ಇತ್ತೀಚಿನ ಸುದ್ದಿ
ಜನ್ಮಾಷ್ಟಮಿ ಸಂಭ್ರಮ: ಕಡಲ ನಗರಿಯಲ್ಲಿ ಹೂವಿನ ವ್ಯಾಪಾರಕ್ಕೆ ಕೊಂಚ ಅಡ್ಡಿಯಾದ ಮಳೆರಾಯ
05/09/2023, 18:35
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಕಡಲನ ನಗರಿ ಮಂಗಳೂರಿನಲ್ಲಿ ಹೂವಿನ ವ್ಯಾಪಾರ ಭರದಿಂದ ಸಾಗಿತ್ತು. ನಗರದ ಆಯಕಟ್ಟಿನ ಪ್ರದೇಶದಲ್ಲಿ ಹೊರಜಿಲ್ಲೆಯ ವ್ಯಾಪಾರಿಗಳು ಹೂ ಮಾರಾಟದಲ್ಲಿ ತೊಡಗಿರುವುದು ಕಂಡು ಬಂತು. ಆದರೆ ಮಳೆ ಸ್ವಲ್ಪ ಅಡ್ಡಿಯಾಯಿತು.
ನಗರದ ಹೃದಯ ಭಾಗವಾದ ಹಂಪನಕಟ್ಟೆಯ ಪುರಭವನದ ಎರಡೂ ಬದಿಯ ಫುಟ್ ಪಾತ್ ನಲ್ಲಿ ಹೂವಿನ ವ್ಯಾಪಾರ ಮೇಳೈಸಿತು. ಆದರೆ ಇವತ್ತು ಬೆಳಗ್ಗಿನಿಂದ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸರಾಗ ವ್ಯಾಪಾರಕ್ಕೆ ತೊಡಕಾಯಿತು. ಪುರಭವನದ ಸುತ್ತಮುತ್ತ, ಅಂಡರ್ ಪಾಸ್ ನ ಲೇಡಿಗೋಶನ್ ಬದಿಯಲ್ಲಿ ಹೂವಿನ ವ್ಯಾಪಾರಿಗಳು ಸೇವಂತಿಗೆ, ಗೊಂಡೆ ಹೂವು, ಕಾಕಡ, ಕನಕಾಂಬರ ಇಟ್ಟು ಗ್ತಾಹಕರನ್ನು ಆಕರ್ಷಿಸುತ್ತಿದ್ದರು. ಅದೇ ರೀತಿ ಲಾಲ್ ಭಾಗ್ ನಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಹೊರ ಜಿಲ್ಲೆಗಳಿಂದ ಬಂದ ವ್ಯಾಪಾರಿಗಳು ಭರ್ಜರಿ ವ್ಯಾಪಾರ ನಡೆಸುತ್ತಿದ್ದರು. ಮಂಗಳೂರು ಸೆಂಟ್ರಲ್ ಮಾರ್ಕೆಟ್, ಉರ್ವ ಮಾರ್ಕೆಟ್, ಅಳಕೆ, ಬಿಜೈ, ಕಾರ್ ಸ್ಟ್ರೀಟ್ ಮಾರುಕಟ್ಟೆಗಳಲ್ಲಿ ಕೂಡ ಹೂವಿನ ವ್ಯಾಪಾರ ಭರ್ಜರಿ ಯಾಗಿ ನಡೆಯಿತು. ಹೂವಿನ ದರ ಕೂಡ ಕೊಂಚ ಜಾಸ್ತಿಯೇ ಇತ್ತು.