ಇತ್ತೀಚಿನ ಸುದ್ದಿ
ಹಿಜಾಬ್: ಮಧ್ಯಂತರ ಪರಿಹಾರ ಕೋರಿ ಭಂಡಾರ್ಕರ್ಸ್ ಕಾಲೇಜಿನ ಪದವಿ ವಿದ್ಯಾರ್ಥಿನಿಯರ ಮನವಿ; ಹೈಕೋರ್ಟ್ ತಿರಸ್ಕಾರ
23/02/2022, 11:24
ಬೆಂಗಳೂರು(reporterkarnataka.com): ಉಡುಪಿಯ ಭಂಡಾರ್ಕಾರ್ಸ್ ಕಾಲೇಜ್ ಆಫ್ ಆರ್ಟ್ಸ್ ಎಂಡ್ ಸಾಯನ್ಸ್ ಇಲ್ಲಿನ ಇಬ್ಬರು ಪದವಿ ವಿದ್ಯಾರ್ಥಿನಿಯರು ತಮಗೆ ತರಗತಿಗಳಿಗೆ ಹಿಜಾಬ್ ಧರಿಸಿ ಆಗಮಿಸಲು ಅನುಮತಿಲು ಕಾಲೇಜಿಗೆ ಸೂಚನೆ ನೀಡಬೇಕೆಂದು ಕೋರಿ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಮಧ್ಯಂತರ ಪರಿಹಾರ ಒದಗಿಸಲು ಜಸ್ಟಿಸ್ ಕೃಷ್ಣ ಎಸ್. ದೀಕ್ಷಿತ್ ಅವರ ಏಕ ಸದಸ್ಯ ಪೀಠ ಸೋಮವಾರ ನಿರಾಕರಿಸಿದೆ.
ಹೈಕೋರ್ಟಿನ ಪೂರ್ಣ ಪೀಠ ಫೆಬ್ರವರಿ 10ರಂದು ಹೊರಡಿಸಿದ ಮಧ್ಯಂತರ ಆದೇಶ ಈಗ ಊರ್ಜಿತದಲ್ಲಿರುವುದರಿಂದ ಹಾಗೂ ಹಿಜಾಬ್ ಪ್ರಕರಣದ ವಿಚಾರಣೆಯನ್ನು ಪೂರ್ಣ ಪೀಠ ಮುಂದುವರಿಸಿರುವುದರಿಂದ ತನಗೆ ಈ ಹಂತದಲ್ಲಿ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದು ಏಕಸದಸ್ಯ ಪೀಠ ಹೇಳಿದೆ.
ಅರ್ಜಿದಾರರು ಕಾಲೇಜಿನಲ್ಲಿ ಬಿಬಿಎ ಕೋರ್ಸ್ ಓದುತ್ತಿದ್ದು ಹಾಗೂ ಪ್ರವೇಶಾತಿ ಪಡೆದಂದಿನಿಂದ ಅವರು ಕಾಲೇಜು ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸುತ್ತಿದ್ದರು ಹಾಗೂ ಮುಸ್ಲಿಂ ವಿದ್ಯಾರ್ಥಿಗಳಿಗೆ ಹಿಜಾಬ್ ಧರಿಸಲು ಅನುಮತಿ ನೀಡುವ ನಿರ್ದಿಷ್ಟ ನಿಯಮವಿದೆ. ಆದರೂ ಅರ್ಜಿದಾರರು ಮತ್ತು ಇತರ ಮುಸ್ಲಿಂ ವಿದ್ಯಾರ್ಥಿನಿಯರನ್ನು ಮೊದಲ ಬಾರಿ ಫೆಬ್ರವರಿ 3ರಂದು ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿ ತಡೆದಿದ್ದರು, ಕರ್ನಾಟಕ ರಾಜ್ಯ ವಿವಿ ಕಾಯಿದೆ ಅಥವಾ ಯುಜಿಸಿ ಕಾಯಿದೆಯಡಿ ಅಸಭ್ಯ ಉಡುಗೆ ಧರಿಸಬಾರದೆಂಬ ನಿಯಮದ ಹೊರತಾಗಿ ಯಾವುದೇ ಸಮವಸ್ತ್ರ ನಿರ್ದಿಷ್ಟಪಡಿಸಲಾಗಿಲ್ಲ ಎಂದೂ ಅರ್ಜಿದಾರರು ವಾದಿಸಿದ್ದಾರೆ.
“ಕಾನೂನಿನ ಪ್ರಮುಖ ಪ್ರಶ್ನೆಗಳು ಪೂರ್ಣ ಪೀಠದ ಮುಂದೆ ದಿನನಿತ್ಯದ ಆಧಾರದ ಮೇಲೆ ಚರ್ಚೆಯಾಗುತ್ತಿರುವಾಗ, ಪೂರ್ಣ ಪೀಠವು ನೀಡಿದ ಒಂದು ಮಧ್ಯಂತರ ಪರಿಹಾರವನ್ನು ಹೊರತುಪಡಿಸಿ ಅರ್ಜಿದಾರರಿಗೆ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲಾಗುವುದಿಲ್ಲ” ಎಂದು ಏಕಸದಸ್ಯ ಪೀಠ ಹೇಳಿದೆ.