11:47 PM Wednesday21 - May 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರಿನಲ್ಲಾದ ಮಳೆ ಹಾನಿಗೆ 25,000 ರೂ. ನಿಂದ 1 ಲಕ್ಷ ರೂ. ವರೆಗೆ… Karnataka Police | ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ. ಸಲೀಂ ನೇಮಕ ಭಾವೈಕ್ಯದ ಪ್ರತೀಕ ಎಂದೇ ಪ್ರಸಿದ್ಧರಾದ ಬ್ಯಾಷ್ಠಿಸ್ಟ್ ಡಿ’ಕುನ್ಹಾ ಇನ್ನಿಲ್ಲ: ನಾಳೆ ಬೆಂದೂರುನಲ್ಲಿ ಅಂತ್ಯಕ್ರಿಯೆ ಮೂಡಿಗೆರೆ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕರಡಿ ದಾಳಿ; ಇಬ್ಬರಿಗೆ ಗಂಭೀರ ಗಾಯ ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ: ಮಡಿದವರ ಆತ್ಮಕ್ಕೆ ಚಿರಶಾಂತಿ ಕೋರಿ ಮೇ… ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಕುಮ್ಮಿ ಆನೆಗಳ ಹಸ್ತಾಂತರ: ಆಂಧ್ರ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್… 1,600 ಕೋಟಿ ರೂ. ಕಾಮಗಾರಿ ರದ್ದು ಮಾಡದಿದ್ದರೆ ಬೆಂಗಳೂರಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ:… Ex chief Minister | ಬೆಂಗಳೂರನ್ನು ನೀರಲ್ಲಿ ಮುಳುಗಿಸಿದ ಸರ್ಕಾರ: ಬಸವರಾಜ ಬೊಮ್ಮಾಯಿ… Karnataka CM | ಬೆಂಗಳೂರಿನಲ್ಲಿ ಮಳೆ ಹಾನಿ: ಮೇ 21ರಂದು ಇಡೀ ದಿನ… GBA | ಬೆಂಗಳೂರಿಗೆ ಭಾರಿ ಮಳೆಯಿಂದ ಹಾನಿ: ವಾರ್ ರೂಮ್‌ನಲ್ಲಿ ಮಾಹಿತಿ ಪಡೆದ…

ಇತ್ತೀಚಿನ ಸುದ್ದಿ

Karnataka Police | ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಎಂ.ಎ. ಸಲೀಂ ನೇಮಕ

21/05/2025, 21:32

ಬೆಂಗಳೂರು (reporterkarnataka.com) : ಕರ್ನಾಟಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ಅಲೋಕ್ ಮೋಹನ್ ಅವರು ಇಂದು ಸರ್ಕಾರಿ ಸೇವೆಯಿಂದ ನಿವೃತ್ತರಾದ ಕಾರಣ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ಬೆಂಗಳೂರಿನ ಸಿಐಡಿ, ಆರ್ಥಿಕ ಅಪರಾಧಗಳು ಹಾಗೂ ವಿಶೇಷ ಘಟಕಗಳ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ. ಎ. ಸಲೀಂ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಡಾ. ಎಂ. ಎ. ಸಲೀಂ ಅವರ ಭಾರತೀಯ ಪೊಲೀಸ್ ಸೇವೆಯ (ಐಪಿಎಸ್) ಉನ್ನತ ವೃತ್ತಿಜೀವನವು 1993ರಲ್ಲಿ ಅವರು ಆಲ್ ಇಂಡಿಯಾ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಆಯ್ಕೆಯಾಗುವ ಮೂಲಕ ಪ್ರಾರಂಭವಾಯಿತು.
ಬಹುಮುಖ ಸಾಮರ್ಥ್ಯ ಮತ್ತು ಅನುಭವ ಉಳ್ಳ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 26 ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಮತ್ತು ಹಾಸನ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ, ಮೈಸೂರು ನಗರದ ಪೊಲೀಸ್ ಆಯುಕ್ತರಾಗಿ ಬೆಂಗಳೂರು ನಗರದ ವಿಶೇಷ: ಪೊಲೀಸ್ ಆಯುಕ್ತರಾಗಿ. ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿರುವ ಇವರು, ಭ್ರಷ್ಟಾಚಾರ ನಿಗ್ರಹ ಘಟಕದ, ಕರ್ನಾಟಕ ರಾಜ್ಯ ಪೊಲೀಸ್‌ನ ಅಪರಾಧ ವಿಭಾಗ ಮತ್ತು ಆಡಳಿತ ವಿಭಾಗಗಳಿಗೆ ಮುಖ್ಯಸ್ಥರಾಗಿಯೂ ಸಹ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಅವರು, ಅತ್ಯಂತ ಮಹತ್ವದ ಹಾಗೂ ಸೂಕ್ಷ್ಮವಾದ ಅಪರಾಧ ಪ್ರಕರಣಗಳ ತನಿಖೆಯನ್ನು ನಡೆಸುವ ಸಂಸ್ಥೆಯಾದ ‘ಅಪರಾಧ ತನಿಖಾ ಇಲಾಖೆ’ (ಸಿ.ಐ.ಡಿ) ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಡಾ. ಸಲೀಂ ಅವರು ಕರ್ನಾಟಕ ರಾಜ್ಯದಲ್ಲಿ ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಹಾಗೂ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮಹತ್ತರವಾದ ಕೊಡುಗೆಗಳನ್ನು ನೀಡಿದ್ದಾರೆ. ಅವರ ಗಣನೀಯ ಸಾಧನೆಗಳಲ್ಲಿ ಮಹಿಳೆಯರಿಗೆ (ಸ್ಪಂದನ), ಮಕ್ಕಳಿಗೆ (ಮಕ್ಕಳ ಸಹಾಯವಾಣಿ), ಹಾಗೂ ಹಿರಿಯ ನಾಗರಿಕರಿಗೆ (ಆಸರೆ ಮತ್ತು ಅಭಯ) ಸಹಾಯವಾಣಿ ಮತ್ತು ಬೆಂಬಲ ವ್ಯವಸ್ಥೆಗಳ ಸ್ಥಾಪನೆಯು ಸೇರಿವೆ. ಇಷ್ಟೇ ಅಲ್ಲದೇ, ಗರುಡ ಪ್ಯಾಟ್ರೋಲ್ ಪಡೆಯ ಸ್ಥಾಪನೆ, ವಿವಿಧ ಜಿಲ್ಲೆಗಳಲ್ಲಿ “ವಿಶೇಷ ಕಾರ್ಯ ಪಡೆ” (Special Action Force) ಗಳ ಅಭಿವೃದ್ಧಿ ಮತ್ತು ಸಂಚಾರ ನಿಯಮಗಳ ಜಾರಿ ತಂತ್ರಜ್ಞಾನದಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಮತ್ತು ಹಲವಾರು ವಿಭಿನ್ನ ಯೋಜನೆಗನ್ನು ಪ್ರಾರಂಭಿಸಿರುವ ಹೆಗ್ಗಳಿಕೆ ಇವರಿಗಿದೆ.
ಟ್ರಾಫಿಕ್ ನಿರ್ವಹಣೆಯಲ್ಲಿ ಡಾ. ಸಲೀಂ ಅವರು ಪ್ರವೀಣರೆನಿಸಿಕೊಂಡಿದ್ದು, ರಸ್ತೆಯ ಸುರಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಹಲವು ವಿನೂತನ ಉಪಕ್ರಮಗಳನ್ನು ರೂಪಿಸಿದ್ದಾರೆ. ಅವರ ಪ್ರಯತ್ನಗಳ ಫಲವಾಗಿ ಬೆಂಗಳೂರು ನಗರದಲ್ಲಿ 122 ಏಕಮುಖ ಸಂಚಾರದ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ರಸ್ತೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ “ಸೇಫ್ ರೂಟ್ಸ್ ಟು ಸ್ಕೂಲ್” ಯೋಜನೆ, ಸ್ವಯಂಚಾಲಿತ ಟ್ರಾಫಿಕ್ ದಂಡ ವ್ಯವಸ್ಥೆ (Automated Traffic Challaning System), ಲೋಕಲ್ ಏರಿಯಾ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಯೋಜನೆಗಳು (Local Area Traffic Management Plans), ಮತ್ತು ಸಂಚಾರ ನಿಯಮ ಜಾರಿಯಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಗಾಗಿ ‘Public Eye’ ಯೋಜನೆ ಮುಂತಾದ ಇನ್ನೂ ಹಲವಾರು ಪ್ರತಿಷ್ಠಿತ ಸಂಚಾರ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿರುವ ಗರಿಮೆ ಇವರಿಗೆ ಸಲ್ಲುತ್ತದೆ.
ಟ್ರಾಫಿಕ್ ನಿರ್ವಹಣೆಯಷ್ಟೇ ಅಲ್ಲದೇ, ಕ್ರಿಮಿನಲ್ ಪ್ರಕರಣಗಳ ತನಿಖೆ ಡಾ. ಸಲೀಂ ಅವರ ಅಚ್ಚುಮೆಚ್ಚಿನ ಕ್ಷೇತ್ರವಾಗಿದೆ. ಅತ್ಯುತ್ತಮ ತನಿಖಾ ಸಾಮರ್ಥ್ಯಗಳನ್ನು ಹೊಂದಿರುವ ಇವರು ಹಲವಾರು ಮಹತ್ವದ, ಸೂಕ್ಷ್ಮ ಮತ್ತು ಕ್ಲಿಷ್ಟಕರ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡಗಳನ್ನು (Special Investigation Teams SIT) ಯಶಸ್ವಿಯಾಗಿ ಮುನ್ನಡೆಸಿದ್ದಾರೆ.
ಸಲೀಂ ಅವರ ಮೇಲ್ವಿಚಾರಣೆಯಲ್ಲಿದ್ದ ಪ್ರಮುಖ ವಿಶೇಷ ತನಿಖಾ ತಂಡಗಳು: ಐಎಂಎ (IMA) ಬಹುಕೋಟಿ ವಂಚನೆ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡ ಈ ಪ್ರಕರಣದಲ್ಲಿ ಸುಮಾರು 74,000 ಜನರನ್ನು ವಂಚಿಸಲಾಗಿತ್ತು.
ಬಹು ಕೋಟಿಯ ಕ್ರಿಪ್ಟೋಕರೆನ್ಸಿ ಹ್ಯಾಕಿಂಗ್ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡ.
ಹಾಸನದಲ್ಲಿ ನಡೆದ ಬಹುಜನ ಲೈಂಗಿಕ ಹಲ್ಲೆ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅನುಸೂಚಿತ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಸಂಭವಿಸಿದ ₹94 ಕೋಟಿ ರೂಪಾಯಿಗಳ ಹಣದುರುಪಯೋಗ ಪ್ರಕರಣದ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡ.
ಪೊಲೀಸ್ ಉಪನಿರೀಕ್ಷಕರ ನೇಮಕಾತಿ ಹಗರಣದ ತನಿಖೆ ರಚಿಸಲಾದ ವಿಶೇಷ ತನಿಖಾ ತಂಡ.
ಶಾಸಕರೊಬ್ಬರ ವಿರುದ್ಧದ ಲೈಂಗಿಕ ಹಲ್ಲೆ ಮತ್ತು ಬೆದರಿಕೆ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡ.
ಡಾ. ಎಂ. ಎ. ಸಲೀಂ ಅವರ ಉನ್ನತ ಮಟ್ಟದ ಸೇವೆ, ಸಾಧನೆಗಳು, ಸಾರ್ವಜನಿಕ ಸ್ನೇಹಿ ಕಾರ್ಯಕ್ರಮಗಳನ್ನು ಗುರುತಿಸಿ ಅವರಿಗೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳಿಂದ ಗೌರವಿಸಲಾಗಿದೆ.
ಅವುಗಳಲ್ಲಿ ಪ್ರಮುಖವಾಗಿ: 2017ರಲ್ಲಿ “ಮಾನ್ಯ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್ ಪದಕ”, 2009ರಲ್ಲಿ ನೀಡಲಾದ “ಮಾನ್ಯ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಪದಕ” ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನವನ್ನು ಮಾದರಿಯಾಗಿ ಬಳಸಿಕೊಂಡ ಸಾಧನೆಗೆ ನೀಡಲಾಗುವ “ರಾಷ್ಟ್ರೀಯ ಇ-ಗವರ್ನನ್ಸ್ ಪ್ರಶಸ್ತಿ” (Award for e-Governance), 202100 ಗೃಹ ಸಚಿವಾಲಯದ ಬಿ.ಪಿ.ಆರ್&ಡಿ ವತಿಯಿಂದ ನೀಡಲಾಗುವ “ಕಮಾಂಡೇಷನ್ ಡಿಸ್ಕ್” ಪ್ರಶಸ್ತಿ, ರಸ್ತೆ ಸುರಕ್ಷತೆ ಅಭಿವೃದ್ಧಿಗೆ ಇವರ ಮಹತ್ವದ ಕೊಡುಗೆಗಾಗಿ “IRTE Prince Michael International Road Safety Award” ಪ್ರಶಸ್ತಿ ಮುಂತಾದ ಹಲವು ಗೌರವಗಳು ಇವರ ಮುಡಿಗೇರಿವೆ.
ಯು.ಎಸ್.ಎ ಯಲ್ಲಿನ ಲೂಸಿಯಾನಾ ರಾಜ್ಯ ಪೊಲೀಸ್ ಅಕಾಡೆಮಿ ವತಿಯಿಂದ ಭಯೋತ್ಪಾದನಾ ನಿಗ್ರಹ ನೆರವಿನ ಕಾರ್ಯಕ್ರಮದಲ್ಲಿ ಭಾರತೀಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ನಿಯೋಗಕ್ಕೆ ಡಾ. ಸಲೀಂ ರವರು ನೇತೃತ್ವವನ್ನು ವಹಿಸಿದ್ದರು. ಯು.ಕೆ ಯ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಡೆದ ಪೊಲೀಸ್ ಕಾರ್ಯಕಾರಿ ತರಬೇತಿ ಕಾರ್ಯಕ್ರಮವನ್ನು ಇವರು ಯಶಸ್ವಿಯಾಗಿ ಪೂರೈಸಿರುತ್ತಾರೆ.
ಪಠಿಸುವ ಹವ್ಯಾಸವಿರುವ ಇವರು ತಮ್ಮ ಬಹುಕಾಲವನ್ನು ಪುಸ್ತಕಗಳೊಂದಿಗೆ ಕಳೆಯುತ್ತಾರೆ. ಇವರು “ನಗರ ಪ್ರದೇಶಗಳಲ್ಲಿ ಸಂಚಾರ ನಿರ್ವಹಣೆ” ಎಂಬ ಒಂದು ಗ್ರಂಥವನ್ನೂ ಸಹ ರಚಿಸಿದ್ದಾರೆ. ಅಲ್ಲದೇ ಆಧುನಿಕ ಪೊಲೀಸ್ ವ್ಯವಸ್ಥೆಯ ಸಮಸ್ಯೆಗಳ ಬಗ್ಗೆ ಪ್ರಮುಖ ದಿನಪತ್ರಿಕೆಗಳಿಗೆ ಮತ್ತು ನಿಯತಕಾಲಿಕಗಳಿಗೆ ಇವರು ನಿಯಮಿತವಾಗಿ ಲೇಖನಗಳನ್ನು ಬರೆಯುವ ಹವ್ಯಾಸವುಳ್ಳವರಾಗಿದ್ದಾರೆ.
ಡಾ. ಸಲೀಂ ಅವರು ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪೊಲೀಸ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಚಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು