ಇತ್ತೀಚಿನ ಸುದ್ದಿ
ದೇಶದ ಸಂಸ್ಕೃತಿಯ ಜತೆಗೆ ದುರ್ಬಲರ ಶ್ರೇಯೋಭಿವೃದ್ದಿಗೆ ಶಿಕ್ಷಣ ಬಳಕೆಯಾಗಬೇಕು: ಕಲ್ಲಡ್ಕದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್
07/12/2024, 23:54
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ದೇಶದಲ್ಲಿ ಇತ್ತೀಚೆಗಷ್ಟೇ ಹೊಸ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಆದರೆ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಈ ಹಿಂದೆಯೇ ಅದೇ ಮಾದರಿಯ ಶಿಕ್ಷಣ ಜಾರಿಯಲ್ಲಿದೆ. ಇಂತಹ ಅದ್ಬುತ ಕಲ್ಪನೆಯನ್ನು ಮೂಡಿಸಿದ ವಿದ್ಯಾಸಂಸ್ಥೆಯ ಎಲ್ಲರಿಗೂ ಅಭಿನಂದನೆಗಳು ಎಂದು ಆರೆಸ್ಸೆಸ್ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಹೇಳಿದರು.
ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವವನ್ನು ಶ್ರೀ ರಾಮ ದೇವರಿಗೆ ಕ್ಷೀರಾಭಿಷೇಕ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ಶಿಕ್ಷಣ ನೀತಿಯು ಸರ್ವರ ವಿಕಾಸ, ಸಮಗ್ರ ವಿಕಾಸ ದೃಷ್ಟಿಯಿಂದ ಪಂಚ ಯೋಚನೆಗಳನ್ನು ಅಳವಡಿಸಿಕೊಂಡು ಅನುಷ್ಠಾನಗೊಳ್ಳುತ್ತಿದೆ.
ಶಿಕ್ಷಿತ ಮನುಷ್ಯ ತನ್ನ ಕುಟುಂಬ, ಬಂಧು- ಬಳಗವನ್ನು ಸಲಹುವ ಜೊತೆಗೆ ಅನ್ಯರಿಗೆ ಜ್ಞಾನವನ್ನು ನೀಡಲು ಅದನ್ನು ಬಳಸಬೇಕಿದೆ. ಪುಸ್ತಕ ಓದಿನ ಜೊತೆ ಎಲ್ಲರನ್ನೂ ಪ್ರೀತಿಸುವ ಗುಣವೂ ಅಗತ್ಯವಾಗಿದೆ ಎಂದು ಅವರು ನುಡಿದರು.
ದೇಶದ ಸಂಸ್ಕೃತಿಯ ಜೊತೆಗೆ ದುರ್ಬಲರ ಶ್ರೇಯೋಭಿವೃದ್ದಿಗೆ ಶಿಕ್ಷಣ ಬಳಕೆಯಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಾಮ ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ,ಜಗತ್ತಿನ ಹಿಂದೂಗಳ ನಾಯಕ ಡಾ. ಮೋಹನ್ ಜೀ ಭಾಗವತ್ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಹರೀಶ್ ಪೂಂಜ, ಉಮಾನಾಥ ಕೋಟ್ಯಾನ್, ಸುರೇಶ್ ಶೆಟ್ಟಿ ಗುರ್ಮೆ, ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ನಾಗರಾಜ ಶೆಟ್ಟಿ,ಪ್ರಮೋದ್ ಮದ್ವರಾಜ್,ಮುಂಬೈ ಉದ್ಯಮಿಗಳಾದ ಅಜಿತ್ ಕುಮಾರ್ ಎಸ್.ಜೈನ್,ಬಿ.ನಾರಾಯಣ, ಮನೋಜ್ ಕುಮಾರ್, ಬೆಳಗಾವಿಯ ಉದ್ಯಮಿ ರಾಧೇಶ್ಯಾಮ್ ಶ್ರೀವಲ್ಲಭ , ಬೆಂಗಳೂರು ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ ಬಂಜಾರ, ರವಿಕಲ್ಯಾಣ ರೆಡ್ಡಿ, ನವೀನ್ ಗೋಯಲ್, ಶ್ರೀರಾಮವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮುಖಂದ್, ವಾಮನ ಶೆಣೈ,ತಾಮ ರವೀಂದ್ರ , ಕಜಂಪಾಡಿ ಸುಬ್ರಹ್ಮಣ್ಯ ಭಟ್ ,ಎಸ್.ಆರ್. ರಂಗಮೂರ್ತಿ,ಸುದೀರ್,ಭರತ್,ತಿಪ್ಪೇಸ್ವಾಮಿ,ಕೈಲಾಸ್,ಗುರುಪ್ರಸಾದ್,ನಂದೀಶ್, ಜಯಪ್ರಕಾಶ್, ನಾರಾಯಣ ಶೆಣೈ, ಪಟ್ಟಾಭಿರಾಮ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ವಸಂತ ಮಾಧವ ಸ್ವಾಗತಿಸಿದರು. ರಾಧಾಕೃಷ್ಣ ಅಡ್ಯಂತಾಯ ಕಾರ್ಯಕ್ರಮ ನಿರೂಪಿಸಿದರು.