ಇತ್ತೀಚಿನ ಸುದ್ದಿ
ಬೆಂಗಳೂರಿನಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯಿಂದ ಹೋಳಿ ಆಚರಣೆ: ಓಕುಳಿಯಾಟ
16/03/2025, 19:58

ಬೆಂಗಳೂರು(reporterkarnataka.com): ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆ ವತಿಯಿಂದ ರಾಜಾಜಿನಗರದ ರಾಮಮಂದಿರ ಮೈದಾನದಲ್ಲಿ ಭಾನುವಾರ ಅದ್ದೂರಿ ಹೋಳಿ ಹಬ್ಬ ಆಚರಿಸಲಾಯಿತು.
ಕಾಮನ ಮೂರ್ತಿ ದಹನ ಮಾಡಿ ಎಲ್ಲರೂ ಸಂಭ್ರಮದಿಂದ ಒಬ್ಬರಿಗೊಬ್ಬರು ಬಣ್ಣದ ಓಕುಳಿ ಆಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾಥ ಮೇಟಿ ಮಾತನಾಡಿ, ಕಾಮ, ಕ್ರೋಧ, ಲೋಭ, ಮದ, ಮತ್ಸರ ಎಂಬ ಕೆಟ್ಟ ಗುಣಗಳನ್ನು ಕಾಮ ದಹನದ ಮೂಲಕ ಸುಟ್ಟು ಹಾಕಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಹೋಗಬೇಕು ಎಂದು ಹೋಳಿ ಹಬ್ಬ ಆಚರಿಸುತ್ತೆವೆ ಎಂದು ಹೇಳಿದರು.
ಹಿರಿಯರಾದ ಡಾ. ಬಸವರಾಜ ದಿಂಡೂರು ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಐದು ದಿನ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತೇವೆ. ನಮ್ಮ ಭಾಗದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಹೋಳಿ ಹಬ್ಬ ಆವರಿಸುತ್ತೇವೆ. ಉತ್ತರ ಕರ್ನಾಟಕ ಸಂಸ್ಕೃತಿ ಬೆಳೆಸುವಲ್ಲಿ ಯಾವಾಗಲೂ ಎತ್ತರದಲ್ಲಿ ಇರುತ್ತದೆ ಎಂದು ಹೇಳಿದರು.
ಕಿರುತೆರೆ ನಟಿ ಶ್ರೀದೇವಿ ಮೆಳ್ಳಿಗಟ್ಟಿ ಮಾತನಾಡಿ, ಉತ್ತರ ಕರ್ನಾಟಕದ ಗಂಡು ಹಬ್ಬ ಹೋಳಿ ಹಬ್ಬವನ್ನು ಎಲ್ಲರೂ ಸೇರಿ ಸಂಭ್ರಮದಿಂದ ಆಚರಿಸಿ, ನಾವೆಲ್ಲರೂ ಬಣ್ಣ ಆಡುವ ಮೂಲಕ ಖುಷಿಪಟ್ಟು ನಮ್ಮ ಸಂಸ್ಕೃತಿ ಉಳಿಸಲು ಈ ರೀತಿಯ ಹಬ್ಬಗಳನ್ನು ಆಚರಣೆ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಶಂಕರ ಪಾಗೋಜಿ, ಕಾರ್ಯದರ್ಶಿ ಬಸಯ್ಯ ನಂದಿಕೋಲ, ಶಾಂತೇಶ್ ಹಿರೇಮಠ, ಶಿವನಗೌಡ ಬಿರಾದಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.