ಇತ್ತೀಚಿನ ಸುದ್ದಿ
ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಆಮಿಷ; 1.32 ಲಕ್ಷಕ್ಕೆ ಉಂಡೆನಾಮ!: ಆನ್ಲೈನ್ ವಂಚಕರ ಜಾಲಕ್ಕೆ ಬಲೆ ಬೀಸುತ್ತಾರಾ ನಂಜನಗೂಡು ಪೊಲೀಸರು!
07/06/2024, 13:34

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ 1.32 ಲಕ್ಷ ಹಣಕ್ಕೆ ಉಂಡೆನಾಮ ಹಾಕಿದ ಘಟನೆ ನಂಜನಗೂಡಿನಲ್ಲಿ ನಡೆದಿದೆ.
ಅಶೋಕ್ ಎಂಬುವರೇ ಹಣ ಕಳೆದುಕೊಂಡವರು. ಮೊಬೈಲ್ ಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಬಜಾಜ್ ಫಿನ್ಸರ್ ನಿಂದ ಮಾತನಾಡುತ್ತಿರುವುದಾಗಿ ನಂಬಿಸಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದಾಗಿ ನಂಬಿಸಿದ್ದಾನೆ. ವಂಚಕನ ಮಾತನ್ನ ನಂಬಿದ ಅಶೋಕ್ ನೊಂದಣಿ ಹಾಗೂ ದಾಖಲೆಗಳ ಶುಲ್ಕ ಎಂದು ಕಾರಣ ನೀಡಿ ಹಂತಹಂತವಾಗಿ 1.32 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡು ಉಂಡೆನಾಮ ಹಾಕಿದ್ದಾನೆ. ವಂಚನೆಗೆ ಒಳಗಾದ ಅಶೋಕ್ ರವರು ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಅನಾಮಧೇಯ ವಂಚಕನ ವಿರುದ್ದ ದೂರು ದಾಖಲಿಸಿದ್ದಾರೆ. ನಂಜನಗೂಡು ತಾಲೂಕಿನಾದ್ಯಂತ ದಿನನಿತ್ಯ ಮೂರರಿಂದ ನಾಲ್ಕು ಆನ್ಲೈನ್ ವಂಚನೆ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ನಡೆಯುತ್ತಿವೆ. ವಂಚಕರ ಮಾತಿಗೆ ಮರುಳಾಗಿ ದುಡಿದು ಕೂಡಿಟ್ಟ ಹಣವನ್ನು ಸಾಕಷ್ಟು ಮಂದಿ ಕಳೆದುಕೊಳ್ಳುತ್ತಿದ್ದಾರೆ. ತಾಲೂಕಿನ ಜನತೆಗೆ ಪೊಲೀಸರು ಜಾಗೃತಿ ಮೂಡಿಸುವುದರ ಜೊತೆಗೆ ಖದೀಮರ ಬಂಧನಕ್ಕೆ ನಂಜನಗೂಡು ಪೊಲೀಸರು ಜಾಲ ಬೀಸುತ್ತಾರಾ..? ಎಂಬುದನ್ನು ಕಾದು ನೋಡಬೇಕಿದೆ.