ಇತ್ತೀಚಿನ ಸುದ್ದಿ
ಅಕ್ರಮ ಮರ ಕಡಿತ: ದಂಡ, ಶಿಕ್ಷೆ ಪ್ರಮಾಣ 10 ಪಟ್ಟು ಹೆಚ್ಚಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ
26/03/2025, 21:58

ಬೆಂಗಳೂರು(reporterkarnataka.com): ಅಕ್ರಮ ಮರ ಕಡಿತಲೆಗೆ ಪ್ರಸಕ್ತ ವಿಧಿಸಲಾಗುತ್ತಿರುವ ದಂಡ ಮತ್ತು ಶಿಕ್ಷೆಯ ಪ್ರಮಾಣವನ್ನು ಹತ್ತು ಪಟ್ಟು ಹೆಚ್ಚಿಸಲು ಅನುವಾಗುವಂತೆ ವೃಕ್ಷ ಸಂರಕ್ಷಣಾ ಕಾಯಿದೆ 1972ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ತತ್ಸಂಬಂಧ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿರುವ ಸಚಿವರು, “ದೊಡ್ಡ ಸಂಖ್ಯೆಯಲ್ಲಿ ಮರಗಳನ್ನು ಕಡಿಯುವುದು, ಮಾನವ ಹತ್ಯೆ ಮಾಡಿದಂತೆ ಅಥವಾ ಅದಕ್ಕಿಂತ” ಎಂದು ಘನ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿರುವುದನ್ನು ಉಲ್ಲೇಖಿಸಿದ್ದಾರೆ.
ಅಕ್ರಮವಾಗಿ ಕತ್ತರಿಸಿದ ಪ್ರತಿ ಮರಕ್ಕೆ 1 ಲಕ್ಷ ರೂ. ದಂಡ ವಿಧಿಸಿರುವ ವಿಚಾರದಲ್ಲಿ ಕರುಣೆ ತೋರುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿರುವುದನ್ನೂ ತಮ್ಮ ಟಿಪ್ಪಣಿಯಲ್ಲಿ ಉಲ್ಲೇಖಿಸಿರುವ ಸಚಿವರು, ಅಕ್ರಮ ಮರಗಳ ಕಡಿತಲೆಗೆ ವಿಧಿಸುವ ದಂಡದ ಪ್ರಮಾಣ ಹೆಚ್ಚಳದ ಅಗತ್ಯ ಪ್ರತಿಪಾದಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲುಗಳನ್ನು ಇಡೀ ವಿಶ್ವ ಎದುರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ, ಇರುವ ಒಂದೇ ಭೂಮಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಲು, ಪ್ರಕೃತಿ, ಪರಿಸರ ಉಳಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದೂ ತಿಳಿಸಿದ್ದಾರೆ.
ಸಂಸ್ಕೃತದಲ್ಲಿ “ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಮಾತಿದೆ. ಈಗ ಇದನ್ನು “ವೃಕ್ಷೋ ರಕ್ಷತಿ ರಕ್ಷಿತಃ’ ಎಂದು ಬದಲಾಯಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ಹತ್ತಾರು, ನೂರಾರು ವರ್ಷದಿಂದ ಬೆಳೆದ ಮರಗಳನ್ನು ಸಂರಕ್ಷಿಸದಿದ್ದರೆ ಮುಂದೆ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ವೃಕ್ಷ ಸಂರಕ್ಷಣಾ ಕಾಯಿದೆಗೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಆದೇಶ ನೀಡಿದ್ದಾರೆ.