ಇತ್ತೀಚಿನ ಸುದ್ದಿ
ಕಳಸ: ಜೀಪು ನದಿಗೆ ಬಿದ್ದು ಪುತ್ರ ನೀರುಪಾಲು; ಮನನೊಂದ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ
25/07/2025, 11:42

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಭದ್ರಾ ನದಿಗೆ ಜೀಪ್ ಬಿದ್ದು ಮಗ ನೀರು ಪಾಲಾದ ಘಟನೆಯಿಂದ ಮನನೊಂದ ತಾಯಿ ಮಗನ ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ. ಮೃತರನ್ನ 48 ವರ್ಷದ ರವಿಕಲಾ ಎಂದು ಗುರುತಿಸಲಾಗಿದೆ. ಮೃತ ರವಿಕಲಾ ಪುತ್ರ 23 ವರ್ಷದ ಶಮಂತ್ ಪಿಕಪ್ ಜೀಪಿನಲ್ಲಿ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಬಿದ್ದು ನೀರು ಪಾಲಾಗಿದ್ದಾನೆ. ಮಲೆನಾಡಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಜೀಪ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯೊಡೆದು ಪಕ್ಕದಲ್ಲೇ ಹರಿಯುತ್ತಿದ್ದ ಭದ್ರಾ ನದಿಗೆ ಉರುಳಿ ಬಿದ್ದು ಶಮಂತ್ ನದಿ ಪಾಲಾಗಿದ್ದಾನೆ.
ಶಮಂತ್ ಹಲವು ದಿನಗಳಿಂದ ಪಿಕಪ್ ಜೀಪ್‌ನಲ್ಲಿ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದನು. ನಿನ್ನೆ ಸಂಜೆ ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಗ್ರಾಮಕ್ಕೆ ಹೋಗುವಾಗ ಭದ್ರಾ ನದಿಗೆ ಬಿದ್ದು ನೀರು ಪಾಲಾಗಿದ್ದನು. ಕಾಫಿ ತೋಟದಿಂದ ಕಾರ್ಮಿಕರನ್ನ ಕರೆತರುವಾಗ ಅಪಘಾತ ಸಂಭವಿಸಿದ್ದರೆ ದೊಡ್ಡ ಅನಾಹುತವಾಗುತ್ತಿತ್ತು. ಮಲೆನಾಡಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಭದ್ರಾ ನದಿಯಿಂದ ಜೀಪ್ ಮೇಲೆತ್ತುವ ಕಾರ್ಯಾಚರಣೆಗೂ ತೊಂದರೆಯಾಗಿತ್ತು. ಆದರೆ, ನಿನ್ನೆ ಸಂಜೆ ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಆದರೆ, ಮಗನ ಮೃತದೇಹ ಸಿಗುವ ಮುನ್ನವೇ ರಾತ್ರಿ ವೇಳೆ ಮನೆ ಹಿಂದಿನ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.