ಇತ್ತೀಚಿನ ಸುದ್ದಿ
ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆ ಚರ್ಚೆ: ಸಚಿವ ಸುನಿಲ್ ಕುಮಾರ್
30/09/2021, 19:22
ಬೆಂಗಳೂರು(reporterkarnataka.com): ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ‘ಬದಲಾದ ಉದ್ಯೋಗ ಪರ್ವ’ ವಿಚಾರ ಸಂಕಿರಣಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, 1984ರಲ್ಲಿ ಬಂದಂತಹ ಡಾ.ಸರೋಜಿನಿ ಮಹಿಷಿ ವರದಿ ಆ ಹೊತ್ತಿನ ಕಾಲಘಟ್ಟದ ಅಗತ್ಯತೆಗಳಿಗೆ ಮಾನ್ಯತೆ ನೀಡಿದೆ. ನಂತರದ ಕಾಲಘಟ್ಟದಲ್ಲಿ ಹೊಸ ಹೊಸ ಕಂಪೆನಿಗಳು ರಾಜ್ಯದಲ್ಲಿ ಸ್ಥಾಪನೆಯಾಗಿವೆ. ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸಿ ಕೊಡುವ ನಿಟ್ಟಿನಲ್ಲಿ ವಿದೇಶಿ ಕಂಪೆನಿಗಳನ್ನು ರಾಜ್ಯದಲ್ಲಿ ಬರ ಮಾಡಿಕೊಳ್ಳಲಾಗಿದೆ. ಅವುಗಳೆಲ್ಲದರಲ್ಲೂ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರದಿಂದ ಎಲ್ಲ ರೀತಿಯ ಪ್ರಯತ್ನಗಳಾಗುತ್ತಿವೆ ಎಂದು ತಿಳಿಸಿದರು.
ಕರ್ನಾಟಕದಲ್ಲಿರುವ ಎಲ್ಲ ಸಂಸ್ಥೆಗಳು ಕನ್ನಡಕ್ಕೆ ಮಾನ್ಯತೆ ನೀಡಬೇಕು ಜೊತೆಗೆ ಕನ್ನಡಿಗ ಯುವಕರಿಕೆ ಆದ್ಯತೆ ನೀಡಬೇಕು. ಈ ಬಗ್ಗೆ ಯಾವ ಯಾವ ಹಂತದಲ್ಲಿ ಏನೇನು ಕಾರ್ಯಗಳು ಆಗಬೇಕು ಅವುಗಳನ್ನು ಮಾಡುವುದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಣಾಮಕಾರಿಯಾದ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ. ಉದ್ಯೋಗ ಕ್ಷೇತ್ರದಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಹಾಗೂ ಕಾರ್ಮಿಕ ಇಲಾಖೆಯೊಂದಿಗೆ ಚರ್ಚಿಸಲಾಗುವುದು. ಇವತ್ತಿನ ವಿಚಾರ ಸಂಕಿರಣದ ವರದಿಯನ್ನು ನನಗೆ ತಲುಪಿಸಿದರೆ ಅದರ ಅನುಷ್ಠಾನದ ಕಾರ್ಯಗಳಿಗೆ ನಾನು ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿ, ಕರ್ನಾಟಕ ರಾಜ್ಯದ ಐ.ಟಿ, ಬಿ.ಟಿ ಕ್ಷೇತ್ರಗಳನ್ನೊಳಗೊಂಡಂತೆ ಖಾಸಗಿ ವಲಯದಲ್ಲಿ ಸ್ಥಳೀಯ ಕನ್ನಡಿಗರಿಗೆ ಪ್ರಾತಿನಿಧ್ಯ ಕಲ್ಪಿಸುವ ಮಸೂದೆ ರೂಪಿಸಲು ಪ್ರಾಧಿಕಾರ ಸತತವಾಗಿ ಒತ್ತಾಯಿಸುತ್ತಿದೆ ಎಂದರು.
ಪ್ರಸ್ತಾಪಿತ ಮಸೂದೆಯಲ್ಲಿ ಲೋಕಲ್ ಪೀಪಲ್ (ಕನ್ನಡಿಗರು) ಎಂದರೆ ಕನ್ನಡವನ್ನು ಒಂದು ಭಾಷೆಯನ್ನಾಗಿ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಓದಿ ತೇರ್ಗಡೆ ಹೊಂದಿರಬೇಕು/ ಕರ್ನಾಟಕದಲ್ಲಿ ೧೫ ವರ್ಷ ನೆಲೆಸಿದ್ದು, ಕನ್ನಡ ಓದಲು, ಬರೆಯಲು ಮಾತನಾಡಲು ಬರಬೇಕು ಎಂಬ ಅಂಶಗಳನ್ನು ಸೇರಿಸಬೇಕು. ಉನ್ನತ ಶಿಕ್ಷಣ ಕ್ಯಾಂಪಸ್ ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ಕುರಿತಂತೆ ಅಂಶಗಳು ನಿಯಮಾವಳಿಯಲ್ಲಿ ಅಡಕವಾಗಬೇಕು. ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ.100 ರ ಪ್ರಾತಿನಿಧ್ಯದ ಜೊತೆ ಮೇಲುಸ್ತುವಾರಿ ಉನ್ನತ ಹುದ್ದೆಗಳಲ್ಲಿಯೂ ಸ್ಥಳೀಯರು ಪ್ರಾತಿನಿಧ್ಯ ಪಡೆಯುವ ಬಗ್ಗೆ ಅಂಶಗಳು ಸೇರಬೇಕು ಎಂದು ಒತ್ತಾಯಿಸಿದರು.
ಸ್ಥಳೀಯರಿಗೆ ನೇಮಕಾತಿ ಪ್ರಾತಿನಿಧ್ಯ ಕಲ್ಪಿಸದ ಸಂಸ್ಥೆಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸ್ಪಷ್ಟವಾದ ಕಾನೂನು ಬಲವುಳ್ಳ ಅಂಶಗಳು ಪ್ರಸ್ತಾಪಿತ ನಿಯಮಾವಳಿಗಳಲ್ಲಿ ಅಡಕವಾಗಬೇಕು. ಖಾಸಗಿ ಸಂಸ್ಥೆಗಳ ಸ್ಥಾಪನೆಯ ಸಂದರ್ಭದಲ್ಲಿ ಕೈಗಾರಿಕಾ ಇಲಾಖೆಯೊಂದಿಗೆ ಒಡಂಬಡಿಕೆಯನ್ನು ಸ್ಥಳೀಯರಿಗೆ ಉದ್ಯೋಗ ಎಂಬ ಷರತ್ತನ್ನು ಒಪ್ಪಿರುತ್ತವೆ. ಇದರ ಉಲ್ಲಂಘನೆ ಯಾವ ರೀತಿಯ ಕ್ರಮವಹಿಸಬೇಕು ಎಂಬುದರ ಬಗ್ಗೆ ಕಾಯ್ದೆ ರೂಪಿಸಬೇಕಾಗಿದೆ ಎಂದು ತಿಳಿಸಿದರು.
ಐಟಿ/ಬಿಟಿ, ಇ-ಕಾಮರ್ಸ್ ಕ್ಷೇತ್ರಗಳನ್ನೊಳಗೊಂಡಂತೆ ಎಲ್ಲ ಖಾಸಗಿ ಸಂಸ್ಥೆಗಳು ರಾಜ್ಯದ ಮೂಲಭೂತ ಸೌಲಭ್ಯಗಳಾದ ರಸ್ತೆ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಮಾನವ ಸಂಪನ್ಮೂಲ ಹಾಗೂ ಇತ್ಯಾದಿ ಸೌಲಭ್ಯಗಳನ್ನು ಬಳಸಿಕೊಳ್ಳುವುದರಿಂದ ಎಲ್ಲ ಖಾಸಗಿ ವಲಯದ ಉದ್ಯಮಗಳನ್ನು ಈ ವ್ಯಾಪ್ತಿಗೆ ತಂದು ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವುದನ್ನು ಕಡ್ಡಾಯಗೊಳಿಸಬೇಕು ಎಂದರು.
ನಂತರ ನಡೆದ ವಿಷಯ ಮಂಡನೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯನವರು, ಉದ್ಯೋಗದಲ್ಲಿ ಸ್ಥಳೀಯರಿಗೆ ಪ್ರಾತಿನಿಧ್ಯ ನೀಡಬೇಕೆಂಬ ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳು ಶಾಸನಬದ್ಧಗೊಳ್ಳದಿರುವುದರಿಂದ ಕನ್ನಡಿಗರಿಗೆ ಕನ್ನಡ ನಾಡಿನಲ್ಲಿ ಪರಿಣಾಮಕಾರಿಯಾಗಿ ಉದ್ಯೋಗಾವಕಾಶಗಳು ಲಭ್ಯವಾಗಿಲ್ಲ. ಸರೋಜಿನಿ ಮಹಿಷಿ ವರದಿಯಲ್ಲಿ ಗ್ರೂಪ್ ಸಿ ಮತ್ತು ಡಿ ಹುದ್ದೆಗಳನ್ನು ಸ್ಥಳೀಯರಿಗೆ ನೀಡಬೇಕೆಂದು ತಿಳಿಸಲಾಗಿದೆ. ಇದು ಯಥವತ್ತಾಗಿ ಜಾರಿಗೊಂಡರೆ ಎಲ್ಲ ಕನ್ನಡಿಗರಿಗೂ ಉದ್ಯೋಗ ದೊರಕಲಿದೆ ಎಂದರು.
ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ನೇಮಕಾತಿ ನಡೆಯುವ ಕನ್ನಡ ಭಾಷಾ ಜ್ಞಾನದ ಪರೀಕ್ಷೆ ನಡೆಯಬೇಕು. ಕನ್ನಡ ಭಾಷೆ ಬಲ್ಲವರಿಗೆ ಮಾತ್ರ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಹೀಗಾಗಿ ಗ್ರಾಮೀಣ ಭಾಗದ ಪದವೀಧರಿಗೆ ಲೀಡ್ ಬ್ಯಾಂಕುಗಳು ತಮ್ಮದೆ ಖರ್ಚಿನಲ್ಲಿ ಬ್ಯಾಂಕಿಂಗ್ ಪರೀಕ್ಷೆಯ ತರಬೇತಿ ನೀಡುವುದು. ಲೀಡ್ ಬ್ಯಾಂಕುಗಳ ಕಾರ್ಯಕ್ರಮವಾಗಬೇಕು. ೩ ರಿಂದ ೬ ತಿಂಗಳು ತರಬೇತಿ ನೀಡಬೇಕು. ಈ ನಿಟ್ಟಿನಲ್ಲಿ ಪ್ರಾಧಿಕಾರ ಕ್ರಮವಹಿಸಬೇಕು ಎಂದು ನುಡಿದರು.
ಅಸಂಘಟಿತ ಹಾಗೂ ಸಂಘಟಿತ ವಲಯದಲ್ಲಿರುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವಂತಹ ಪೋರ್ಟಲ್ ಅನ್ನು ರಾಜ್ಯ ಸರ್ಕಾರ ಆರಂಭಿಸಬೇಕು. ಕನ್ನಡಿಗರಿಗೆ ಉದ್ಯೋಗಾವಕಾಶ ದೊರಕಿಸಿ ಕೊಡುವುದರೊಂದಿಗೆ, ಅನ್ಯ ರಾಜ್ಯದವರಿಗೆ ನಮ್ಮ ರಾಜ್ಯದಲ್ಲಿ ಉದ್ಯೋಗ ನೀಡುವುದರ ಕುರಿತು ಸ್ಪಷ್ಟ ನಿಯಮಾವಳಿಗಳನ್ನು ರೂಪಿಸಬೇಕು ಎಂದು ಹೇಳಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ತಾಂತ್ರಿಕ ಕೋಶದ ಜಂಟಿ ನಿರ್ದೇಶಕರಾದ ಎಚ್.ಎಸ್ ಜಯಕುಮಾರ್ ಅವರು ಖಾಸಗಿ ವಲಯದಲ್ಲಿ ಉದ್ಯೋಗ, ಕನ್ನಡಪರ ಚಿಂತಕರಾದ ರಾ.ನಂ.ಚಂದ್ರಶೇಖರ್ ಅವರು ಉದ್ಯೋಗ ಸಾಧ್ಯತೆ, ಸಿದ್ಧತೆ, ಪರಿಷ್ಕೃತ ಮಹಿಷಿ ವರದಿ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯ ನಿವೃತ್ತ ನಿರ್ದೇಶಕರಾದ ಪ್ರೊ. ಚಂದ್ರಕಾಂತ್ ಅವರು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಹಾದಿಯಲ್ಲಿ ಕೃಷಿ ಉದ್ಯೋಗ ಹಾಗೂ ಮಾಹಿತಿ ತಂತ್ರಜ್ಞಾನ ತಜ್ಞರಾದ ಟಿ.ಜಿ.ಶ್ರೀನಿಧಿ ಅವರು ಭವಿಷ್ಯದ ಉದ್ಯೋಗ ಕ್ಷೇತ್ರಗಳು ವಿಷಯದ ಬಗ್ಗೆ ಪ್ರಬಂಧ ಮಂಡಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ.ಸಂತೋಷ ಹಾನಗಲ್ಲ ಉಪಸ್ಥಿತರಿದ್ದರು.