ಇತ್ತೀಚಿನ ಸುದ್ದಿ
ನೈತಿಕ ಅಧಃಪತನದತ್ತ ಸಾಗಿದೆಯೇ ಕನ್ನಡ ವಿಶ್ವವಿದ್ಯಾಲಯ?: ಇದು ಎಂ.ಫಿಲ್, ಪಿಎಚ್‌ಡಿ ಮಾರಾಟಕ್ಕಿಟ್ಟ ಅಂಗಡಿಯಾಗುವುದು ಬೇಡ
18/02/2025, 19:41

ಕೆ.ಶಿವು ಲಕ್ಕಣ್ಣವರ ಹುಬ್ಬಳ್ಳಿ
info.reporterkarnataka@gmail.com
ದೇಶದಲ್ಲೇ ಇದೊಂದು ವಿಶಿಷ್ಟ ವಿಶ್ವವಿದ್ಯಾಲಯವಾಗಬೇಕು ಎಂಬ ಕನಸಿತ್ತು, ಆಗುತ್ತದೆ ಎಂಬ ನಿರೀಕ್ಷೆಯಿತ್ತು. ಕನ್ನಡ ವಿಶ್ವವಿದ್ಯಾಲಯ ಹುಟ್ಟಿದ ಹೊತ್ತು ಕನ್ನಡ ಎಂದರೆ ಭಾಷೆ ಮಾತ್ರವಲ್ಲ, ಅದು ಬದುಕು, ಅದು ಸಂಸ್ಕೃತಿ ಎಂಬ ಕಣ್ಣೋಟಗಳಿದ್ದವು.
ಹಾಗೆಂದು ’ಕನ್ನಡದ ಹೆಸರಿನ ವಿಶ್ವವಿದ್ಯಾಲಯದ ಅಗತ್ಯವಿಲ್ಲ, ಮುಂದೊಂದು ದಿನ ಇದೂ ಉಳಿದೆಲ್ಲ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಂತಾಗುತ್ತದೆ’ ಎಂಬ ಮಾತುಗಳೇನೂ ಕಡಿಮೆ ಇರಲಿಲ್ಲ.
ಆದರೆ ಇಂತಹದ್ದೊಂದು ವಿಶ್ವವಿದ್ಯಾಲಯವೊಂದರ ಅಗತ್ಯವಿದೆ ಎಂದು ಮನಗಂಡು ಮನವರಿಕೆ ಮಾಡಿಕೊಟ್ಟ ಮನಸ್ಸುಗಳು ಹೆಚ್ಚಿದ್ದವು. ಹಾಗೆಂದೇ ಕನ್ನಡದ ’ಅತ್ಯುತ್ತಮ’ ಎನ್ನಬಹುದಾದ ಚಿಂತಕರು ಕಂಡ ಕನಸು, ರೂಪಿಸಿದ ಆಶಯ ಕನ್ನಡದ ಜನತೆಯಾದಿಯಾಗಿ ಶೈಕ್ಷಣಿಕ ಸಾರಸ್ವತ ಜಗತ್ತು ಈ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಬೆಂಬಲಿಸಿತು.
ಈ ಕುರಿತಂತೆ ರಾಜ್ಯಾದ್ಯಂತ ಬಹುದೊಡ್ಡ ಸಾರ್ವಜನಿಕ ಚರ್ಚೆಯೊಂದು ರೂಪುಗೊಂಡಿತ್ತು. ಕನ್ನಡದ ಮಹತ್ವದ ಚಿಂತಕರು ’ಕನ್ನಡ ವಿಶ್ವವಿದ್ಯಾಲಯ ಏಕೆ ಬೇಕು?’ ಎಂದು ಸಮರ್ಥಿಸಿಕೊಂಡು ಈ ವಿವಿಯ ಬಗ್ಗೆ ಕನಸು ಕಂಡಿದ್ದರು. ವಿಶ್ವವಿದ್ಯಾಲಯದ ಸ್ಥಾಪನೆಯೊಂದಿಗೆ ಕನ್ನಡಿಗರ ಮಹತ್ವಾಕಾಂಕ್ಷೆಯ ತಳಹದಿ ನಿರ್ಮಾಣವಾಗಬೇಕು ಎಂಬುದು ಅವರ ಆಶಯವಾಗಿತ್ತು.
ಆದರೆ, ಈ ವಿಶ್ವವಿದ್ಯಾಲಯ ಸ್ಥಾಪನೆಯಾದ ಮೊದಲ ದಶಕದಲ್ಲೇ ಇದು ಹಿಡಿಯಬಹುದಾದ ಹಾದಿಯ ಸೂಚನೆಗಳು ವ್ಯಕ್ತವಾಗತೊಡಗಿದ್ದವು. ಎರಡನೆಯ ದಶಕದಲ್ಲೇ ಇದರ ಅವನತಿಯ ಲಕ್ಷಣಗಳು ಮೈದಾಳಿ ನಿಂತವು. ಅಂತೆಯೇ ದೇಶದಲ್ಲೇ ಮಹತ್ವದ ಜ್ಞಾನಕೇಂದ್ರವಾಗಬೇಕಿದ್ದ ಕನ್ನಡ ವಿಶ್ವವಿದ್ಯಾಲಯ ತಾನು ಹುಟ್ಟಿದ ಎರಡೂವರೆ ದಶಕವಷ್ಟೇ ಕಳೆವ ಹೊತ್ತಿಗೆ ಅದರ ಆಶಯಗಳು ಅಧಃಪತನಗೊಂಡು ಇದೀಗ ಹುಸಿಗೊಂಡ ನಿರೀಕ್ಷೆಗಳ ಸ್ಮಾರಕವಾಗಿ ರೂಪಧರಿಸಿರುವುದನ್ನು ಇಂದಿನ ವಿದ್ಯಮಾನಗಳು ಸಾಬೀತುಪಡಿಸುತ್ತಿವೆ.
ಕನ್ನಡ ಸಂಸ್ಕೃತಿಯ ಅವ್ಯಕ್ತ ಧಾರೆ ದರ್ಶನಗಳನ್ನು ತಡಕಾಡಿ ಅದರ ಅರ್ಥಸೂಕ್ಷ್ಮಗಳನ್ನು ವಿಶ್ಲೇಷಿಸುವ, ಅರ್ಥೈಸಿಕೊಳ್ಳುವ ವರ್ತಮಾನದ ವಾಸ್ತವಗಳಿಗೆ ಅದನ್ನು ಮುಖಾಮುಖಿ ಮಾಡುತ್ತಲೆ ಮರುರೂಪಿಸುವ ಪ್ರಯತ್ನಗಳು ವಿಶ್ವವಿದ್ಯಾಲಯದಲ್ಲಿ ನಿತ್ಯ ನಡೆಯುತ್ತಿದ್ದವು.
ವಿದ್ವಾಂಸ ಅನಕ್ಷರಸ್ಥರೆಂಬ ಭೇದವಳಿದು ಕನ್ನಡದ ಅತ್ಯುತ್ತಮ ಚಿಂತಕ ಕಲಾವಿದರೊಂದಿಗೆ ವಾಗ್ವಾದಗಳು ನಡೆಯುತ್ತಿದ್ದವು. ಅಕ್ಷರದ ಹಂಗಿಲ್ಲದ ಜಾನಪದ ವ್ಯಕ್ತಿತ್ವಗಳೊಂದಿಗೆ ಅಕಾಡೆಮಿಕ್ ವಿದ್ವಾಂಸರು ವಿದ್ಯಾರ್ಥಿಗಳಂತೆ ಕುಳಿತು ಅರಿವನ್ನು ಪಡೆಯುತ್ತಿದ್ದರು. ಇಂತಹ ಸಂದರ್ಭದಲ್ಲಿಯೇ ಈ ವಿಶ್ವವಿದ್ಯಾಲಯದ ಮೊದಲ ಕುಲಪತಿಗಳಾಗಿದ್ದ ಚಂದ್ರಶೇಖರ ಕಂಬಾರರಿಗೆ ಯಾವ ಶಾಲೆ ಇತ್ಯಾದಿ ಸರ್ಟಿಫಿಕೇಟುಗಳ ಹಂಗಿಲ್ಲದ ಜ್ಞಾನವಂತರು, ತಿಳಿವಳಿಕೆದಾರರು ಕಾಡು-ಕುಗ್ರಾಮಗಳಲ್ಲಿಯೂ ಇರಬಲ್ಲರೆಂಬ ಅರಿವು ಹೊಳೆದು ಅಂತಹವರನ್ನು ಗುರುತಿಸಿ ನಾಡೋಜರೆಂಬ ಅಭಿದಾನವನ್ನಿಟ್ಟು ಗೌರವಿಸುವ ಇರಾದೆ ಹೊಮ್ಮಿದ್ದು. ಹಲವು ವರ್ಷಗಳಲ್ಲಿ ಅಂತಹ ಅರ್ಹ ಜ್ಞಾನಿಗಳಿಗೆ ಪ್ರಶಸ್ತಿಯನ್ನು ಕೊಟ್ಟು ವಿಶ್ವವಿದ್ಯಾಲಯ ತನ್ನ ಗೌರವವನ್ನು ಗಳಿಸಿಕೊಳ್ಳಲಾರಂಭಿಸಿತ್ತು.
ಸರಿಸುಮಾರು ಇಪ್ಪತ್ತು ವರ್ಷಗಳ ಕಾಲ ಈ ಅದ್ಭುತ ಪರಂಪರೆ ಎಲ್ಲರು ಹುಬ್ಬೇರಿಸುವಂತೆ ಮಾಡಿತು.
ಯಾವುದೋ ವಿಶ್ವವಿದ್ಯಾಲಯ ಕಾರ್ಪೊರೇಟ್ ‘ಗುರುವಿಗೆ’ ಡಾಕ್ಟರೇಟ್ ಕೊಟ್ಟರೆ, ಕನ್ನಡ ವಿಶ್ವವಿದ್ಯಾಲಯವು ತಮಟೆ ವಾದನದಲ್ಲಿ ವಿಸ್ಮಯದ ಸಾಧನೆ ಮಾಡಿದ ಕೋಲಾರದ ಮುನಿವೆಂಕಟಪ್ಪನಿಗೆ ನಾಡೋಜ ಪದವಿ ನೀಡಿತ್ತು. ಕನ್ನಡದ ನೆಲ, ನೈಸರ್ಗಿಕ ಸಂಪತ್ತನ್ನು ಕೊಳ್ಳೆಹೊಡೆದ ಜನಪೀಡಕರಿಗೆ ಬೇರೆ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ನೀಡಿದರೆ, ಕನ್ನಡ ವಿವಿ ಗಿಡಮರ ಬೆಳೆಸಿ ವೃಕ್ಷಮಾತೆ ಎನ್ನಿಸಿಕೊಂಡ ಸಾಲುಮರದ ತಿಮ್ಮಕ್ಕನನ್ನು ನಾಡೋಜಳನ್ನಾಗಿ ಮಾಡಿತ್ತು.
ಇದು ಕೇವಲ ಪದವಿ ಪ್ರದಾನದ ವಿಷಯ ಮಾತ್ರವಲ್ಲ, ಕನ್ನಡ ದೇಶದ ನಿಜವಾದ ಸತ್ವವನ್ನು ಗುರುತಿಸುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಮಾಡುತ್ತಾ ಬಂದಿತು.
ಇಲ್ಲಿನ ಹಲವು ಪ್ರತಿಭಾವಂತ ಅಧ್ಯಾಪಕರ ಸಂಶೋಧನೆಯ ಫಲವಾಗಿ ಪ್ರಸಾರಾಂಗ ಮಹತ್ವದ ಕೃತಿಗಳನ್ನು ಪ್ರಕಟಿಸಿತು. ಕರ್ನಾಟಕದಲ್ಲಿಯೇ ಕನ್ನಡ ವಿವಿಯ ಪ್ರಕಟಣೆಗಳಿಗೆ ವಿಶಿಷ್ಟ ಸ್ಥಾನಮಾನ ಲಭಿಸಿತು. ಭಾಷೆ, ಸಾಹಿತ್ಯ, ಸಮಾಜ ವಿಜ್ಞಾನಗಳ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳು ಕನ್ನಡದ ತಿಳವಳಿಕೆಯ ಕ್ಷೇತ್ರವನ್ನು ಹಿಗ್ಗಿಸಿದವು. ಸಂಶೋಧನೆ, ಅಧ್ಯಾಪನ ಮತ್ತು ಬೋಧನೆಗಳು ಹದವರಿತ ಇಲ್ಲಿನ ಪ್ರಕಟಣೆಗಳು ಆಕರ ಗ್ರಂಥಗಳಾಗಿ ಮಹತ್ವ ಪಡೆದವು. ಆದರೆ ಬರುಬರುತ್ತಾ ಪ್ರಸಾರಾಂಗವೂ ಬರಡಾಗತೊಡಗಿತು.
ಇಂತಹ ಪ್ರಕಟಣೆಗಳ ಮಹತ್ವದ ಬಗ್ಗೆ ಕನಸೇ ಇಲ್ಲದ ಮಹಾನುಭಾವರೂ ಸಹ ಪ್ರಸಾರಾಂಗದ ಚುಕ್ಕಾಣಿ ಹಿಡಿದರು. ಅಲ್ಲಿಗೆ ಪ್ರಸಾರಾಂಗ ಎಂಬ ಸಂಸ್ಥೆಯ ಜೀವವೇ ನಲುಗಿಹೋಯಿತು. ಇನ್ನು ಅಧ್ಯಯನಾಂಗ ಎಂಬ ಒಂದು ಶೈಕ್ಷಣಿಕ ವಿಭಾಗವೊಂದು ಅಲ್ಲಿದೆ. ಅದು ಶೈಕ್ಷಣಿಕ ಚಟುವಟಿಕೆ, ಬೋಧನೆ, ಪರೀಕ್ಷೆ, ಮೌಲ್ಯಮಾಪನ ಮತ್ತು ಪದವಿ ನೀಡುವ ಮಹತ್ವದ ಕೆಲಸಕ್ಕಾಗಿ ಅದನ್ನು ತೆರೆಯಲಾಗಿದೆ. ಆದರೆ ತೀರಾ ಇತ್ತೀಚೆಗೆ ಈ ಸಂಸ್ಥೆಯೂ ಹಳ್ಳ ಹಿಡಿದಿದೆ. ಎಂ.ಫಿಲ್, ಪಿಎಚ್‌ಡಿ ಪದವಿಗಳನ್ನು ಮಾರಾಟಕ್ಕಿಟ್ಟಿರುವ ಅಂಗಡಿಯಂತೆ ಅದು ರೂಪಾಂತರಗೊಂಡಿದೆ.
ಕೆಲವು ವರ್ಷಗಳ ಹಿಂದೆ ನಿರ್ದೇಶಕನಾಗಿದ್ದ, ಈಗ ನಿವೃತ್ತಿ ಹೊಂದಿರುವ ಜನಪದ ‘ತಜ್ಞ’ನೊಬ್ಬ ಎಂ.ಫಿಲ್, ಪಿಎಚ್.ಡಿ ಪದವಿಗಳನ್ನು ಅಕ್ಷರಶಃ ಮಾರಾಟ ಮಾಡಿದ್ದಾನೆ ಎಂಬ ಗುಮಾನಿಗಳು ವಿವಿಯ ಆವರಣದಲ್ಲಿ ಹರಿದಾಡುತ್ತಿವೆ. ಈ ಕುರಿತು ತನಿಖೆ ನಡೆಯುವ ಅಗತ್ಯವೂ ಇದೆ.
ಕಂಬಾರ ಮತ್ತು ಕಲಬುರ್ಗಿಯಂತಹ ಮುನ್ನೋಟ, ದರ್ಶನಗಳಿದ್ದ ವ್ಯಕ್ತಿಗಳು ಹಾಕಿದ್ದ ಭದ್ರ ಅಡಿಪಾಯಕ್ಕೆ ಗೆದ್ದಲು ಹಿಡಿದುಹೋಗಿದೆ. ಜಾತಿ, ಹಣ ಬಲ ಬಳಸಿದ ಅವಿವೇಕಿಗಳು, ಪ್ರಭುತ್ವವನ್ನು ಓಲೈಸುವವರು ಯಾವಾಗ ಕುಲಪತಿಗಳಾದರೋ ಆಗ ಕನ್ನಡ ವಿವಿಯ ಹಣೆಬರಹವೂ ಬದಲಾಯಿತು. ಯಾವ ಮುಂದಾಲೋಚನೆ, ಸ್ವಂತಿಕೆ, ಅರ್ಹತೆ ಮತ್ತು ವ್ಯಕ್ತಿತ್ವವೇ ಇಲ್ಲದ ಜನ ಅಲ್ಲಿಗೆ ಕುಲಪತಿಗಳಾಗಿ ಬಂದರೋ ಆಗ ಆಯಾ ಸರಕಾರಗಳು ವಿವಿಯನ್ನು ಅಧೋಗತಿಗೆ ತಳ್ಳುತ್ತಾ ಬಂದವು.
ಸರಕಾರದ ಅನವಶ್ಯಕ ಮಧ್ಯೆ ಪ್ರವೇಶವು ವಿವಿಯ ಸ್ವಾಯತ್ತತೆಯನ್ನು ಮಾತ್ರವಲ್ಲ, ಅದರ ಚಿಂತನಾಕ್ರಮವನ್ನೇ ಹಾಳು ಮಾಡಿತು. ಜ್ಞಾನ, ವಿನಯ, ವಿದ್ವತ್ತುಗಳ ಸ್ಪರ್ಶ ಗಂಧವೇ ಇರದವರನ್ನೂ ’ನಾಡೋಜ’ರನ್ನಾಗಿಸಿ, ವಿಶ್ವವಿದ್ಯಾಲಯದ ಗೌರವ ಚಿಲ್ಲರೆ ಕಾಸಿಗೆ ಬಿಕರಿಯಾಗಿ ಹೋಗಿತ್ತು.
ಆ ಹಾದಿ, ಈ ಹೊತ್ತಿಗೆ ನಿಚ್ಚಳ ಕೊನೆಯೊಂದನ್ನು ತಲುಪಿದೆ. ಸಮಗ್ರ ಕರ್ನಾಟಕದ ’ಜ್ಞಾನಕೇಂದ್ರವೆಂದು ಭಾವಿಸಿದ್ದ ಈ ವಿಶ್ವವಿದ್ಯಾಲಯದ ಈ ಹೊತ್ತಿನ ಘೋರ ಸತ್ಯವೆಂದರೆ, ಲಂಚಾವತಾರದ ರುದ್ರ ನರ್ತನದ ಆರೋಪಗಳ ಸುರಿಮಳೆಯಾಗತೊಗಿತು.
ಚಂದ್ರಶೇಖರ್ ಕಂಬಾರ, ಕಲಬುರ್ಗಿ ಮತ್ತು ವಿವೇಕ್ ರೈ ನಂತರ ಕುಲಪತಿಗಳಾದ ಅನೇಕರಿಗೆ ಭವಿಷ್ಯದ ಕನಸುಗಳೇ ಇರಲಿಲ್ಲ. ಕುಲಪತಿ ಕುರ್ಚಿ ಸಿಕ್ಕಿದ್ದೇ ಅವರ ಮಹತ್ವಾಕಾಂಕ್ಷೆಯನ್ನು ತಣಿಸಿಬಿಟ್ಟಿತ್ತು. ಸಿಂಡಿಕೇಟ್ ಸದಸ್ಯರ ಜೊತೆ ಸೇರಿ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ಪ್ರತಿಭಾವಂತ ಅಧ್ಯಾಪಕರಿಗೆ ಕಿರುಕುಳ ಕೊಡುವುದು ಅವರ ಮೊದಲ ಆದ್ಯತೆಯಾಗಿಬಿಟ್ಟಿತು. ಸಂಶೋಧನೆಯೇ ಮುಖ್ಯ ಕಾಯಕವಾಗಿದ್ದ ಆವರಣದೊಳಗೆ ಅವಿವೇಕಿಗಳು ರಾರಾಜಿಸಿಲಾರಂಭಿಸದರು.
ಸಂಶೋಧನೆ ಬದಿಗೆ ಸರಿದು ಪುಢಾರಿಗಿರಿ ಮತ್ತು ಉಡಾಫೆಗಳು ಅನೇಕ ಅಧ್ಯಾಪಕರನ್ನು ಆವರಿಸಿಬಿಟ್ಟವು. ಮೊದಲ ತಲೆಮಾರಿನ ಅನೇಕ ವಿದ್ವಾಂಸರು ನಿವೃತ್ತಿಯಾಗಿರುವ ಈ ಹಂತದಲ್ಲಿ ಕನ್ನಡ ವಿವಿಯ ಬೌದ್ಧಿಕ ಲೆಗಸಿಯನ್ನು ಮುಂದುವರೆಸುವ ಎರಡನೇ ತಲೆಮಾರನ್ನು ಈಗ ಹುಡುಕಬೇಕಿದೆ.
ಕಲಬುರ್ಗಿಯವರ ನಂತರ ವಿಶ್ವವಿದ್ಯಾಲಯದಲ್ಲಿ ಭ್ರಷ್ಟಾಚಾರದ ಪ್ರಕರಣಗಳು ನಡೆಯುತ್ತಿರುವ ಗುಮಾನಿಗಳು ಇದ್ದವು ಆದರೆ ಈಗ ಲಂಚವೆಂಬ ಕಿರೀಟವು ಬೌದ್ಧಿಕ ದಿವಾಳಿತನವೆಂಬ ದೇಹದ ಮೇಲೆ ರಾರಾಜಿಸುತ್ತಿದೆ ಎಂಬ ಭಾವನೆ ಮೂಡುತ್ತದೆ ಆರೋಪಗಳನ್ನು ಕೇಳಿದರೆ. ಇದೇ ವಿಶ್ವವಿದ್ಯಾಲಯದಲ್ಲಿ ಎರಡು-ಎರಡೂವರೆ ದಶಕ ದುಡಿದು ನಿವೃತ್ತರಾದವರ ಪಿಂಚಣಿ ಜಾರಿಯಾಗಲು ಲಂಚ!
ಅದೂ ಒಟ್ಟು ಪಿಂಚಣಿ ಮೊತ್ತದ ಶೇಕಡಾ 2ರಿಂದ 3ರಷ್ಟು! ಮುಂಬಡ್ತಿಗೆ ಲಂಚ! ಅದು ಒಬ್ಬರಿಗೆ ಸುಮಾರು 6 ಲಕ್ಷ ಲಂಚ!
ಹೀಗೆಯೇ ಸೇವಾಪೂರ್ವ ಅವಧಿ ಘೋಷಿಸಲು ಹೊಸ ನೌಕರರಿಂದ ಹಣ ವಸೂಲಿ, ವಿದ್ಯಾರ್ಥಿಗಳು ಪಡೆಯುವ ಶಿಷ್ಯವೇತನ ಮಂಜೂರು ಮಾಡಲು ಲಂಚ, ಅನುಕಂಪದ ಆಧಾರದಲ್ಲಿ ನೀಡುವ ನೌಕರಿಗೂ ಲಂಚ, ಸಂಶೋಧನಾ ವಿದ್ಯಾರ್ಥಿಗಳ ಕೊಲೋಕ್ವಿಯಂ ನಡೆಸಲು ಲಂಚ, ತಾತ್ಕಾಲಿಕ ಬೋಧಕ ಬೋಧಕೇತರ ಸಿಬ್ಬಂದಿಗೆ ಸಂಬಳ ನೀಡಲು ಲಂಚ…!
ಇವು ಯಾರೋ ಸಂಬಂಧವಿಲ್ಲದವರ ಅನಧಿಕೃತ ಹರಟೆ ಮಾತುಗಳಲ್ಲ, ಬದಲಿಗೆ ’ಕನ್ನಡ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ, ಬೋಧಕೇತರ ನೌಕರರ ಸಂಘದ’ ಅಧಿಕೃತ ಲೆಟರ್‌ಹೆಡ್‌ಗಳಲ್ಲಿ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪತ್ರಗಳಲ್ಲಿ ಹೆಸರು ಸಹಿತ ದಾಖಲಾದ ಅಧಿಕೃತ ಆರೋಪಗಳಿವು. ಈ ಲಂಚ, ಭ್ರಷ್ಟಾಚಾರ, ಅವ್ಯವಹಾರ ಶೈಕ್ಷಣಿಕ ಕಾರ್ಯ ಹೊರತಾದ ಎಲ್ಲ ಬಗೆಯ ನೀತಿಬಾಹಿರ ನಡವಳಿಕೆಗಳು ಈ ತನಕ ರಾಜ್ಯದ ಬಹುತೇಕ ಪತ್ರಿಕೆಗಳಲ್ಲಿ ಜಗಜ್ಜಾಹೀರಾಗಿದೆ.
ಹಲವು ಇನ್ನಿತರ ಮಾಧ್ಯಮಗಳು ಕೂಡ ವರದಿ ಮಾಡಿವೆ. ಎಂದಿನಂತೆ ಆಡಳಿತ ವರ್ಗ, ಸಂಸ್ಥೆಯ ಮುಖ್ಯಸ್ಥರು ’ಸತ್ಯಕ್ಕೆ ದೂರ’ ’ಮಿಥ್ಯಾರೋಪ’ವೆಂಬ ಯಾಂತ್ರಿಕ ಪದ ಬಳಸಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ಆರೋಪಗಳಲ್ಲಿ ಎಷ್ಟು ಸತ್ಯವಿದೆ, ಎಷ್ಟು ಸುಳ್ಳಿದೆ ಎಂಬುದನ್ನು ಶೋಧಿಸಿ-ವಿಚಾರಿಸಿ, ತನಿಖೆ ಮಾಡಿ ಕಂಡುಕೊಳ್ಳಬೇಕಾದ್ದು ಕಷ್ಟ ಕ್ಲಿಷ್ಟವೇನಿಲ್ಲ. ತ್ವರಿತವಾಗಿ ತನಿಖೆ ಮಾಡಬಾರದೇಕೆ ಎಂಬುದು ಪ್ರಜ್ಞಾವಂತರ ಅಳಲು-ಆಕ್ರೋಶ.
ಚಂದ್ರಶೇಖರ ಕಂಬಾರರಿಂದ ಬಿ.ಎ.ವಿವೇಕರೈವರೆಗೆ ಈ ವಿಶ್ವವಿದ್ಯಾಲಯದ ಕುಲಪತಿಗಳ ನೇಮಕಾತಿ ಅರ್ಹತೆಯನ್ನಾಧರಿಸಿದ ಘನತೆಯಿಂದಲೇ ನಡೆಯಿತೆನ್ನಬೇಕು. ಆ ಬಳಿಕ ಕುಲಪತಿ ನೇಮಕದ ಹಿನ್ನೆಲೆಯಲ್ಲಿ ’ಇತರೆ’ ಸಂಗತಿಗಳು ಕೆಲಸ ಮಾಡತೊಡಗಿದವು.
ಜೆಡಿಎಸ್-ಬಿಜೆಪಿ ಮೈತ್ರಿ ಸರಕಾರದ ಅವಧಿಯಲ್ಲಿ ಕುಲಪತಿ ಆಯ್ಕೆಯ ಹಿಂದೆ ಅರ್ಹತೆ ಮೀರಿ ಬೇರೆ ಸಂಗತಿಗಳ ಪಾತ್ರ ಗೋಚರಿಸತೊಡಗಿತು ಎಂಬ ಗುಲ್ಲು ಎಲ್ಲೆಡೆ ಇದೆ.
ಸರಕಾರ ಸೂಚಿಸಿದ ಹೆಸರುಗಳ ಪೈಕಿ ಕುಲಪತಿಗಳ ಆಯ್ಕೆಯನ್ನು ನಿರ್ಧರಿಸುವುದು ರಾಜ್ಯಪಾಲರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ತಮ್ಮ ಪಕ್ಷದ ಅಜೆಂಡಾಕ್ಕೆ ಹೊಂದಿಕೊಳ್ಳುವಂತೆ ಕೆಲಸ ಮಾಡುವ, ಭ್ರಷ್ಟಾತಿಭ್ರಷ್ಟ ಎಂಬ ಕುಖ್ಯಾತಿಗೆ ಪಾತ್ರರಾದ ಕುಲಪತಿಗಳ ವಿರುದ್ಧ, ಆಳುವ ಪಕ್ಷದ ಸರಕಾರ ನಿಷ್ಪಕ್ಷಪಾತ ತನಿಖೆ ನಡೆಸುತ್ತದೆ ಎಂಬ ಭರವಸೆ ಎಲ್ಲಿ ಬರಬೇಕು ಎನ್ನುತ್ತಾರೆ ಆರೋಪಿಸುತ್ತಿರುವ ಅಧ್ಯಾಪಕ-ವಿದ್ಯಾರ್ಥಿ ವೃಂದ.
ಕನ್ನಡದ ಚಿಂತಕರು, ಕನ್ನಡಪರ ಸಂಘ ಸಂಸ್ಥೆಗಳು ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಈ ದುರಾಚಾರವನ್ನು ತಡೆಯುವಲ್ಲಿ ಹಾಗೂ ಈತನಕ ಅನಾಚಾರಗೈದವರನ್ನು ಶಿಕ್ಷಿಸುವಲ್ಲಿ ಧ್ವನಿ ಎತ್ತಬೇಕು ಎನ್ನುತ್ತಾರೆ ನೊಂದ ಪ್ರಾಧ್ಯಾಪಕರು ಮತ್ತು ವಿಶ್ವವಿದ್ಯಾಲಯದ ಹಲವು ವಿದ್ಯಾರ್ಥಿಗಳು.
ಈ ವಿಶ್ವವಿದ್ಯಾಲಯದ ಅಧಃಪತನಕ್ಕೆ ಬರೀ ಮರುಗದೇ ಮರಳಿ ಕಟ್ಟುವ ನಿಟ್ಟಿನಲ್ಲಿ ಚಿಂತನೆಗಳಾಗಬೇಕಿದೆ. ಈ ನಿಟ್ಟಿನಲ್ಲಿ ಚಿಂತಕರು, ಕನ್ನಡಪರ ಸಂಘ ಸಂಸ್ಥೆಗಳು, ಲೇಖಕ ಕಲಾವಿದರು ಧ್ವನಿ ಎತ್ತದೇ ಹೋದರೇ ಕನ್ನಡದ ಹೆಸರಿನಲ್ಲಿ ಅತಿ ವಿಶಿಷ್ಟವಾದ, ಎಲ್ಲ ವಿ.ವಿಗಳಂತಲ್ಲದ ಕನ್ನಡ ನಾಡು ನುಡಿ ಸಮಗ್ರ ಬದುಕಿನ ಚಿಂತನೆ, ಅಭಿವೃದ್ಧಿಗಳ ಸಂಶೋಧನೆಗೆಂದು ಸ್ಥಾಪಿಸಲಾದ ಈ ವಿಶ್ವವಿದ್ಯಾಲಯವನ್ನು ಮರುರೂಪಿಸದೇ ಹೋದರೆ ಕನ್ನಡ ಪರ ಕಾಳಜಿಯೂ ಮುಕ್ಕಾಗಬಲ್ಲದು.
ಕನ್ನಡಿಗರ ಕನಸು, ಕನ್ನಡಿಗರ ಆಸ್ತಿಯಾದ ಕನ್ನಡ ವಿಶ್ವವಿದ್ಯಾಲಯ ಅದರ ಮೂಲ ಆಶಯದಂತೆ ಮರುಸ್ಥಾಪಿಸುವ ಪ್ರಯತ್ನಕ್ಕೆ ಕನ್ನಡದ ಚಿಂತನೆ ನಡೆಯಬೇಕು..!