ಇತ್ತೀಚಿನ ಸುದ್ದಿ
ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದಿಂದ 1402 ಕೋಟಿ ರೂ.ಚೆಕ್ ಸಿಎಂಗೆ ಹಸ್ತಾಂತರ
14/03/2025, 23:02

ಬೆಂಗಳೂರು (reporterkarnataka.com): ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕರ್ನಾಟಕ ಸರ್ಕಾರದ ಮಾಲೀಕತ್ವದ ಸಾರ್ವಜನಿಕ ಉದ್ದಿಮೆ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮವು ( ಈ ಹಿಂದೆ ಮೈಸೂರು ಮಿನರಲ್ಸ್ ಸಂಸ್ಥೆ) ರಾಜ್ಯ ಸರ್ಕಾರಕ್ಕೆ 1402 ಕೋಟಿ ರೂ.ಗಳ ಚೆಕ್ ಹಸ್ತಾಂತರಿಸಿತು.
ವಿಧಾನಸೌಧದಲ್ಲಿಂದು ರೋಣ ಕ್ಷೇತ್ರದ ಶಾಸಕ ಹಾಗೂ ನಿಗಮದ ಅಧ್ಯಕ್ಷರಾಗಿರುವ ಜಿ.ಎಸ್.ಪಾಟೀಲ‌್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆಕ್ ಹಸ್ತಾಂತರ ಮಾಡಿದರು.
ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಂಸ್ಥೆಯು 2023-24ನೇ ಸಾಲಿನಲ್ಲಿ ರೂ.1403.58 ಕೋಟಿಗಳ ವಹಿವಾಟು ನಡೆಸಿ ರೂ.867.33 ಕೋಟಿ ತೆರಿಗೆ ಪೂರ್ವ ಲಾಭ ಹಾಗೂ ರೂ.643.20 ಕೋಟಿ ತೆರಿಗೆ ನಂತರದ ಲಾಭ ಗಳಿಸಿದೆ.
2023-24ನೇ ಸಾಲಿನಲ್ಲಿ ಗಳಿಸಿರುವ ನಿವ್ವಳ ಲಾಭದ (Net profit) ಮೇಲೆ ಷೇರುದಾರರಿಗೆ ಅಂದರೆ ಸರ್ಕಾರಕ್ಕೆ ಶೇಕಡಾ 30 ಲಾಭಾಂಶ 191.43 ಕೋಟಿ ರೂ. ಹಾಗೂ ಆರ್ಥಿಕ ಇಲಾಖೆಯ 15.07.2024ರ ಆದೇಶದನ್ವಯ ಶೇಕಡಾ 30 ರಷ್ಟು ವಿಶೇಷ ಲಾಭಾಂಶ 1195.63 ಕೋಟಿ ರೂ.ಗಳನ್ನು
ನೀಡಲು ನಿಗಮದ 58ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಗಿತ್ತು.ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಆಯವ್ಯಯದಲ್ಲಿ ನಿಗದಿಪಡಿಸಲಾಗಿರುವ 15 ಕೋಟಿ ರೂ.ಸೇರಿ ಒಟ್ಟು 1402 ಕೋಟಿ ರೂ.ಗಳ ಚೆಕ್ ಮತ್ತು ಡಿ.ಡಿ.ಗಳನ್ನು ಇಂದು ಹಸ್ತಾಂತರ ಮಾಡಲಾಯಿತು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಮಣದೀಪ್ ಚೌಧರಿ, ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಹಾಗೂ ನಿಗಮದ ಅಧಿಕಾರಿಗಳು ಹಾಜರಿದ್ದರು.