ಇತ್ತೀಚಿನ ಸುದ್ದಿ
ಹುಬ್ಬಳ್ಳಿ: ಕಟೌಟ್ ಬಿದ್ದು ಗಾಯಗೊಂಡವರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ; ಘಟನೆ ಬಗ್ಗೆ ಸಿಎಂ ವಿಷಾದ
24/01/2026, 20:04
ಹುಬ್ಬಳ್ಳಿ(reporterkarnataka.com): ಕಟೌಟ್ ಬಿದ್ದು ಗಾಯಗೊಂಡವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಚಾರಿಸಿದರು. ಈ ಸಂದರ್ಭದಲ್ಲಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು.




ಇಂದು ಮಂಟೂರು ರಸ್ತೆಯಲ್ಲಿ ಕಟೌಟ್ ಅಳವಡಿಸುತ್ತಿದ್ದಾಗ, ಆಕಸ್ಮಿಕವಾಗಿ ಕಟೌಟ್ ಬಿದ್ದು ಗಾಯಗೊಂಡ ಮೂವರು ಗಾಯಾಳುಗಳು ನಗರದ ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಸತಿರಹಿತರಿಗೆ ನೂತನ ಮನೆಗಳ ವಿತರಣೆ ಕಾರ್ಯಕ್ರಮದ ನಂತರ, ಹುಬ್ಬಳ್ಳಿ ಸುಚಿರಾಯು ಆಸ್ಪತ್ರೆಗೆ ಭೇಟಿ ನೀಡಿದರು.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳಾದ ಬ್ಯಾಹಟ್ಟಿಯ ಶಂಕರ ಹಡಪದ (28), ಹುಬ್ಬಳ್ಳಿಯ ಶಾಂತಾ ಕ್ಯಾರಕಟ್ಟಿ ( 60) ಮತ್ತು ಧಾರವಾಡದ ಲಕ್ಷ್ಮಿ ನಗರದ ಮಂಜುನಾಥ (33) ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಘಟನೆಯ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ಗಾಯಾಳುಗಳು ಸಂಪೂರ್ಣ ಗುಣಮುಖರಾಗುವವರೆಗೆ ಉಚಿತವಾಗಿ ಅಗತ್ಯವಾದ ಉತ್ತಮ ಚಿಕಿತ್ಸೆ, ಔಷಧಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ವಸತಿ ಸಚಿವ ಜಮೀರ ಅಹ್ಮದ ಖಾನ್, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ವಿಧಾನ ಪರಿಷತ್ ಸರಕಾರಿ ಮುಖ್ಯ ಸಚೇಕ ಸಲೀಂ ಅಹ್ಮದ್,ಶಾಸಕರಾದ ಪ್ರಸಾದ ಅಬ್ಬಯ್ಯ, ಎನ್.ಎಚ್.ಕೋನರಡ್ಡಿ, ಪ್ರಭಾರ ಜಿಲ್ಲಾದಿಕಾರಿ ಭುವನೇಶ ಪಾಟೀಲ್, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ.ಹೊನಕೇರಿ ಹಾಗೂ ಸುಚಿರಾಯು ಆಸ್ಪತ್ರೆಯ ತಜ್ಞ ವೈದ್ಯರು, ಸಿಬ್ಬಂದಿಗಳು, ವಿವಿಧ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.












