ಇತ್ತೀಚಿನ ಸುದ್ದಿ
ಜನವರಿ 25: ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಶತಮಾನೋತ್ಸವ ಸಮಾರೋಪ ಸಮಾರಂಭ
22/01/2026, 21:00
ಮಂಗಳೂರು(reporterkarnataka.com):ಎಸ್.ಎಸ್.ವಿ.ಪಿ. ಎಂದು ಜನಪ್ರಿಯವಾಗಿರುವ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ, ಮಂಗಳೂರು ಕ್ಯಾಥೊಲಿಕ್ ಧರ್ಮಸಭೆಯಲ್ಲಿ ತನ್ನ ಅಸ್ತಿತ್ವದ ನೂರು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದೆ. ಇದೇ 2026ರ ಜನವರಿ 25ರ ಭಾನುವಾರದಂದು ಫಾದರ್ ಮುಲ್ಲರ್ ಕನ್ವೆಂಷನ್ ಸೆಂಟರ್ ಸಭಾಂಗಣದಲ್ಲಿ ಶತಮಾನೋತ್ಸವ ಸಮಾರೋಪ ಸಮಾರಂಭ ನೆರವೇರಲಿದೆ.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತಿದ್ದು ಎಸ್.ಎಸ್.ವಿ.ಪಿ. ಅಂತರಾಷ್ಟ್ರೀಯ ಅಧ್ಯಕ್ಷರಾದ ಯುವಾನ್ ಮ್ಯಾನುಯೆಲ್ ಬ್ಯುರ್ಗೊ ಗೊಮೆಜ್ ಅವರು ಸ್ಪೇಯ್ನ್ ದೇಶದಿಂದ ಬಂದು ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಇವರೊಂದಿಗೆ ಗೌರವ ಅತಿಥಿಗಳಾಗಿ ಮಂಗಳೂರು ಧರ್ಮ ಪ್ರಾಂತ್ಯ ದ ನಿವೃತ್ತ ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪೌಲ್ ಡಿಸೋಜ, ಎಸ್. ಎಸ್. ವಿ. ಪಿ. ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಶ್ರೀ ಜೂಡ್ ಮಂಗಳರಾಜ್ ಹಾಗೂ ಅಂತಾರಾಷ್ಟ್ರೀಯ ಓಂಬುಡ್ಸ್ಮನ್ ಶ್ರೀ ಜೋಸೆಫ್ ಪಾಂಡಿಯನ್ ಅವರು ಉಪಸ್ಥಿತಲಿರುವರು.
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಫಾದರ್ ಮುಲ್ಲರ್ ಸಂಸ್ಥೆಯ ನಿರ್ದೇಶಕ ವಂದನೀಯ ಫಾವುಸ್ಟಿನ್ ಲೂಕಾಸ್ ಲೋಬೊ, ಮತ್ತು ಖ್ಯಾತ ಉದ್ಯಮಿ – ದಾನಿ ಜೋಸೆಫ್ ಎಲಿಯಾಸ್ ಮಿನೇಜಸ್ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಇವರ ಜೊತೆಗೆ ಎಸ್.ಎಸ್.ವಿ.ಪಿ. ರಾಷ್ಟ್ರೀಯ ಕಾರ್ಯದರ್ಶಿ ಸಾಂತಿಯಾಗು ಮಾಣಿಕ್ಯಂ, ಆಶಾ ವಾಜ್ ಮತ್ತು ಯುವ ಪ್ರತಿನಿಧಿ ಅಲಿಸ್ಟರ್ ನಜರೆತ್ ಅವರು ವೇದಿಕೆಯಲ್ಲಿ ಉಪಸ್ಥಿತಲಿರುವರು.
ವಿಶ್ವದ ಅತಿ ದೊಡ್ಡ ಕ್ಯಾಥೊಲಿಕ್ ಸಮಾನ ಮನಸ್ಕ ಸೇವಾ ಸಂಸ್ಥೆಯಾದ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಮಂಗಳೂರಿನ ಬೆಂದೂರ್ ಚರ್ಚ್ ನಲ್ಲಿ 1926ರಲ್ಲಿ ಜನವರಿ 10ರಂದು ಅಸ್ತಿತ್ವಕ್ಕೆ ಬಂತು. ಅದೇ ತಿಂಗಳಲ್ಲಿ ಮಿಲಾಗ್ರಿಸ್ ಘಟಕದ ಸ್ಥಾಪನೆಯಾಯಿತು. ನಂತರ 1926 ಇಸವಿಯ ಮೇ ತಿಂಗಳಲ್ಲಿ ಇನ್ನೂ ಎರಡು ಘಟಕಗಳು ರೊಸಾರಿಯೊ ಕೆಥಡ್ರಾಲ್ ಮತ್ತು ಬಿಜೈ ಚರ್ಚ್ ನಲ್ಲಿ ಅಸ್ತಿತ್ವಕ್ಕೆ ಬಂದವು.
ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಪ್ರಮುಖ ಸೇವಾ ಕೆಲಸವೆಂದರೆ ಬಡವರು ಮತ್ತು ನಿರ್ಗತಿಕರನ್ನು ಭೇಟಿಯಾಗುವುದು ಮತ್ತು ಅವರಿಗೆ ಅಗತ್ಯದ ನೆರವನ್ನು ವಿತರಿಸುವುದು. ಹೀಗೆ ನೆರವನ್ನು ನೀಡುವಾಗ ಗೌಪ್ಯತೆಯನ್ನು ಕಾಪಾಡಿ ಕೊಳ್ಳಲಾಗುತ್ತದೆ.
ಪ್ರಸ್ತುತ ಮಂಗಳೂರು ಕೇಂದ್ರಿಯ ಸಮಿತಿಯ ಅಧೀನದಲ್ಲಿ 111 ಘಟಕಗಳಿದ್ದು ಪ್ರತೀ ಘಟಕವು ತಮ್ಮ ಪರಿಸರದಲ್ಲಿ ಕನಿಷ್ಠ 5 ಕುಟುಂಬಗಳನ್ನು ದತ್ತು ಪಡೆದು ಅವರನ್ನು ತಮ್ಮದೇ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತದೆ. ಹೀಗೆ ಪ್ರಸ್ತುತ 623 ದತ್ತು ಕುಟುಂಬಗಳಿದ್ದು 1765 ಕುಟುಂಬದ ಸದಸ್ಯರನ್ನು ಹೊಂದಿದೆ.
ಎಲ್ಲಾ 111 ಘಟಕಗಳು ಮತ್ತು 2 ಯುವ ಘಟಕಗಳಲ್ಲಿ ಒಟ್ಟು1618 ಸದಸ್ಯ ಬಲ ಹೊಂದಿರುವ ಎಸ್.ಎಸ್.ವಿ.ಪಿ. ಬಡವರ ಸೇವೆಯಲ್ಲಿ ಯಾವುದೇ ಪ್ರಚಾರವಿಲ್ಲದೆ ತೊಡಗಿಸಿಕೊಂಡಿದೆ.






ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಮಂಗಳೂರು ಮತ್ತು ತುಂಬೆ ಇವರ ಸಹಯೋಗದೊಂದಿಗೆ ದತ್ತು ಪಡೆದ ಕುಟುಂಬಗಳ ಸದಸ್ಯರಿಗೆ ಉಚಿತ ವೈದ್ಯಕೀಯ ಮತ್ತು ಡಯಾಲಿಸಿಸ್ ಆರೈಕೆಯನ್ನು ಒದಗಿಸುವ ಮಹತ್ತರವಾದ ಯೋಜನೆ ಅತ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.
ಶತಮಾನೋತ್ಸವದ ಸವಿನೆನಪಿಗಾಗಿ ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿ ಎರಡು ಮಹತ್ತರ ಯೋಜನೆಗಳನ್ನು ರೂಪಿಸಿದೆ.
*’ಶಿಕಪ್’* ಎಸ್.ಎಸ್.ವಿ.ಪಿ.ಯ ದತ್ತು ಕುಟುಂಬಗಳ ಸುಮಾರು 405 ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ನೆರವು.
*‘ಆಸ್ರೊ* ’ – ನೂರು ಕುಟುಂಬಗಳಿಗೆ ತಮ್ಮ ಮನೆಗಳನ್ನು ನಿರ್ಮಿಸಲು ಅಥವಾ ದುರಸ್ತಿ ಮಾಡಲು ಧನ ಸಹಾಯ.
ಸಮಾರೋಪ ಕಾರ್ಯಕ್ರಮದಂದ ಜೋಸೆಫ್ ಇ ಮಿನೇಜಸ್ ಇವರ ಟ್ರಿನಿಟಿ ಮೆಡಿಕೇರ್ ಸರ್ವಿಸಸ್ ಟ್ರಸ್ಟ್ ಉಡುಪಿ ಇವರ ಸಹಾಯದೊಂದಿಗೆ ಕಿಡ್ನಿ ವೈಫಲ್ಯತೆಯಿಂದ ಬಳಲುವ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಹಾಗೂ ಡಯಾಲಿಸಿಸ್ ವೆಚ್ಚವನ್ನು ಭರಿಸಲು ನೆರವಾಗುವ SSVP-TRINITY KIDNEY CARE PROJECT ಪ್ರಾರಂಭವಾಗಲಿದೆ.
*ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯ ಇತಿಹಾಸ:*
1833 ಇಸವಿಯಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ನ 22 ವರ್ಷದ ವಂದನೀಯ ಫ್ರೆಡ್ರಿಕ್ ಒಜಾನಮ್ ಮತ್ತು ಅವರ 6 ಒಡನಾಡಿಗಳು ಸೈಂಟ್ ವಿನ್ಸೆಂಟ್ ಡಿ ಪಾವ್ಲ್ ಸೊಸೈಟಿಯನ್ನು ಸ್ಥಾಪಿಸಿದರು. ಇಂದು ಇದು ವಿಶ್ವದ 158 ದೇಶಗಳಲ್ಲಿ ಹರಡಿದೆ. 8 ಲಕ್ಷಕ್ಕೂ ಅಧಿಕ ಸದಸ್ಯರು ಮತ್ತು ಹತ್ತು ಲಕ್ಷಕ್ಕೂ ಮಿಕ್ಕಿ ಸ್ವಯಂಸೇವಕರು ದೀನ ದಲಿತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ 1863 ಇಸವಿಯಲ್ಲಿ ಮುಂಬಯಿಯಲ್ಲಿ ಸ್ಥಾಪನೆಗೊಂಡು, ಪ್ರಸ್ತುತ 7225 ಘಟಕಗಳು ಮತ್ತು 65546 ಸದಸ್ಯರನ್ನು ಹೊಂದಿದೆ.
ಸೆಂಟ್ರಲ್ ಕೌನ್ಸಿಲ್ ಅಧ್ಯಕ್ಷ ಜ್ಯೋ ಕುವೆಲ್ಲೊ ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಲಿಗೊರಿ ಫೆರ್ನಾಂಡಿಸ್, (ಕಾರ್ಯದರ್ಶಿ, ಸೆಂಟ್ರಲ್ ಕೌನ್ಸಿಲ್), ಕ್ಲೆರೆನ್ಸ್ ಮಚಾದೊ(ಕೋಶಾಧಿಕಾರಿ, ಸೆಂಟ್ರಲ್ ಕೌನ್ಸಿಲ್),
ಫಿಲೋಮಿನಾ ಮಿನೆಜೆಸ್ (ಸಂಚಾಲಕಿ, ಶತಮಾನೋತ್ಸವ ಆಚರಣೆ ಸಮಿತಿ) ಹಾಗೂ
ಲೊಯ್ಡ್ ರೇಗೊ(ಸಂಚಾಲಕರು, ಮಾಧ್ಯಮ ಸಮಿತಿ) ಉಪಸ್ಥಿತರಿದ್ದರು.












