾಗಿತ್ತು.‌ ದಿನಬಳಕೆಯ ನೀರಿಗೂ ಜನರು ಈ ಕೆರೆಯನ್ನು ಅವಲಂಬಿಸುತ್ತಿದ್ದರು‌‌. ಕಾಲಕ್ರಮೇಣ ಈ ಕೆರೆಯ ಸುತ್ತಲೂ ಮನೆಗಳು ನಿರ್ಮಾಣಗೊಂಡು,  ವಸತಿ ಸಂಕೀರ್ಣಗಳು ತಲೆಯೆತ್ತಿ ಒಳಚರಂಡಿ‌ ನೀರು ಕೆರೆಯೊಡಲು ಸೇರಲು‌ ಆರಂಭವಾಯಿತು. ಪರಿಣಾಮ ಸ್ವಚ್ಛ, ಶುದ್ಧ ನೀರಿನ ಮೂಲವಾಗಿದ್ದ ಗುಜ್ಜರಕೆರೆಯು ಸಂಪೂರ್ಣ ಮಲಿನಗೊಂಡಿತು. ಹೂಳು ತುಂಬಿ ಜೊಂಡು ಹುಲ್ಲು ಬೆಳೆದು, ಸೊಳ್ಳೆಗಳ ಉತ್ಪತ್ತಿಯ ತಾಣವಾಗಿ ಮಾರ್ಪಟ್ಟಿತ್ತು.

ಈ ಸಂದರ್ಭದಲ್ಲಿ ಈ ಪ್ರದೇಶದವರೇ ಆದ ಮರಕಡ ಶ್ರೀ ಪರಾಶಕ್ತಿ ಕ್ಷೇತ್ರದ  ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಸ್ವಾಮೀಜಿಯವರು ಈ ಪುಣ್ಯ ತೀರ್ಥದ ಮಹತ್ವವನ್ನು ತನ್ನ ಅಂತರಂಗದೊಳಗೆ ಮನಗಂಡು ಈ ಕೆರೆಯ ಸಂರಕ್ಷಣೆ ಹಾಗೂ ಪುನರುದ್ಧಾರದ ಸಂಕಲ್ಪ ಮಾಡಿದರು.2001 ನವಂಬರ್ ತಿಂಗಳಲ್ಲಿ ಸ್ವಾಮೀಜಿಯವರು ಆಗಮಿಸಿ ಈ ಪುಣ್ಯ ತೀರ್ಥ ಶುದ್ಧಿಗೊಳಿಸಿದ ನಂತರ ಕೆರೆಯ ಅಭಿವೃದ್ಧಿ ಕಾರ್ಯ ಪ್ರಾರಂಭವಾಯಿತು. ಇದರ ಅಭಿವೃದ್ಧಿಗಾಗಿ ಸ್ಥಳೀಯರಾದ ನೇಮು ಕೊಟ್ಟಾರಿ ಸೇರಿದಂತೆ ಇತರರು ಟೊಂಕ ಕಟ್ಟಿ ನಿಂತರು. ಈ ಹಿನ್ನೆಲೆಯಲ್ಲಿ ಸ್ಥಳೀಯರೇ ಸೇರಿ ‘ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ’ ಎಂಬ ಸಂಘಟನೆಯನ್ನು ಆರಂಭಿಸಿದರು. ಈ ಮೂಲಕ ಕೆರೆಯನ್ನು ಅಭಿವೃದ್ಧಿ ಪಡಿಸಲು ಪಣತೊಟ್ಟರು.

ಅಭಿವೃದ್ಧಿಗಾಗಿ 4 ಕೋಟಿ: ಆ ಬಳಿಕ ಹಿಂದಿನ ಶಾಸಕರಾದ ಯೋಗೀಶ್ ಭಟ್ , ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಹಾಗೂ ಮಾಜಿ ಶಾಸಕರಾದ ಜೆ. ಆರ್. ಲೋಬೋ ಇವರ ಕಾಲದಲ್ಲಿ ಕೆರೆ ಒಂದಷ್ಟು ಅಭಿವೃದ್ಧಿ ಕಂಡಿತು. ಅದೇ ರೀತಿ ಮಾಜಿ ಮೇಯರ್ ಹರಿನಾಥ್‌ರವರ ಮುತುವರ್ಜಿಯಿಂದ ಕೆರೆಗೆ ಒಳಚರಂಡಿ ನೀರು ಹರಿಯುವುದು ತಪ್ಪಿಸಲಾಯಿತು. 2018 ರಲ್ಲಿ‌ ಅಂದಿನ ಸಿಎಂ ಯಡಿಯೂರಪ್ಪನವರು ಗುಜ್ಜರಕೆರೆಯನ್ನು ಅಭಿವೃದ್ಧಿಪಡಿಸಲು ಸ್ಮಾರ್ಟ್ ಸಿಟಿ ಮೂಲಕ‌ ಅನುದಾನವನ್ನು ಬಿಡುಗಡೆ‌ಮಾಡುವ ಭರವಸೆಯಿತ್ತರು. ಅಲ್ಲದೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿಯವರ ಮುತುವರ್ಜಿಯಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ 4 ಕೋಟಿ ರೂ .ಅನುದಾನ ಮಂಜೂರುಗೊಂಡು 3.43 ಎಕರೆ ವಿಸ್ತೀರ್ಣದ ಗುಜ್ಜರಕೆರೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ. 

ಈಗ ಗುಜ್ಜರಕೆರೆಯ ಸುತ್ತಲೂ ಸಿಂಥೆಟಿಕ್ ಟ್ರ್ಯಾಕ್, ವಿಹಾರಕ್ಕೆಂದು ಬರುವವರಿಗೆ ಆಯಾಸ ಪರಿಹರಿಸಲು, ವಿಹಾರಾರ್ಥವಾಗಿ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಓಪನ್ ಜಿಮ್, ಮಕ್ಕಳಿಗೆ ಆಟವಾಡಲು ಸೌಕರ್ಯಗಳನ್ನು ವ್ಯವಸ್ಥೆಗೊಳಿಲಾಗಿದೆ. ಅಲ್ಲದೆ ಕೆರೆಯ ಸುತ್ತಲೂ ಹಸಿರು ವಾತಾವರಣದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ, ಕೆರೆಯಲ್ಲಿ ಬೃಹತ್ ಗಾತ್ರದ ಸಾಕಷ್ಟು ಮತ್ಸ್ಯಸಂಪತ್ತು ಇದ್ದು, ಇದೀಗ ಬಾತುಕೋಳಿಗಳು ಸೇರಿಕೊಂಡು ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಅಲ್ಲದೆ ಸುತ್ತಲಿನ ವಾತಾವರಣ ಸಂಪೂರ್ಣ ಬದಲಾವಣೆಗೊಂಡು, ಬೆಳಗ್ಗೆ ಹಾಗೂ ಸಂಜೆ ವಾಕಿಂಗ್, ಜಾಗಿಂಗ್, ಸೈಕ್ಲಿಂಗ್ ಪ್ರಿಯರ ನೆಚ್ಚಿನ ತಾಣವಾಗಿ, ಮಕ್ಕಳಿಗೆ ಆಡಲು ಪ್ರೀತಿಯ ಸ್ಥಳವಾಗಿ, ವಿಹಾರಾರ್ಥಿಗಳ ಮೆಚ್ಚಿನ ಜಾಗವಾಗಿ ಪರಿವರ್ತನೆಗೊಂಡಿದೆ.

ಆದರೂ ಎಚ್ಚರಿಕೆ ಬೇಕಿದೆ: ವಿಹಾರಾರ್ಥವಾಗಿ ಬರುವವರು ಮಕ್ಕಳು ದೊಡ್ಡವರೆನ್ನದೆ ಕೆರೆಗೆ ಇಳಿಯುತ್ತಿರುವುದು ಕಂಡು ಬರುತ್ತಿದೆ. ಕೆರೆಯು ಬಹಳ ಆಳವಿರುವುದರಿಂದ ಮಕ್ಕಳು ಮಾತ್ರವಲ್ಲ ಹಿರಿಯರೂ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಾಪಾಯ ಸಂಭವಿಸುವ ಭೀತಿಯಿದೆ. ಅಲ್ಲದೆ ಹೆಚ್ಚಿನವರು ಮೀನಿಗೆ ಬಿಸ್ಕತ್ತು ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ಹಾಕುವುದರಿಂದ ನೀರು ಮತ್ತೆ ಕಲುಷಿತಗೊಂಡು, ಜಲಚರಗಳ ಜೀವ ಹಾನಿಗೂ ಕಾರಣವಾಗಬಹುದು. 

ಜೊತೆಗೆ ಯುವಕರು ಸಿಗರೇಟು ಸೇದಲು ಕೆರೆಯ ಪ್ರದೇಶವನ್ನು ಆಶ್ರಯಿಸಿ ಸಿಗರೇಟು ಚೂರುಗಳನ್ನು ಕೆರೆಗೆ ಹಾಕಿ ಮಲಿನಗೊಳಿಸುತ್ತಿರುವುದು ಆಗುತ್ತಿದೆ. ಜೊತೆಗೆ ಕೆರೆಯ ಈ‌ಶಾನ್ಯ ಮೂಲೆಯಲ್ಲಿ ಕಲುಷಿತ ನೀರು ಕೆರೆಯನ್ನು ಸೇರುತ್ತಿರುವುದು ಕಂಡು ಬರುತ್ತಿದೆ. ಪರಿಣಾಮ ಹಸಿರುಗಟ್ಟಿದ ಕೊಳಚೆ ದಪ್ಪ ಪದರವು ನೀರಿನ ಮೇಲೆ ತೇಲುತ್ತಿರುವುದು ಕಂಡು ಬರುತ್ತಿದೆ. ಅಲ್ಲದೆ ಪ್ಲಾಸ್ಟಿಕ್ ಗಳು ಕೆರೆಯೊಡಲು ಸೇರುವುದನ್ನು ಕಾಣಬಹುದು. ಆದ್ದರಿಂದ ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಕೆರೆಯ ಎಲ್ಲಾ ದ್ವಾರಗಳನ್ನು ಸಂಪೂರ್ಣ ಮುಚ್ಚುವ ವ್ಯವಸ್ಥೆ ಮಾಡಿ ಯಾರೂ ಕೆರೆಗೆ ಅನಗತ್ಯ ಇಳಿಯದಂತೆ ಮಾಡಬೇಕು. ಈ ಮೂಲಕ ಕೆರೆಗೆ ಯಾರೂ ಇಳಿಯದಂತೆ ವ್ಯವಸ್ಥೆ ಮಾಡಬೇಕು. ಜೊತೆಗೆ ಕೆರೆಯ ರಕ್ಷಣೆಯ ಬಗೆಗಿನ ಜಾಗೃತಿ ಸೂಕ್ತ ನಾಮ ಫಲಕಗಳನ್ನು ಕೆರೆಯ ಸುತ್ತಲೂ ಅಳವಡಿಸಬೇಕು ಹಾಗೂ ಇದನ್ನು ತೀರ್ಥ ಕೆರೆಯಾಗಿ ಸಂರಕ್ಷಿಸಬೇಕು ಎಂಬುದು ‘ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ’ಯ ಒತ್ತಾಯದ ಮನವಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು