ಇತ್ತೀಚಿನ ಸುದ್ದಿ
ಕಾರ್ಲ ಕಜೆ, ಕಾರ್ಲ ಬಿಳಿ ಬೆಂಡೆಯನ್ನು ಕಾರ್ಕಳದ ಬ್ರಾಂಡ್ ಆಗಿ ರಾಜ್ಯಮಟ್ಟಕ್ಕೆ ವಿಸ್ತರಣೆ: ಸಚಿವ ಸುನಿಲ್ ಕುಮಾರ್
06/09/2021, 21:46
ಕಾರ್ಕಳ: ಕಾರ್ಲ ಕಜೆ ಮತ್ತು ಕಾರ್ಲ ಬಿಳಿ ಬೆಂಡೆಯನ್ನು ಕಾರ್ಕಳದ ಬ್ರಾಂಡ್ ಆಗಿ ರಾಜ್ಯ ಮಟ್ಟಕ್ಕೆ ವಿಸ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಇಲ್ಲಿನ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಸೋಮವಾರ ಕಾರ್ಕಳ ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಬಿಳಿಬೆಂಡೆ ಮೇಳವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮುಂದಿನ ಅಧಿವೇಶನ ಸಂದರ್ಭದಲ್ಲಿ ಶಾಸಕರಿಗೆ ಊಟದ ವೇಳೆ ಕಾರ್ಕಳ ಬಿಳಿ ಬೆಂಡೆಯ ಖಾದ್ಯವನ್ನು ನೀಡುವ ಮೂಲಕ ರಾಜ್ಯದಾದ್ಯಂತ ಮಾರುಕಟ್ಟೆ ಕಲ್ಪಿಸುವ ಪ್ರಯತ್ನ ಮಾಡಲಾಗುವುದು. ಬಿಳಿ ಬೆಂಡೆಗೆ ಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಮೂಲಕ ಪ್ರಯತ್ನಿಸಲಾಗುತ್ತಿದೆ. ಅಧಿಕೃತ ಮಾನ್ಯತೆ ಲಭಿಸಿದರೆ ರೈತರಿಗೆ ಸಬ್ಸಿಡಿ, ಬೆಂಬಲ ದೊರೆಯುವ ಸಾಧ್ಯತೆಯಿದೆ. ಕಾರ್ಕಳದಲ್ಲಿ ಸುಮಾರು 20 ಸಾವಿರ ಕುಟುಂಬಗಳು ಬಿಳೆ ಬೆಂಡೆ ಬೆಳೆಸುವ ಮೂಲಕ ಬೆಂಡೆ ಕೃಷಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದರು.
ರೈತರೇ ಸೂಚಿಸಿರುವ ಕಾರ್ಲ ಕಜೆ, ಬಿಳಿ ಬೆಂಡೆಯನ್ನು ಬ್ರಾಂಡ್ ಮಾಡಲಾಗುತ್ತಿದೆ. ಕಾರ್ಕಳ ಜನತೆ, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಇವೆರೆಡು ಬೆಳೆ ವ್ಯಾಪಕ ಪ್ರಸಿದ್ಧಿಗೆ ಬರುವಂತಾಗಿದೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾರ್ಕಳದ ಆಯ್ದ ರೈತರು ಈ ಬಾರಿ ಬಿಳಿ ಬೆಂಡೆ ಬೀಜ ನೀಡಿರುತ್ತಾರೆ. ಮುಂದಿನ ಬಾರಿ ರೈತರು ತಾವಾಗಿಯೇ ಬಿಳಿ ಬೆಂಡೆ ಬೀಜ ಸಂಗ್ರಹಿಸಿ ಬಿತ್ತನೆಗೆ ಸಿದ್ಧರಾಗಬೇಕು. ಮಹಿಳಾ ಮೋರ್ಚಾದ ವತಿಯಿಂದ ಬಿಳಿ ಬೆಂಡೆ ಮೇಳ ಆಯೋಜಿಸುವ ಮೂಲಕ ಬೆಂಡೆಯಿಂದ ಹತ್ತಾರು ಬಗೆಯ ಖಾದ್ಯ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಕೀಲ ಎಂ.ಕೆ.ವಿಜಯ ಕುಮಾರ್ ಮಾತನಾಡಿ ಮಧುಮೇಹಿಯಾದ ನನಗೆ ಔಷಧೀಯ ಗುಣವಿರುವ ಬಿಳಿಬೆಂಡೆ ರಕ್ಷಿಸಿದೆ ಎಂದರು.
ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿನಯ ಡಿ. ಬಂಗೇರ ಸ್ವಾಗತಿಸಿದರು. ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಬೆಳ್ಮಣ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಲ್ಲಿಕಾ ರಾವ್ ನಿರೂಪಿಸಿದರು. ನಿಟ್ಟೆ ಶಕ್ತಿ ಕೇಂದ್ರದ ಅಧ್ಯಕ್ಷೆ ಮಾನಸ ವಂದಿಸಿದರು.