ಇತ್ತೀಚಿನ ಸುದ್ದಿ
ಕಾರ್ಕಳ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಮೃತ್ಯು
25/11/2021, 23:32

ಕಾರ್ಕಳ(reporterkarnataka.com): ಬುಧವಾರ ರಾತ್ರಿ ಕಾರ್ಕಳ ಕುಕ್ಕುಂದೂರು ಗ್ರಾಮದ ದುರ್ಗಾನಗರ ಅಶ್ವಥ ಕಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.
ಮೃತರನ್ನು ಮಹಮ್ಮದ್ ರಫೀಕ್ ಎಂದು ಗುರುತಿಸಲಾಗಿದೆ. ರಫೀಕ್ ನಿನ್ನೆ ರಾತ್ರಿ ದುರ್ಗಾನಗರ ಅಶ್ವಥಕಟ್ಟೆ ಹತ್ತಿರ ವಾಹನ ನಿಲ್ಲಿಸಿ ರಸ್ತೆ ದಾಟಲು ನಿಂತುಕೊಂಡಿದ್ದರು. ಈ ವೇಳೆ ಅರವಿಂದ ಕಾಮತ್ ಎಂಬವರು ಉಡುಪಿ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ರಫೀಕ್ ಗೆ ಡಿಕ್ಕಿ ಹೊಡೆದಿದ್ದರು.
ಕಾರು ಡಿಕ್ಕಿಯಾದ ಪರಿಣಾಮ ರಸ್ತೆಗೆ ಬಿದ್ದ ಮಹಮ್ಮದ್ ರಫೀಕ್ ಅವರ ಹಿಂಬದಿ ತಲೆಗೆ ಗಂಭೀರ ಗಾಯವಾಗಿದ್ದು, ಅವರನ್ನು ಚಿಕಿತ್ಸೆಗಾಗಿ ತಕ್ಷಣವೇ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಫೀಕ್ ನ.25 ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ