2:21 AM Monday20 - January 2025
ಬ್ರೇಕಿಂಗ್ ನ್ಯೂಸ್
ನಂಗೆ ಯಾರ ಜೊತೆಯೂ ಭಿನ್ನಾಭಿಪ್ರಾಯವಿಲ್ಲ, ಪಕ್ಷಕ್ಕಾಗಿ ತ್ಯಾಗ ಮಾಡಿಕೊಂಡೇ ಬಂದಿದ್ದೇನೆ: ಡಿಸಿಎಂ ಡಿ.ಕೆ.… ಮಹಾತ್ಮ ಗಾಂಧಿ ರಿಯಲ್ ಗಾಂಧಿ, ಸೋನಿಯಾ, ರಾಹುಲ್, ಪ್ರಿಯಾಂಕ ಅವರು ನಕಲಿ ಗಾಂಧಿಗಳು:… ಬೆಂಗಳೂರು ಐಟಿ ಹಬ್, ವ್ಯೂಹಾತ್ಮಕ ನಗರ; ಇಲ್ಲೇ ಐಕ್ಯಾಟ್ ಕೇಂದ್ರ ಖಚಿತ: ಕೇಂದ್ರ… ಮುಡಾ ಕುರಿತು ಇಡಿ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ 5ರ ಹರೆಯದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಸೂಕ್ತ ಕ್ರಮಕ್ಕೆ ಜನವಾದಿ ಮಹಿಳಾ… ಮಂಗಳೂರಿನ ಜನತೆಗೆ ಕಲುಷಿತ ನೀರು ಪೂರೈಕೆ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ… ಭಾರತಿ ಏರ್‌ಟೆಲ್ ಮತ್ತು ಬಜಾಜ್ ಫೈನಾನ್ಸ್ ನಿಂದ ಹಣಕಾಸಿನ ಸೇವೆಗಳಿಗಾಗಿ ಅತಿದೊಡ್ಡ ಡಿಜಿಟಲ್… ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ…

ಇತ್ತೀಚಿನ ಸುದ್ದಿ

ಕಳೆದ 4 ವರ್ಷಗಳಲ್ಲಿ ರಾಜ್ಯದ ರೈತರಿಗೆ 2 ಲಕ್ಷ ಕೋಟಿ ನಷ್ಟ: ಮಾಜಿ ಸಿಎಂ ಸಿದ್ದರಾಮಯ್ಯ

14/09/2022, 13:53

ಬೆಂಗಳೂರು(reporterkarnataka.com): ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ರೈತರಿಗೆ ಸುಮಾರು ಎರಡು ಲಕ್ಷ ಕೋಟಿ ನಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಸರಕಾರ ವಿತರಣೆ ಮಾಡಿರುವ ಒಟ್ಟು ಪರಿಹಾರದ ಮೊತ್ತ 2,134 ಕೋಟಿ ರೂ.ಮಾತ್ರ. ಎನ್‍ಡಿಆರ್‍ಎಫ್ ನಿಯಮಗಳ ಪ್ರಕಾರ ಬಹಳಷ್ಟು ಜನರಿಗೆ ಸೂಕ್ತ ಪರಿಹಾರ ಸಿಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ನಿಲುವಳಿ ಸೂಚನೆಯಡಿ ತಮ್ಮ ಮಾತನ್ನು ಮುಂದುವರೆಸಿದ ಅವರು, ಬೆಳೆ ಪರಿಹಾರ ಪಡೆಯಲು ಶೇ.33ರಷ್ಟು ಬೆಳೆ ನಷ್ಟ ಆಗಿರಲೇಬೇಕು. ಬೆಳೆ ನಷ್ಟ ಪರಿಹಾರ ಪಡೆಯಲು ಕೃಷಿ ಭೂಮಿಯನ್ನು 2.5 ಹೆಕ್ಟೇರ್ ಗೆ  ಮಿತಿಗೊಳಿಸಲಾಗಿದೆ. ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಂಡು, ಕೊನೆ ಕ್ಷಣದಲ್ಲಿ ನೈಸರ್ಗಿಕ ಕಾರಣಗಳಿಗಾಗಿ ಬಿತ್ತನೆ ಮಾಡಲು ಸಾಧ್ಯವಾಗದಿರುವವರಿಗೂ ಪರಿಹಾರ ನೀಡುವಂತೆ ಎಸ್‍ಡಿಆರ್‍ಎಫ್ ನಿಯಮಗಳಿಗೆ ತಿದ್ದುಪಡಿ ತರಬೇಕು ಎಂದರು.

2019ರಿಂದ ಈವರೆಗೆ 3,40,543 ಮನೆಗಳು ಹಾನಿಯಾಗಿವೆ, ಇದರಿಂದ 16,649 ಕೋಟಿ ರೂ.ನಷ್ಟವಾಗಿದೆ. ಈ ವರ್ಷ 24,408 ಮನೆಗಳು ಹಾನಿಯಾಗಿವೆ. 2019ರಲ್ಲಿ ರಾಜ್ಯ ಸರಕಾರ ಕೇಂದ್ರಕ್ಕೆ ನೀಡಿರುವ ಮನವಿಯಲ್ಲಿ 2,47,628 ಮನೆಗಳಿಗೆ ಪ್ರವಾಹದಿಂದ ಹಾನಿಯಾಗಿದೆ ಎಂದಿದೆ. ಈ ನಷ್ಟಕ್ಕೆ 9,622 ಕೋಟಿ ರೂ.ಪರಿಹಾರ ನೀಡಬೇಕಾಗಿತ್ತು. ವಸತಿ ಇಲಾಖೆ 2,029 ಕೋಟಿ ರೂಪಾಯಿಗಳನ್ನು ಮಾತ್ರ ಪರಿಹಾರವಾಗಿ ನೀಡಲಾಗಿದೆ ಎಂದು ಹೇಳಿದೆ ಎಂದು ಅವರು ತಿಳಿಸಿದರು.

ಈ ಮೊತ್ತದಲ್ಲಿ ಸುಮಾರು 1,34,936 ಜನರಿಗೆ ಮಾತ್ರ ಪರಿಹಾರ ದೊರೆಯುತ್ತದೆ. 2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡ ಸುಮಾರು 1 ಲಕ್ಷಕ್ಕೂ ಅಧಿಕ ಮನೆಗಳಿಗೆ ಪರಿಹಾರ ನೀಡಿಲ್ಲ. 2021ರಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೀಡಾದ 15,238 ಮನೆಗಳಿಗೆ ಈವರೆಗೆ ಪರಿಹಾರ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಹಿಂದಿನ ಮೂರು ವರ್ಷಗಳಲ್ಲಿ 93.52 ಲಕ್ಷ ಎಕರೆ ಬೆಳೆ ನಷ್ಟವಾಗಿದೆ. ಈ ವರ್ಷದ ಬೆಳೆ ನಷ್ಟವನ್ನೂ ಸೇರಿಸಿದರೆ ಸುಮಾರು 1 ಕೋಟಿ 19 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾದಂತೆ ಆಗುತ್ತದೆ, ಇವುಗಳಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಕಳೆದ 4 ವರ್ಷಗಳಲ್ಲಿ ರಾಜ್ಯದ ರೈತರಿಗೆ ಸುಮಾರು 2 ಲಕ್ಷ ಕೋಟಿ ನಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಸರಕಾರ ವಿತರಣೆ ಮಾಡಿರುವ ಒಟ್ಟು ಪರಿಹಾರದ ಮೊತ್ತ 2,134 ಕೋಟಿ ರೂ.ಗಳು ಎಂದು ಅವರು ಮಾಹಿತಿ ನೀಡಿದರು.

ಫಲಾನುಭವಿಗಳಿಗೆ ಆರ್.ಟಿ.ಜಿ.ಎಸ್.ಮೂಲಕ ಹಣ ಕಳುಹಿಸುವ ತಂತ್ರಾಂಶವನ್ನು ಬಿಜೆಪಿ ಸರಕಾರವೇ ಆರಂಭ ಮಾಡಿದ್ದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ನಮ್ಮ ಸರಕಾರದ 2018-19ರ ಬಜೆಟ್‍ನಲ್ಲಿ ಕಂದಾಯ ಇಲಾಖೆಯ ಸಾಧನೆಗಳಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಪರಿಹಾರ ಎಂಬ ಹೊಸ ತಂತ್ರಾಂಶದ ಮೂಲಕ 2,450 ಕೋಟಿ ರೂಪಾಯಿ ಇನ್‍ಪುಟ್ ಸಬ್ಸಿಡಿಯನ್ನು ಒಟ್ಟು 35 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಆಧಾರ್ ವ್ಯವಸ್ಥೆ ಮೂಲಕ ಜಮಾ ಮಾಡಲಾಗಿದೆ ಎಂದು ಹೇಳಿದ್ದೆವು. ಅಗತ್ಯವಿದ್ದವರು ಈ ಮಾಹಿತಿ ಪಡೆದುಕೊಳ್ಳಲು ಅವಕಾಶ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ಮುಂಗಾರಿನಲ್ಲಿ ಬಿತ್ತನೆಯಾಗಬೇಕಿದ್ದ ಒಟ್ಟು ಬೆಳೆಗಳಲ್ಲಿ ಕಾರಣಾಂತರಗಳಿಂದ ಸುಮಾರು 10 ರಿಂದ 12 ಲಕ್ಷ ಪ್ರದೇಶದಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಸಾಮಾನ್ಯವಾಗಿ 10 ಲಕ್ಷದ 62 ಸಾವಿರ ಹೆಕ್ಟೇರ್‍ನಲ್ಲಿ ಭತ್ತ ಬೆಳೆಯುವ ನಿರೀಕ್ಷೆ ಇತ್ತು, ಆದರೆ ಬಿತ್ತನೆಯಾದದ್ದು 8.3 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ. ಜೋಳ ಸುಮಾರು 1.24 ಲಕ್ಷ ಹೆಕ್ಟೇರ್ ಬದಲಾಗಿ 59 ಸಾವಿರ ಹೆಕ್ಟೇರ್‍ನಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ಅವರು ತಿಳಿಸಿದರು.

ಸಿರಿಧಾನ್ಯ 45 ಸಾವಿರ ಹೆಕ್ಟೇರ್ ಬದಲು 28 ಸಾವಿರ ಹೆಕ್ಟೇರ್ ಆಗಿದೆ. ತೊಗರಿ 16 ಲಕ್ಷ ಹೆಕ್ಟೇರ್ ಬದಲಾಗಿ 13 ಲಕ್ಷ ಹೆಕ್ಟೇರ್, ರಾಗಿ 7.17 ಲಕ್ಷ ಹೆಕ್ಟೇರ್ ಬದಲಾಗಿ 4.7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರ ಮುಂತಾದವುಗಳನ್ನು ಖರೀದಿ ಮಾಡಿ, ಬಿತ್ತನೆ ಮಾಡಲಾಗದೆ ನಷ್ಟಕ್ಕೀಡಾಗಿದ್ದಾರೆ, ಸರಕಾರ ಈ ಎಲ್ಲ ರೈತರಿಗೂ ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಕೊಡಗು ಭಾಗದಲ್ಲಿ ಕಾಫಿ, ಕಾಳು ಮೆಣಸು ಬೆಳೆ ನಷ್ಟವಾಗಿದೆ. ಅನೇಕ ಕಡೆ ಭೂ ಕುಸಿತ ಉಂಟಾಗಿ ಜನ ಮನೆಗಳನ್ನು ತೊರೆದು ಬೇರೆ ಕಡೆ ಆಶ್ರಯ ಪಡೆದುಕೊಂಡಿದ್ದಾರೆ. ಶಾಲೆಯ ಮೇಲೆ ಮಣ್ಣು ಕುಸಿದು ವಿದ್ಯಾರ್ಥಿಗಳಿಗೆ ತೊಂದರೆ ಆಗಿದೆ. ಇನ್ನೊಂದು ಕಡೆ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದ್ದಾರೆ, ಅಲ್ಲಿ ನೀರು ಹರಿಯದೆ ನದಿ ನೀರು ಉಕ್ಕಿ ಮನೆ, ಕೃಷಿ ಜಮೀನಿನ ಮೇಲೆ ಹರಿಯಲು ಆರಂಭಿಸಿದೆ. ಇದರಿಂದ ಜನರಿಗೆ ತೊಂದರೆ ಆಗಿದೆ ಎಂದು ಅವರು ಮಾಹಿತಿ ನೀಡಿದರು.

ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಆನೆ ತುಳಿದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದರು. ಅಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಆನೆಗಳನ್ನು ಬೇರೆ ಕಡೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಳೆ ಬಂದಾಗ ಸಮಸ್ಯೆ ಉಂಟಾಗಲು ಮುಖ್ಯ ಕಾರಣ ರಾಜಕಾಲುವೆಗಳ ಒತ್ತುವರಿ ಮತ್ತು ಚಿಕ್ಕ ಗಾತ್ರದ ಕಾಲುವೆಗಳು ಇರುವುದು. ಸರಕಾರ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಒತ್ತುವರಿ ತೆರವು ಮತ್ತು ಕಾಲುವೆಗಳ ಅಗಲೀಕರಣ ಮಾಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಒತ್ತುವರಿ ಮಾಡಿಕೊಂಡಿರುವ ಒತ್ತುವರಿದಾರರಿಗೆ ಕ್ರಯಕ್ಕೆ ಮನೆ ನೀಡುವ ಕಾನೂನನ್ನು ಸರಕಾರ ಮಾಡಿದೆ. ಇದರಿಂದ ಅಕ್ರಮಕ್ಕೆ ಸರಕಾರ ನೆರವು ನೀಡಿದಂತೆ ಆಗುತ್ತದೆ. ನಮ್ಮ ಸರಕಾರದ ಅವಧಿಯಲ್ಲಿ ಒಟ್ಟು 1953 ಒತ್ತುವರಿ ಪ್ರಕರಣಗಳನ್ನು ಪತ್ತೆಮಾಡಿ, 1300 ಒತ್ತುವರಿಗಳನ್ನು ತೆರವು ಮಾಡಿದ್ದೆವು. ಉಳಿದ 653 ಒತ್ತುವರಿಗಳ ತೆರವು ಕಾರ್ಯ ಪೂರ್ಣಗೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದ ಹಾನಿ ಆಗುತ್ತಿರಲಿಲ್ಲ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸಂಪರ್ಕ ಇಲ್ಲ, ಕೆರೆಗಳಲ್ಲಿ ಹೂಳು ತುಂಬಿಕೊಂಡಿದೆ. ಹೀಗಾಗಿ ಮಳೆ ಬಂದಾಗ ಸಮಸ್ಯೆ ಉಂಟಾಗುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳನ್ನು ಸರಿಪಡಿಸುವಂತೆ ರಾಜ್ಯದ ಹೈಕೋರ್ಟ್ ಎಷ್ಟು ಬಾರಿ ಛೀಮಾರಿ ಹಾಕಿದೆ ಎಂಬುದನ್ನು ನಾನು ಬಿಡಿಸಿ ಹೇಳಲು ಹೋಗುವುದಿಲ್ಲ. ಮನೆ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು, ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿ ಮಾಡದೆ ಹೋದರೆ ನಗರದ ಮೆರುಗಿಗೆ ಧಕ್ಕೆಯಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ಐಟಿ, ಬಿಟಿಯವರು ತಮಗೆ ಮಳೆಯಿಂದಾಗಿ 250 ಕೋಟಿ ನಷ್ಟವಾಗಿದೆ, ಮೂಲಸೌಕರ್ಯ ಸುಧಾರಣೆಯಾಗದೆ ಹೋದರೆ ನಾವು ಕಂಪನಿಗಳನ್ನು ಬೇರೆ ಕಡೆಗೆ ಸ್ಥಳಾಂತರಿಸುತ್ತೇವೆ ಎಂದು ಸರಕಾರಕ್ಕೆ ಪತ್ರ ಬರೆದಿದ್ದಾರೆ, ಇದಕ್ಕೆ ಸರಕಾರದ ಸಚಿವರೊಬ್ಬರು ಕಂಪನಿಗಳಿಗೆ ಧಮಕಿ ಹಾಕಿದ್ದಾರೆ. ರಾಜ್ಯ ಸರಕಾರ ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮುಂದೆ ನಿಂತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಮಳೆಯಿಂದ ಆದ ಅನಾಹುತಗಳಿಗೆ ಪ್ರಕೃತಿ ಅಷ್ಟೇ ಕಾರಣ ಅಲ್ಲ, ಈ ಸರಕಾರದ ಬೇಜವಾಬ್ದಾರಿ, ನಿಷ್ಕ್ರಿಯತೆ, ಬಿಬಿಎಂಪಿಯಲ್ಲಿನ ಭ್ರಷ್ಟಾಚಾರವೇ ಕಾರಣ ಎಂದು ಸಿದ್ದರಾಮಯ್ಯ ಹೇಳಿದರು.

ಇತ್ತೀಚಿನ ಸುದ್ದಿ

ಜಾಹೀರಾತು