ಇತ್ತೀಚಿನ ಸುದ್ದಿ
Kalladka | ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರವೇಶೋತ್ಸವ: ‘ಆಗತ-ಸ್ವಾಗತ 2025’
15/08/2025, 22:19

ಬಂಟ್ವಾಳ(reporterkarnataka.com): ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2025-26ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ‘ಆಗತ-ಸ್ವಾಗತ 2025’ ಬುಧವಾರ ಆಜಾದ್ ಭವನದಲ್ಲಿ ನಡೆಯಿತು.
ಗಣ್ಯರಿಂದ ದೀಪ ಪ್ರಜ್ವಲನ, ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ, ಬಳಿಕ ಗಣ್ಯ ಅತಿಥಿಗಳು ಅಗ್ನಿಹೋತ್ರಕ್ಕೆ ಹವಿಸ್ಸನ್ನು ಅರ್ಪಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಆರತಿ ಬೆಳಗಿ, ಕುಂಕುಮ ಹಚ್ಚಿ ಸ್ವಾಗತಿಸಲಾಯಿತು. ವಿದ್ಯಾರ್ಥಿಗಳು ಹಿರಿಯರ ಆಶೀರ್ವಾದ ಪಡೆದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಸಂಸ್ಕೃತಿ ಆಧಾರಿತ ಮಹರ್ಷಿ ಶಿಕ್ಷಣದ ಅಗತ್ಯತೆ ಮತ್ತು ಅನಿವಾರ್ಯತೆಯನ್ನು ತಿಳಿಸಿದರು.
ವಿದ್ಯಾ ಕೇಂದ್ರದಲ್ಲಿ ಮಾನವೀಯ ಮೌಲ್ಯಗಳನ್ನೊಳಗೊಂಡ ಶಿಕ್ಷಣ ನೀಡುತ್ತಿರುವುದಾಗಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಪಿ. ಎಲ್. ಧರ್ಮ, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ, ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ಪುತ್ತೂರು ಉದ್ಯಮಿ ಬಲರಾಮ ಆಚಾರ್ಯ, ರಾಜಿ ಬಲರಾಮ ಆಚಾರ್ಯ, ಹಾರ್ದಿಕ್ ಹರ್ಬಲ್ಸ್ ಕೆದಿಲದ ಮುರಳೀಧರ, ಮೀರಾ ಮುರಳಿ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದರು.
ಕುಲಪತಿಗಳಾದ ಡಾ. ಧರ್ಮ ಮಾತನಾಡಿ, ಇಲ್ಲಿನ ಶಿಕ್ಷಣದಿಂದ ಕೌಶಲ್ಯವನ್ನು ಪಡೆಯುವ ಜೊತೆಗೆ ಸಮಾಜದಲ್ಲಿ ಸಹಬಾಳ್ವೆ ನಡೆಸುತ್ತಾ ವಿನಯವಂತಿಕೆಯಿಂದ ಜೀವನ ನಡೆಸಬೇಕು. ಮುಂದೆ ವಿದ್ಯಾಕೇಂದ್ರಕ್ಕೆ ಸ್ಥಿರವಾದ ಸ್ತಂಭದಂತಿದ್ದು ಸಹಕಾರ ನೀಡಿರಿ ಎಂಬುದಾಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರ ಸೇವಿಕಾ ಸಮಿತಿಯ ದಕ್ಷಿಣ ಪ್ರಾಂತದ ಮಾರ್ಗದರ್ಶಕ ಮಂಡಳಿಯ ಸದಸ್ಯೆ ಡಾ. ಕಮಲಾ ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಪದವಿ ಕಾಲೇಜು ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರಕಟ್ಟೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಲೇಜಿನ ಮಾಹಿತಿ ಕೈಪಿಡಿ “ಶಿಕ್ಷಣ ದರ್ಶಿನಿ” ಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ವಿದ್ಯಾರ್ಥಿನಿಯರಾದ ಧನುಶ್ರೀ ವಂದಿಸಿ, ದಿವ್ಯ ಲಕ್ಷ್ಮೀ ನಿರೂಪಿಸಿದರು.