ಇತ್ತೀಚಿನ ಸುದ್ದಿ
ಕಳಸ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಭದ್ರಾ ನದಿಗೆ ಹಾರಿದ ಜೀಪ್; 23ರ ಹರೆಯದ ಚಾಲಕ ನೀರುಪಾಲು
25/07/2025, 00:03

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಭದ್ರಾ ನದಿಗೆ ಬಿದ್ದ ಪರಿಣಾಮ ಚಾಲಕ ನೀರುಪಾಲಾಗಿದ್ದಾರೆ.
ಗಣಪತಿಕಟ್ಟೆ ನಿವಾಸಿ ಶಮಂತ (23) ನದಿಪಾಲಾದ ಯುವ ಚಾಲಕ ಎಂದು ತಿಳಿದು ಬಂದಿದೆ.
ಭದ್ರಾ ನದಿಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜೀಪ್ ನದಿಗೆ ಬಿದ್ದಿದೆ.ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದ ಚೀಪ್ ಚಾಲಕ ಶಮಂತ ಅವರು ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಹೋಗುವಾಗ ಈ ದುರ್ಘಟನೆ ನಡೆದಿದೆ.
ಕಾರ್ಮಿಕರನ್ನ ಕರೆತರುವಾಗ ಅಪಘಾತವಾಗಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ಸ್ಥಳಕ್ಕೆ ಕಳಸ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.
ಸುರಿಯುತ್ತಿರೋ ಮಳೆಯಿಂದ ಶೋಧ ಕಾರ್ಯಾಚರಣೆಗೂ ತೊಂದರೆಯಾಗಿದೆ.
ಬಾಳೆಹೊನ್ನೂರಿನಿಂದ ಅಗ್ನಿಶಾಮಕ ಸಿಬ್ಬಂದಿಗಳನ್ನು ಕರೆಸಲಾಗಿದೆ. ಮುಳುಗು ತಜ್ಞ ಮಲ್ಪೆ ಈಶ್ವರ್ ಅವರನ್ನು ಕರೆದು ತರುವ ಸಾಧ್ಯತೆಗಳಿವೆ.