ಇತ್ತೀಚಿನ ಸುದ್ದಿ
ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್ ಸುಳಿವು
03/07/2025, 20:01

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಫಾರೆಸ್ಟ್ ಗಾರ್ಡ್ ಶರತ್ ನಿಗೂಢವಾಗಿ ನಾಪತ್ತೆಯಾಗಿ 6 ದಿನಗಳು ಕಳೆದರೂ ಇನ್ನೂ ಸುಳಿವು ಪತ್ತೆ ಆಗಿಲ್ಲ.
ಅರಣ್ಯ ಸಿಬ್ಬಂದಿ ಸೇರಿ ಪೊಲೀಸರು, ಸಖರಾಯಪಟಟ್ಟಣ ನೀಲಗಿರಿ ಪ್ಲಾಂಟೇಶನ್ ಮತ್ತು ಅರಣ್ಯದಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಕುರುಹು ಮಾತ್ರ ಸಿಗುತ್ತಿಲ್ಲ.
ಕಡೂರು ತಾಲೂಕಿನ ನೀಲಗಿರಿ ಪ್ಲಾಂಟೇಶನ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊಡಗು ಜಿಲ್ಲೆಯ ಕಾಲೂರು ಗ್ರಾಮದ 33 ವರ್ಷದ ಶರತ್, ಸಖರಾಯಪಟ್ಟಣ ಅರಣ್ಯ ವಲಯಕ್ಕೆ ಮಂಗಳೂರಿನ ಸುಳ್ಯದಿಂದ ಕಳೆದ 6 ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿದ್ದರು. ಕಳೆದ ಜೂನ್ 24ರಂದು ಸಖರಾಯಪಟ್ಟಣ ಅರಣ್ಯದ ನೀಲಗಿರಿ ಪ್ಲಾಂಟೇಶನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶರತ್ ನಾಪತ್ತೆ ಆಗಿದ್ದರು. ನೀಲಗಿರಿ ಪ್ಲಾಂಟೇಶನ್ ಸಮೀಪದ ಅರಣ್ಯದಲ್ಲಿ ಶರತ್ ಬೈಕ್ ಪತ್ತೆಯಾಗಿದ್ದರೆ, ಬೈಕ್ ಸಿಕ್ಕ ಸ್ಥಳದಿಂದ ಎರಡು ಕಿಮೀ ದೂರದಲ್ಲಿ ಬಟ್ಟೆ ಸಿಕ್ಕಿದ್ದು, ನಾಪತ್ತೆ ಬಗ್ಗೆ ನೂರಾರು ಅನುಮಾನಗಳು ಮೂಡಿವೆ. ಶರತ್ ನಾಪತ್ತೆ ಸಂಬಂಧ ಪೋಷಕರು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಚಿಕ್ಕಮಗಳೂರು ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ ಟಿ ಬೋರಯ್ಯ ಅವರು ಶರತ್ ಒಬ್ಬನೇ ಸಖರಾಯಪಟ್ಟಣದಲ್ಲಿ ರೂಂ ಮಾಡಿಕೊಂಡಿದ್ದು ಇವರ ತಾಯಿ ಎನ್ ಆರ್ ಪುರದಲ್ಲಿ ಮನೆ ಮಾಡಿಕೊಂಡು ಇದ್ದಾರೆ. ಇವರ ತಂದೆ ಚಿಕ್ಕಮಗಳೂರು ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ಗಾರ್ಡ್ ಆಗಿದ್ದು ಅವರು ಮೃತಪಟ್ಟ ನಂತರ ಅನುಕಂಪದ ಆಧಾರದಲ್ಲಿ ಇವರಿಗೆ ನೌಕರಿ ನೀಡಲಾಗಿತ್ತು.
ನೀಲಗಿರಿ ಪ್ಲಾಂಟೇಷನ್ ಸುಮಾರು 550 ಹೆಕ್ಟೇರ್ ವಿಸ್ತೀರ್ಣವಿದ್ದು ಕಳೆದ 5 ದಿನ ಸಂಪೂರ್ಣವಾಗಿ 30ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ, 10 ಕ್ಕೂ ಹೆಚ್ಚು ಪೋಲೀಸರು ಮತ್ತು 30ಕ್ಕೂ ಹೆಚ್ಚು ಗ್ರಾಮಸ್ಥರು ಪೋಲೀಸ್ ಶ್ವಾನ ಮತ್ತು ಡ್ರೋನ್ ಕ್ಯಾಮೆರಾ ಮೂಲಕ ಹುಡುಕಾಟ ನಡೆಸಿದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಪೋಲೀಸ್ ಶ್ವಾನಗಳು ಅರಣ್ಯದೊಳಗೆ ಹೋಗದೆ ಪುನಃ ರಸ್ತೆಗೆ ಬಂದು ನಿಂತಿವೆ. ಶರತ್ ನ ಮೊಬೈಲ್ ಬಟ್ಟೆ ಸಿಕ್ಕಿದ ಸ್ಥಳದಲ್ಲೇ ಪತ್ತೆ ಆಗಿದೆ. ಶರತ್ ಮೊಬೈಲ್ ನಿಂದ ಕೊನೆಯದಾಗಿ ತನ್ನ ತಾಯಿಗೆ ಕರೆ ಮಾಡಿದ್ದಾರೆ. ಕಳೆದ ಮಂಗಳವಾರ ಸಂಜೆ ಶರತ್ ನನ್ನು ಅರಣ್ಯ ಇಲಾಖೆಯ ಬುಲ್ ಡೋಜರ್ ಚಾಲಕ ಕೊನೆಯದಾಗಿ ನೋಡಿದ್ದಾನೆ. ನಂತರ ಇವರು ಯಾರ ಕಣ್ಣಿಗೂ ಕಾಣಿಸಿಕೊಂಡಿಲ್ಲ. ಮಂಗಳವಾರದಿಂದಲೂ ಪಲ್ಸರ್ ಬೈಕ್ ಅನಾಥವಾಗಿ ನಿಂತಿತ್ತು. ಗುರುವಾರ ಮಧ್ಯಾಹ್ನ ಬೈಕ್ ನಿಂತಿರುವುದು ಮತ್ತೆ ಡೋಜರ್ ಚಾಲಕನ ಗಮನಕ್ಕೆ ಬಂದಿದೆ. ಆತ ಇದನ್ನು ಅರಣ್ಯ ಸಿಬ್ಬಂದಿಗಳಿಗೆ ಫೋನ್ ಮಾಡಿ ಹೇಳಿದ್ದಾನೆ. ಆಗ ಸಿಬ್ಬಂದಿ ಬೈಕ್ ಫೋಟೋ ಕಳಿಸಲು ಹೇಳಿದ್ದಾರೆ. ಶರತ್ ಬೈಕ್ ನಲ್ಲಿದ್ದ ಕೊಡವ ಚಿಹ್ನೆಯಿಂದಾಗಿ ಬೈಕ್ ಶರತ್ ನದ್ದು ಎಂದು ಸಿಬ್ಬಂದಿ ಗುರುತಿಸಿದ್ದಾರೆ. ನಂತರ ಎನ್ ಆರ್ ಪುರದಿಂದ ಬಂದ ತಾಯಿ ರತಿ ಭೀಮಯ್ಯ ಶುಕ್ರವಾರ ಪೋಲೀಸರಿಗೆ ದೂರು ನೀಡಿದ್ದಾರೆ. ನಂತರ ಹುಡುಕಾಟ ಆರಂಭ ಮಾಡಲಾಗಿದೆ.
ಅರಣ್ಯ ಅಧಿಕಾರಿಗಳ ಪ್ರಕಾರ ಶರತ್ ನನ್ನು ಚಿರತೆ ಅಥವಾ ಯಾವುದೇ ಕಾಡು ಪ್ರಾಣಿ ತಿಂದಿರುವ ಸಾದ್ಯತೆ ಇಲ್ಲ, ಹಾಗೆ ಆಗಿದ್ದರೆ ಶವದ ಕುರುಹಾದರೂ ಇಷ್ಟೊತ್ತಿಗೆ ಸಿಗಬೇಕಿತ್ತು. ಪೋಲೀಸ್ ನಾಯಿಗಳಾದರೂ ಬಟ್ಟೆ ಮೂಸಿ ದೇಹ ಗುರುತಿಸಬೇಕಿತ್ತು. ಈತನು ಬೇರೆಡೆ ತೆರಳಿದ್ದರೆ ಬೈಕ್ ಮತ್ತು ಮೊಬೈಲ್ ಏಕೆ ಬಿಟ್ಟು ಹೋದ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಈತನ ತಾಯಿ ಹಾಗೂ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಒಟ್ಟಿನಲ್ಲಿ ಈ ನಾಪತ್ತೆ ಪ್ರಕರಣ ನಿಗೂಢವಾಗೇ ಉಳಿದಿದ್ದು ಪೋಲೀಸ್ ತನಿಖೆಯಿಂದಷ್ಟೇ ಸತ್ಯ ಹೊರಬರಬೇಕಿದೆ.