ಇತ್ತೀಚಿನ ಸುದ್ದಿ
ತೀರ್ಥಹಳ್ಳಿ: ಹಿಂದುಳಿದ ವರ್ಗಗಳ ಮಹಿಳಾ ಪಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ
10/10/2024, 12:28

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಸರ್ಕಾರದಲ್ಲಿ ಹಣದ ಕೊರತೆ ಇದೆ. ಹಾಗಾಗಿ ಕೊಡುವ ಸೌಲಭ್ಯದಲ್ಲೂ ಕಡಿಮೆಯಾಗುತ್ತಿದೆ. ನನ್ನ ರಾಜಕೀಯ ಅವಧಿಯಲ್ಲಿ ಬಟ್ಟೆ ಹಾಕುವವರಿಗೆ ಕೊಟ್ಟ ಹಾಗೆ ಹೊಲಿಗೆ ಯಂತ್ರವನ್ನು ಕೊಟ್ಟಿದ್ದೇವೆ. ಆದರೆ ಹೊಲಿಗೆ ಹೊಲಿಯುವವರ ಸಂಖ್ಯೆ ಕಡಿಮೆ ಆಗಿದೆ. ಇತ್ತೀಚಿಗೆ ರೆಡಿಮೇಡ್ ಬಟ್ಟೆಗಳು ಬಂದಿರುವುದರಿಂದ ಹೊಲಿಗೆ ಹೊಲೆಯುವವರ ಸಂಖ್ಯೆ ಕಡಿಮೆ ಆಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಸೋಮವಾರ ಪಟ್ಟಣದ ಗ್ರಾಮೀಣಾಭಿವೃದ್ಧಿ ಭವನದಲ್ಲಿ ಹಿಂದುಳಿದ ವರ್ಗಗಳ ಮಹಿಳಾ ಪಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಿ ಮಾತನಾಡಿದ ಅವರು, 300 ರಕ್ಕೂ ಹೆಚ್ಚು ಅರ್ಜಿ ಬಂದಿತ್ತು. ಆದರೆ ನಮಗೆ 36 ಅರ್ಜಿಗೆ ಯಂತ್ರವನ್ನು ವಿತರಿಸಲು ಅವಕಾಶ ಇತ್ತು. ಸರ್ಕಾರದಿಂದ ಸಿಗುವುದು ಕಡಿಮೆ. ಯಾರಿಗೆಲ್ಲ ಸಿಗಲಿಲ್ಲ ಅವರಿಗೆ ಮುಂದಿನ ಭಾರಿ ನೀಡಲಾಗುತ್ತದೆ ಎಂದು ತಿಳಿಸಿದರು.
ಯಾರು ಸಿನಿಮಾ ನೋಡದಿದ್ದರೂ ಟೈಲರ್ ಸಿನಿಮಾ ನೋಡಬೇಕು. ಅದರಲ್ಲಿ ಬರುವ ಹೊಸ ಹೊಸ ಡಿಸೈನ್ ನೋಡಿ ಬಟ್ಟೆ ಹೊಲಿಯಬೇಕಾಗುತ್ತದೆ, ಕಾಲ ಬದಲಾವಣೆ ಆದಂತೆ ಉಡುಪಗಳಲ್ಲಿಯೂ ಬದಲಾವಣೆ ಆಗುತ್ತದೆ. ಈಗ ಬ್ಲೌಸ್ ಹೊಲಿಯಲು 3000 ರೂ ಅಂತೆ. ಹಾಗಾಗಿ ರೆಡಿಮೇಡ್ ಬಟ್ಟೆಗಳು ಬಂದಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ಸರ್ಕಾರದಿಂದ ನೀಡಿರುವ ಈ ಸೌಲಭ್ಯ ಬದುಕಿಗೆ ನೆರವು ಕೊಡುತ್ತದೆ. ಸರ್ಕಾರದಿಂದ ನೀಡಲಾಗುತ್ತಿರುವ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ. ಮೊದಲೆಲ್ಲ ಊಟಕ್ಕೆ ಅನ್ನ ಇಲ್ಲದ ಪರಿಸ್ಥಿತಿ ಇತ್ತು ಆದರೆ ಈಗ ಹಾಗಿಲ್ಲ. ಯಂತ್ರವನ್ನು ಪಡೆದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದರು.
ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿ ಮಹಾದೇವಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲತೆ ಹೊಂದಬೇಕು, ಹಿಂದುಳಿದ ವರ್ಗದ ಕಟ್ಟ ಕಡೆಯ ವ್ಯಕ್ತಿಗೂ ಸಹ ಯೋಜನೆ ಸಿಗಬೇಕು, ಹಲವು ಯೋಜನೆ ಅಡಿಯಲ್ಲಿ ಬೇರೆ ಬೇರೆ ರೀತಿಯ ಸೌಲಭ್ಯಗಳಿವೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುತ್ತಾರೆ ಹಾಗೆ ಮಹಿಳೆಯರು ಆರ್ಥಿಕವಾಗಿ ಸದೃಢವಾಗಬೇಕು ಎಂದು ತಿಳಿಸಿದರು.