ಇತ್ತೀಚಿನ ಸುದ್ದಿ
ಕಟೀಲು: ತೋಟಗಾರಿಕೆ ಇಲಾಖೆಯಿಂದ ಕೃಷಿಕರಿಗೆ ಮಲ್ಲಿಗೆ ಕೃಷಿ ಕಾರ್ಯಾಗಾರ; ಮಲ್ಲಿಗೆ ಸಸಿ ವಿತರಣೆ
04/07/2022, 00:04

ಬೆಂಗಳೂರು(reporterkarnataka.com): ಜಿಲ್ಲಾ ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಇದರ ಸಂಯುಕ್ತ ಸಹಯೋಗದಲ್ಲಿ ಕೃಷಿಕರಿಗೆ ಮಲ್ಲಿಗೆ ಕೃಷಿ ಕಾರ್ಯಾಗಾರ
ಮತ್ತು ಮಲ್ಲಿಗೆ ಸಸಿ ವಿತರಣೆ ಕಾರ್ಯಕ್ರಮ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಅವರು ಮಲ್ಲಿಗೆ ಸಸಿ ನೀಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರು ಆಗಮಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ಇಂದಿನ ದಿನಗಳಲ್ಲಿ ದೀರ್ಘಕಾಲಿಕ ಬೆಳೆಗಳನ್ನು ಒಂದೆಡೆ ಬೆಳೆಯುವುದಾದರೆ, ಆದಾಯ ತಂದು ಕೊಡುವ ಅಲ್ಪಕಾಲಿಕ ಬೆಳೆಗಳನ್ನು ಬೆಳೆಯುವುದು ಸಹ ಸೂಕ್ತ. ಈ ಹಿನ್ನೆಲೆಯಲ್ಲಿ ಮಲ್ಲಿಗೆ ಬೆಳೆ ರೈತರಿಗೆ ಆರ್ಥಿಕವಾಗಿ ಸದೃಢ ಹೆಜ್ಜೆ ಇಡುವಲ್ಲಿ ಸಹಕಾರಿ ಎಂದರು.
ಸರಕಾರ ರೈತರಿಗೆ ಹಲವು ವಿಶೇಷ ಯೋಜನೆಗಳು ಹಮ್ಮಿಕೊಂಡಿದ್ದು, ರೈತರು ತೋಟಗಾರಿಕೆ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಈ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲೆಯಾದ್ಯಂತ ಮಲ್ಲಿಗೆ ಕೃಷಿ ಬೆಳೆಯುವ ರೈತರು ಲಾಭದಾಯಕ ಹೆಜ್ಜೆ ಇಡುತ್ತಿರುವುದು, ಮುನ್ನಡೆಯುವುದು ಉತ್ತಮ ಬೆಳವಣಿಗೆ ಎಂದು ಅವರು ನುಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕರು ಮಾತನಾಡಿ, ದುರ್ಗಾಪರಮೇಶ್ವರಿ ದೇವರಿಗೆ ಪ್ರಿಯವಾದ ಮಲ್ಲಿಗೆ ಕೃಷಿ ಬೆಳೆಯನ್ನು ತಿಳಿಯುವ ಅವಕಾಶ ಮತ್ತು ಬೆಳೆಯುವ ಅವಕಾಶ ಮತ್ತು ಸಸಿ ಪಡೆಯುವ ಅವಕಾಶ , ಕ್ಷೇತ್ರದ ಆವರಣದಲ್ಲಿ ದೊರಕಿದ್ದು ರೈತರ ಪಾಲಿನ ಅದೃಷ್ಟ ಎಂದರು.ಮಲ್ಲಿಗೆ ಕೃಷಿ ಬೆಳೆಯುವ ಎಲ್ಲ ರೈತರಿಗೂ ಲಾಭದಾಯಕವಾಗಲಿ ಎಂದು ಹಾರೈಸಿದರು.
ಶಾಸಕರು ಹಲವು ಕೃಷಿ ಯೋಜನೆಗಳ ಸಹಾಯಧನ ರೈತರಿಗೆ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ತೋಟಗಾರಿಕಾ ವಿಜ್ಞಾನಿಗಳು, ಸಹಾಯಕ ತೋಟಗಾರಿಕಾ ಅಧಿಕಾರಿಗಳು, ವಲಯ ತೋಟಗಾರಿಕಾ ಅಧಿಕಾರಿಗಳು, ಹೋಬಳಿ ತೋಟಗಾರಿಕಾ ಅಧಿಕಾರಿಗಳು ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಕಾರ್ಯಕ್ರಮದ ಆಯೋಜಕರು ಹಾಗೂ ಕೃಷಿಕರು ಉಪಸ್ಥಿತರಿದ್ದರು.