ಇತ್ತೀಚಿನ ಸುದ್ದಿ
ಮರ್ಯಾದೆಗೇಡು ಹತ್ಯೆ | ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾಗಲಿ: ದಲಿತ ಯುವ ಮುಖಂಡ ಅಭಿಲಾಷ್ ಹುರಳಿಕೊಪ್ಪ ಒತ್ತಾಯ
27/12/2025, 13:36
ಸೊರಬ(reporterkarnataka.com): ಹುಬ್ಬಳ್ಳಿಯ ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಇಡೀ ನಾಗರೀಕ ಸಮಾಜ ತಲೆಬಾಗುವಂತಾಗಿದ್ದು, ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು ಎಂದು ದಲಿತ ಸಮಾಜದ ಯುವ ಮುಖಂಡ ಅಭಿಲಾಷ್ ಹುರಳಿಕೊಪ್ಪ ಒತ್ತಾಯ ಮಾಡಿದ್ದಾರೆ.
ಮಾನ್ಯ ಪಾಟೀಲ್ ಎಂಬ ಯುವತಿ ಅನ್ಯ ಜಾತಿಯ ಹುಡುಗನ ಜೊತೆ ಮದುವೆಯಾಗಿದ್ದಾಳೆ ಎಂದು ಕೋಪಗೊಂಡ ಪಾಲಕರು ಗರ್ಭಿಣಿ ಮಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದೂ, ಹುಡುಗನ ಕುಟುಂಬದವರ ಮೇಲೂ ಹಲ್ಲೇ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಅಮಾನವೀಯ ಘಟನೆಗಳು ಕರ್ನಾಟಕದಲ್ಲಿ ಹಲವು ನಡೆದಿವೆ. ಹತ್ಯೆ ಮಾಡಿದವರನ್ನು ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರೀತಿಸಿ ಮದುವೆಯಾದ ಕಾರಣಕ್ಕೆ ಏಳು ತಿಂಗಳ ಗರ್ಭಿಣಿ ಮಗಳನ್ನೇ ಹೆತ್ತ ತಂದೆ ಕೊಲೆ ಮಾಡಿರುವುದು ಕ್ರೂರ ಘಟನೆಯಾಗಿದೆ. 12ನೇ ಶತಮಾನದಲ್ಲಿ ಬಸವಣ್ಣ ಅವರು ಅಂತರ್ಜಾತಿ ವಿವಾಹವನ್ನು ಮಾಡಿ ಜಾತಿಯತೆಯನ್ನು ಹೋಗಲಾಡಿಸಲು ಅಡಿಪಾಯ ಹಾಕಿದರು. ಬಸವಣ್ಣನವರು ಹುಟ್ಟಿದ ನಾಡಿನಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಅಕ್ಷಮ್ಯ. ಗದಗದಲ್ಲಿ 2019 ರಲ್ಲಿ ಗಂಗಮ್ಮ ಮತ್ತು ರಮೇಶ್ ಎನ್ನುವವರು ಅಂತರ್ಜಾತಿ ವಿವಾಹವಾದಾಗ ದೀಪಾವಳಿ ಹಬ್ಬದ ನೆಪದಲ್ಲಿ ಕರೆಸಿಕೊಂಡು ಗಂಗಮ್ಮಳ ಸಂಬಂಧಿಕರು ಇಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಸಾಯಿಸಿದರು. ಮಂಡ್ಯ, ಕೋಲಾರ, ವಿಜಯಪುರ, ಹಾಸನದಲ್ಲಿ ಸಾಕಷ್ಟು ಮರ್ಯಾದ ಹತ್ಯೆ ಘಟನೆಗಳು ಜರುಗಿವೆ. ಇವು ಕೇವಲ ವರದಿಯಾಗಿರುವ ಪ್ರಕರಣಗಳು, ವರದಿಯಾಗದ ಪ್ರಕರಣಗಳು ಅದೆಷ್ಟೋ ಇದ್ದಾವೋ ತಿಳಿಯದು. ಕೂಡಲೇ ಹಂತಕರನ್ನು ಬಂಧಿಸುವ ಜೊತೆಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.












