ಇತ್ತೀಚಿನ ಸುದ್ದಿ
ಕಾರ್ಕಳ ಥೀಮ್ ಪಾರ್ಕ್ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ: ತಜ್ಞರ ವರದಿ
14/07/2025, 21:54

ಕಾರ್ಕಳ(reporterkarnataka.com): ಇಲ್ಲಿನ ಉಮ್ಮಿಕಲ್ ಬೆಟ್ಟದ ಥೀಮ್ ಪಾರ್ಕ್ನಲ್ಲಿ ಶಿಲ್ಪಿ ಕೃಷ್ಣ ನಾಯ್ಕ ಅವರು ನಿರ್ಮಿಸಿದ ಪರಶುರಾಮನ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ ಎಂಬುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ.
ಶಿಲ್ಪಿ ಕೃಷ್ಣ ನಾಯಕ್ ಕ್ರಿಶ್ ಆರ್ಟ್ ವರ್ಲ್ಡ್ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್ನಲ್ಲಿ ಕಂಚಿನ ಪರಶುರಾಮ ಮೂರ್ತಿಯನ್ನು ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ ಹಣ ಪಡೆದು ಕೊಂಡು ಕಾಮಗಾರಿ ನಡೆಸುತ್ತಿದ್ದು, ನಂತರ ಕೃಷ್ಣ ನಾಯ್ಕ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ ಸರಕಾರಕ್ಕೆ ವಂಚನೆ ಮಾಡಿರುವುದಾಗಿ 2024ರ ಜೂ.21ರಂದು ಕಾರ್ಕಳದ ಕೃಷ್ಣ ಶೆಟ್ಟಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ನಡೆಸಿದ್ದು, ಶಿಲ್ಪಿ ಕೃಷ್ಣ ನಾಯ್ಕ ಕಂಚಿನ ಲೋಹದಿಂದ ಪರಶುರಾಮ ಮೂರ್ತಿಯ ಬದಲು ಹಿತ್ತಾಳೆ ಲೋಹದಿಂದ ನಿರ್ಮಾಣ ಮಾಡಿರುವುದು ತಜ್ಞರ ಪರಿಶೀಲನಾ ವರದಿ ಹಾಗೂ ತನಿಖೆಯಿಂದ ಸಾಬೀತಾಗಿದೆ. ಅದೇ ರೀತಿ ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ.ಕುಮಾರ್ ವರ್ಕ್ ಆರ್ಡರ್ನಲ್ಲಿದ್ದ ಷರತ್ತುಗಳನ್ನು ಪಾಲಿಸದೆ, 2023ರ ಅ.12ರಂದು ಪರಶುರಾಮ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಉಮ್ಮಿಕಲ್ ಬೆಟ್ಟದಿಂದ ತೆಗೆದುಕೊಂಡು ಹೋಗಿ ಅಲೆವೂರು ಗ್ರಾಮದ ಪ್ರಗತಿ ನಗರ ಎಂಬಲ್ಲಿರುವ ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿರುವ ಶೆಡ್ನಲ್ಲಿ 2024ರ ಫೆ.25ರ ತನಕ ಇರಿಸಿಕೊಂಡಿದ್ದರು.ಆದರೆ ಮೂರ್ತಿಯ ಸೊಂಟದಿಂದ ಮೇಲ್ಭಾಗವನ್ನು ಶಿಲ್ಪಿ ಕೃಷ್ಣ ನಾಯ್ಕಗೆ ಹಸ್ತಾಂತರ ಮಾಡಿದ್ದು, ಆತ ಅದನ್ನು ಬೆಂಗಳೂರಿಗೆ ಸಾಗಾಟ ಮಾಡಿರುವುದಾಗಿ ಅರುಣ್ ಕುಮಾರ್ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಈ ಮೂಲಕ ಆರೋಪಿಗಳಾದ ಶಿಲ್ಪಿ ಕೃಷ್ಣ ನಾಯ್ಕ, ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹಾಗೂ ಇಂಜಿನಿಯರ್ ಸಚಿನ್ ವೈ.ಕುಮಾರ್ ಅಪರಾಧಿಕ ಒಳಸಂಚು ಮತ್ತು ನಂಬಿಕೆ ದ್ರೋಹ ಮತ್ತು ವಂಚನೆ ಎಸಗಿ, ಸಾಕ್ಷಿ ನಾಶ ಮಾಡಿರುವುದು ಕಂಡುಬಂದಿದೆ. ಅವರ ವಿರುದ್ಧ ಕಲಂ. 420, 409, 201, 120 (ಬಿ) ಜೊತೆಗೆ 34 ಐಪಿಸಿ ಯಂತೆ 2031 ಪುಟಗಳ ದೋಷಾರೋಪಣಾ ಪಟ್ಟಿಯನ್ನು ತಯಾರಿಸಿ ಪೊಲೀಸರು ಕಾರ್ಕಳದ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.