ಇತ್ತೀಚಿನ ಸುದ್ದಿ
ಕಾರ್ಕಳ: ಮಾ.10ರಿಂದ 20 ರವರೆಗೆ ಜನಪದ – ಸಾಹಿತ್ಯ – ಸಂಗೀತ – ನೃತ್ಯ – ಪ್ರವಾಸೋದ್ಯಮ ವೈಭವ
02/03/2022, 20:46
ಕಾರ್ಕಳ(reporterkarnataka.com): ಕೃಷ್ಣನ ನಾಡು ಎಂದೇ ಪ್ರಖ್ಯಾತಿ ಪಡೆದ ಉಡುಪಿ ಜಿಲ್ಲೆಯ
ಕಾರ್ಕಳದ ವಿಶಿಷ್ಟ ಸಂಸ್ಕೃತಿಯನ್ನು – ಸ್ಥಳಿಯ ಆಹಾರವನ್ನು ನಾಡಿಗೆ ಪರಿಚಯಿಸುವ, ಭಾಷೆ – ಕಲೆ ಸಂಸ್ಕೃತಿಯನ್ನು ಅನಾವರಣಗೊಳಿಸುವ, ಸ್ಥಳಿಯ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ದೃಷ್ಥಿಯಿಂದ ಮಾ.10ರಿಂದ 20ರವರೆಗೆ ಕಾರ್ಕಳ ಉತ್ಸವವನ್ನು ಆಯೋಜಿಸಲಾಗಿದೆ.
ಕೊರೊನಾ 3ನೇ ಅಲೆಯ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಈ ಕಾರ್ಕಳ ಉತ್ಸವಕ್ಕೆ ಇದೀಗ ಕಾಲ ಕೂಡಿ ಬಂದಿದೆ. ಸ್ಥಳೀಯ ಶಾಸಕ ಹಾಗೂ ರಾಜ್ಯದ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಅವರ ಕನಸಿನ ಕೂಸಾದ ಈ ಉತ್ಸವಕ್ಕೆ ಮಾ.೧೦ ರಂದು ಇಲ್ಲಿನ ಕೋಟಿ ಚೆನ್ನಯ್ಯ ಥೀಂ ಪಾರ್ಕ್‌ನಲ್ಲಿ ಯಕ್ಷರಂಗಾಯಣಕ್ಕೆ ಭೂಮಿ ಪೂಜೆಯ ಮೂಲಕ ಚಾಲನೆ ನೀಡಲಾಗುತ್ತದೆ .
10 ದಿನಗಳ ಕಾಲ ಈ ಸಾಂಸ್ಕೃತಿಕ ಉತ್ಸವವು ಕೋಟಿ ಚೆನ್ನಯ್ಯ ಥೀಂ ಪಾರ್ಕ್, ಗಾಂಧಿ ಮೈದಾನ ಹಾಗು ಸ್ವರಾಜ್ ಮೈದಾನಗಳಲ್ಲಿ ಎಲ್ಲಾ ರಂಗಗಳ ವಿಭಿನ್ನತೆಯನ್ನು ಪ್ರದರ್ಶಿಸುವಂತೆ ಆಯೋಜಿಸಲಾಗುತ್ತಿದೆ.
* ವಿಭಿನ್ನತೆ ಏನೇನು?
ಈ ಉತ್ಸವವು ಕೇವಲ ನೃತ್ಯ ಸಂಗೀತ ಸಾಂಸ್ಕೃತಿಕ ಪ್ರದರ್ಶನಕ್ಕೆ ಸೀಮಿತವಾಗಿಲ್ಲ. ಹತ್ತಾರು ವೈಶಿಷ್ಚ್ಯಗಳ ಆಗರವಾಗಿದೆ. ಹೆಲಿಕಾಪ್ಟರ್ ಮೂಲಕ ಪಶ್ಚಿಮಘಟ್ಟಗಳ ಹಸಿರಿನ ನಡುವೆ ವಿಹಾರ, ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ನಾಟಕಗಳ ರಸದೌತಣ, ತುಳು ಸಾಹಿತ್ಯ ಅಕಾಡೆಮಿಯಿಂದ ತುಳುನಾಡ ಜಾನಪದ ವೈಭವ, ದೇಶದೆಲ್ಲೆಡೆಯಿಂದ ಬರುವ ತಂಡಗಳ ಗಾಳಿಪಟಗಳ ಹಾರಾಟ, ದೇಶವಿದೇಶದ ಶ್ವಾನಗಳ ಪ್ರದರ್ಶನ, ಗೂಡುದೀಪಗಳ ಪ್ರದರ್ಶನಗಳು ಕೂಡ ಇಲ್ಲಿವೆ.
ಅಲ್ಲದೇ ಕನ್ನಡ ಸಾಹಿತ್ಯ ವಿಚಾರ ಸಂಕಿರಣ, ಚಲನ ಚಿತ್ರೋತ್ಸವ, ಕರಕುಶಲ ವಸ್ತುಗಳ ಮೇಳ, ,ಚಿತ್ರಸಂತೆ, ಆಹಾರೋತ್ಸವ, ಗುಜರಾತ್, ಮಧ್ಯಪ್ರದೇಶ ಹಾಗು ಒಡಿಸ್ಸಾದ ಕಲಾವಿದರಿಂದ ಜನಪದ ನೃತ್ಯ, ಯಕ್ಷ ವೈಭವ, ಗಾನ ನಾಟ್ಯ ಹಾಸ್ಯ ಮತ್ತು ತಾಳಮದ್ದಳೆ ಕಾರ್‍ಯಕ್ರಮಗಳು, ಹೆಸರಾಂತ ಹಿನ್ನೆಲೆಗಾಯಕರಿಂದ ದೇಶಭಕ್ತಿಗೀತೆಗಳು, ಸಿಡಿಮದ್ದು ಪ್ರದರ್ಶನಗಳು ಈ ಉತ್ಸವದಲ್ಲಿವೆ.
ಉತ್ಸವವು ಪ್ಲಾಸ್ಟಿಕ್ ಮುಕ್ತವಾಗಿರಲಿದೆ:
10 ದಿನಗಳ ಕಾಲ ನಡೆಯುವ ಈ ಇಡೀ ಉತ್ಸವವನ್ನು ಪ್ಲಾಸ್ಟಿಕ್ ಮುಕ್ತವಾಗಿರುವಂತೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಕಾರ್ಕಳ ತಾಲೂಕು ವ್ಯಾಪ್ತಿಯ ಪ್ರತಿಯೊಂದು ಮನೆ, ವಾಣಿಜ್ಯ ಸಂಕೀರ್ಣಗಳು, ಮಂದಿರ, ಮಸೀದಿ, ಬಸದಿ, ಚರ್ಚ್ ಗಳು ಸೇರಿದಂತೆ ಎಲ್ಲಾ ಧಾರ್ಮೀಕ ತಾಣಗಳು, ಹಳ್ಳಿ,ಗ್ರಾಮ, ಪೇಟೆ ಪಟ್ಟಣಗಳಲ್ಲಿ ವಿಶೇಷ ವಿದ್ಯುತ್ ದೀಪಾಲಂಕರ ನಡೆಯಲಿದೆ.
10,000 ಕಲಾವಿದರ ಮೆರವಣಿಗೆ ಮಾ. ೧೮ರಂದು ಉತ್ಸವದಂಗವಾಗಿ ವಿಭಿನ್ನತೆಯ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಬಂಡಿಮಠ ಮೈದಾನದಿಂದ ಆರಂಭವಾಗಿ ಸ್ವರಾಜ್ ಮೈದಾನದವರೆಗೆ ದೇಶದಾದ್ಯಂತದಿಂದ ನೂರಾರು ಕಲಾತಂಡಗಳಲ್ಲಿ 10,000 ಮಂದಿ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಪ್ರತಿನಿಧಿಸುವಂತೆ ಪ್ರತಿ ತಂಡದಲ್ಲಿ ೭೫ ಮಂದಿ ಕಲಾವಿದರು ಭಾಗವಹಿಸಲಿದ್ದಾರೆ. ಕಾರ್ಕಳದ ಜನರ ಪಾಲಿಗೆ ಇದೊಂದು ಹಿಂದೆಂದೂ ಕಂಡಿರದ ಅನುಭವವಾಗಿದೆ. ಆದ್ದರಿಂದ ಮನೆ, ಮನೆಗಳಲ್ಲಿ ಎಲ್ಲರೂ ಮೆಹಂದಿಯನ್ನಿಟ್ಟು ಈ ಮೆರವಣಿಗೆಗೆ ಆಗಮಿಸಿ ಸಾಂಸ್ಕೃತಿಕ ವೈಭವವನ್ನು ತುಂಬಬೇಕು
—- ವಿ. ಸುನೀಲ್ ಕುಮಾರ್
ಕನ್ನಡ ಮತ್ತು ಸಂಸ್ಕೃತಿ ಸಚಿವರು