ಇತ್ತೀಚಿನ ಸುದ್ದಿ
ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡುವುದು ಸರಕಾರದ ಪ್ರಮುಖ ಗುರಿ: ಗೃಹ ಸಚಿವ ಡಾ. ಜಿ. ಪರಮೇಶ್ವರ್
03/01/2024, 22:02
ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ
info.reporterkarnataka@gmail.ಕಂ
ಯುವಕ ಯುವತಿಯರು ಈ ದೇಶದ ಬಹು ದೊಡ್ಡ ಆಸ್ತಿ ಅವರನ್ನು ಸರಿದಾರಿಗೆ ನಡೆಸಿಕೊಂಡು ಹೋಗಬೇಕಾದ್ದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ. ಕರ್ನಾಟಕ ರಾಜ್ಯವನ್ನು ವ್ಯಸನ ಮುಕ್ತ ರಾಜ್ಯ ಮಾಡುವುದು ಸರ್ಕಾರದ ಪ್ರಮುಖ ಗುರಿ ಎಂದು ರಾಜ್ಯ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ ಅವರು ತಿಳಿಸಿದರು.
ಇಂದು ಬಂಗಾರಪೇಟೆ ತಾಲ್ಲೂಕಿನ ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬೂದಿಕೋಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಹೊಸ ಸರ್ಕಾರ ಬಂದ ನಂತರ ಕೋಲಾರ ಹಾಗೂ ಕೆಜಿಎಫ್ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಪ್ರಗತಿ ಪರಿಶೀಲನೆ ನಡೆಸಲು ನಿನ್ನೆ ತೀರ್ಮಾನ ಕೈಗೊಳ್ಳಲಾಯಿತು. ಇದರ ಭಾಗವಾಗಿ ಇಂದು ಬೂದಿಕೋಟೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಲಾಗುತ್ತಿದೆ.
ಈ ಹಿಂದೆ ಕೆಜಿಎಫ್ ಪೊಲೀಸ್ ಜಿಲ್ಲಾ ವ್ಯಾಪ್ತಿಯ ಮಾರಿಕುಪ್ಪಮ್ ಠಾಣೆಯನ್ನು ಇತ್ತೀಚೆಗೆ ಇತಿಹಾಸ ಪ್ರಸಿದ್ಧ ಬೂದಿಕೋಟೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ ಇದೆ, ಈ ಭಾಗದ ಜನ ಕಾನೂನು ಪಾಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಸಂತೋಷವಾಯಿತು ಎಂದು ಶ್ಲಾಘಿಸಿದರು.
ರಾಜ್ಯದಲ್ಲಿ ಪೊಲೀಸ್ ಇಲಾಖೆ ಬಹಳ ಶಿಸ್ತಿನಿಂದ ಕೆಲಸ ಮಾಡುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಲ್ಲಿ ಕೆಲವೇ ಗಂಟೆಗಳ ಒಳಗೆ ಆರೋಪಿಗಳನ್ನು ಬಂಧಿಸಲಾಗುತ್ತಿದೆ ಇದು ರಾಜ್ಯದ ಇತರೆ ಜಿಲ್ಲೆಗಳಿಗೆ ಮಾದರಿ ಎಂದು ತಿಳಿಸಿದರು.
ಪೊಲೀಸರು ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ, ಈವರೆಗೆ ಅವರು ವಾಸ ಮಾಡುವ ವಸತಿ ಗೃಹಗಳು ಸಹ ಅಷ್ಟೇನು ಚೆನ್ನಾಗಿರಲಿಲ್ಲ, ಇದನ್ನು ಗಮನಿಸಿದ ನಾನು ಮೊದಲ ಬಾರಿಗೆ ಗೃಹಮಂತ್ರಿ ಆಗಿದ್ದಾಗ ಹತ್ತು ಸಾವಿರ ಮನೆಗಳನ್ನು ಮಂಜೂರು ಮಾಡಿದೆ. ಈಗಲೂ ಇನ್ನಷ್ಟು ವಸತಿ ಗೃಹಗಳು ನಿರ್ಮಾಣ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಗೂ ಕ್ವಾರ್ಟಸ್್ರ ಮಂಜೂರು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬೂದಿಕೋಟೆಗೆ ಇಪ್ಪತ್ತು ನಾಲ್ಕು ವಸತಿ ಗೃಹಗಳು ಹಾಗೂ ಕೆಜಿಎಫ್ ಪೊಲೀಸ್ ಜಿಲ್ಲೆಗೂ ಸಹ ವಸತಿ ಗೃಹಗಳನ್ನು ಮಂಜೂರು ಮಾಡಲಾಗುವುದು ಎಂದರು.
ಪೊಲೀಸ್ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದಿದ್ದರೆ, ಸರ್ಕಾರ ಜವಾಬ್ದಾರಿ ಆಗುತ್ತದೆ, ಅದರಲ್ಲೂ ಗೃಹ ಸಚಿವರು ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದರು.
ಕರ್ನಾಟಕ ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಲಾಗಿದೆ. ಕಳೆದ ವರ್ಷದಲ್ಲಿ ರಾಜ್ಯದಲ್ಲಿ ನೂರು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದರು. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ ರವರು ಮಾತನಾಡಿ, ಡಾ.ಪರಮೇಶ್ವರ್ ರವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಆಸೆಯಿತ್ತು, ಈಗಲೂ ಸಮಯವಿದೆ ಅವರು ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಇದೆ. ನಮ್ಮ ಕೋರಿಕೆಯ ಮೇರೆಗೆ ಬೂದಿಕೋಟೆ ಪೊಲೀಸ್ ಠಾಣೆಯ ಕಟ್ಟಡ ನಿರ್ಮಾಣ ಮಾಡಿ ಇಂದು ಲೋಕಾರ್ಪಣೆ ಮಾಡಿದ್ದಾರೆ. ಈ ಹಿಂದೆ ಗೃಹಮಂತ್ರಿ ಆಗಿದ್ದಾಗ ಪೊಲೀಸ್ ವಸತಿ ನಿಲಯಗಳ ನಿರ್ಮಾಣ ಮಾಡಿದ್ದರು, ಈಗಲೂ ಸಿಬ್ಬಂದಿಯ ಕೊರತೆ ಇದೆ, ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುವ ಪೊಲೀಸರಿಗೆ ವಸತಿ ಸಮುಚ್ಚಯ ನಿರ್ಮಿಸಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಜಿಎಫ್ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಕಲಾ ಎಂ ಶಶಿಧರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಕರ್ನಾಟಕ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಕರ್ಯಗಳ ನಿಗಮದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಡಿಜಿಪಿ ಡಾ.ಕೆ.ರಾಮಚಂದ್ರರಾವ್, ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜು, ಬಂಗಾರಪೇಟೆ ತಹಶೀಲ್ದಾರ್ ರಶ್ಮಿ, ಬೂದಿಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.