ಇತ್ತೀಚಿನ ಸುದ್ದಿ
ಹೈಕೋರ್ಟ್ ಆದೇಶ ಉಲ್ಲಂಘಿಸಿ ವಿದ್ಯಾರ್ಥಿಗಳ ಮರುಹಂಚಿಕೆಗೆ ಕ್ರಮ? ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ರಾಜಿನಾಮೆಗೆ ಆಗ್ರಹ
01/10/2023, 15:10
ಬೆಂಗಳೂರು(reporterkarnataka.com): ಖಾಸಗಿ ಮೆಡಿಕಲ್ ಕಾಲೇಜು ವಿಚಾರದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯು ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದು, ಈ ಮೂಲಕ ರಾಜ್ಯದ ವೈದ್ಯಕೀಯ ಶಿಕ್ಷಣವನ್ನೇ ಅಯೋಮಯ ಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ- ಪಂಗಡ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಆರೋಪಿಸಿದೆ. ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ವಿಚಾರದಲ್ಲಿನ ಗೊಂದಲಗಳಿಗೆ ವೈದ್ಯಕೀಯ ಶಿಕ್ಷಣ ಸಚಿವರೇ ನೇರ ಹೊಣೆಯಾಗಿದ್ದು ಸಚಿವ ಶರಣ್ ಪಾಟೀಲ್ ಅವರು ಕೂಡಲೇ ನೀಡಬೇಕೆಂದು ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್ ಒತ್ತಾಯಿಸಿದ್ದಾರೆ.
ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜಿಗೆ ಎನ್ ಎಂಸಿಯಿಂದ ಅನುಮತಿ ಇನ್ನೂ ಸಿಕ್ಕಿಲ್ಲ ಎಂದು ಗೊಂದಲ ಉಂಟಾಗಿದ್ದು ಕೆಲವು ವಿದ್ಯಾರ್ಥಿಗಳು ತಮ್ಮನ್ನು ಬೇರೆ ಕಾಲೇಜಿಗೆ ವರ್ಗಾಯಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಎನ್ ಎಂಸಿ ನಿಯಮಾನುಸಾರ ವಿದ್ಯಾರ್ಥಿಗಳು ಒಂದು ಕಾಲೇಜಿಗೆ ಪ್ರವೇಶ ಪಡೆದರೆ ಬೇರೆಡೆ ವರ್ಗಾವಣೆಗೆ ಅವಕಾಶ ಇಲ್ಲ. ಈ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು 23.09.2023 ರಂದು ಎನ್ ಎಂಸಿಗೆ ಪತ್ರ ಬರೆದು ವಿದ್ಯಾರ್ಥಿಗಳ ವರ್ಗಾವಣೆಗೆ ಅನುಮತಿ ಕೋರಿದ್ದಾರೆ. ಎನ್ ಎಂಸಿ ಕಡೆಯಿಂದಲೂ ಅನುಮತಿ ಪತ್ರ ಬಂದಿದೆ ಎಂದು ಸರ್ಕಾರ ಹೇಳಿಕೊಂಡಿದ್ದು, ಈ ಸಂಗತಿಯನ್ನು ಹೈಕೋರ್ಟ್ ಗಮನಕ್ಕೆ ತರಲಾಗಿದೆ. ಸದ್ಯವೇ ಪರೀಕ್ಷೆ ಎದುರಾಗಲಿದ್ದು ತಕ್ಷಣಕ್ಕೆ ಬೇರೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂಬ ವಾದವೂ ಹೈಕೋರ್ಟ್ ಮುಂದೆ ಇದೆ.
ಈ ಕುರಿತಂತೆ ಸೆಪ್ಟೆಂಬರ್ 26 ರಂದು ಸರ್ಕಾರದ ವಾದವನ್ನು ಆಲಿಸಿರುವ ಹೈಕೋರ್ಟ್ ವಿಭಾಗೀಯ ಪೀಠವು, ಬೇರೆ ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಇದೆಯೇ? ಎಲ್ಲಿ ಬರೆಯಲು ಅವಕಾಶ ಇದೆ? ನಿಯಮಾನುಸಾರ ಅವಕಾಶ ಇದೆ ಎಂಬಿತ್ಯಾದಿ ಮಾಹಿತಿಯನ್ನೊಳಗೊಂಡಂತೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ಪ್ರಮಾಣಪತ್ರ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದು ಪರೀಕ್ಷೆ ಸಂಬಂಧ ತಾತ್ಕಾಲಿಕ ಕ್ರಮವಾಗಿರಬೇಕೆಂದೂ, ಮೂಲ ಅರ್ಜಿ ಕುರಿತ ವಿಚಾರಣೆ ಪೂರಗೊಳ್ಳುವವರೆಗೂ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ವರ್ಗಾಯಿಸಲು ಆದೇಶ ನೀಡಲ್ಲ ಎಂದೂ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.
ಆದರೆ ವೈದ್ಯಕೀಯ ಶಿಕ್ಷಣ ಇಲಾಖೆಯು ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹೊರಡಿಸಿ ಹೊಸ ವಿವಾದವನ್ನು ಹುಟ್ಟುಹಾಕಿದೆ. ತಾತ್ಕಾಲಿಕ ವ್ಯವಸ್ಥೆ ಸಂಬಂಧ ಸಲ್ಲಿಸಲು ನ್ಯಾಯಪೀಠ ನಿರ್ದೇಶನ ನೀಡಿದ್ದರೆ, ಕೆಇಎ ಸೆಪ್ಟೆಂಬರ್ 29ರಂದು ಸುತ್ತೋಲೆ ಹೊರಡಿಸಿ ಶಾಶ್ವತ ಮರುಹಂಚಿಕೆ ಸಂಬಂಧ ಕ್ರಮಕ್ಕೆ ಮುಂದಾಗಿದೆ. ಶನಿವಾರ ಬೆಳಿಗ್ಗೆ ಮರು ಹಂಚಿಕೆ ಪ್ರಕ್ರಿಯೆಗೆ ಹಾಜರಾಗುವಂತೆ ಶುಕ್ರವಾರ ಸಂಜೆ ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿದೆ.
ರಾತ್ರೋ ರಾತ್ರಿ ಹೊರಬಿದ್ದ ಸುತ್ತೋಲೆಯಿಂದ ವಿದ್ಯಾರ್ಥಿ ಸಮುದಾಯ ಗಲಿಬಿಲಿಗೊಂಡಿದೆ. ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅಖಾಡಕ್ಕೆ ಧುಮುಕಿರುವ ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ- ಪಂಗಡ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ವೈದ್ಯಕೀಯ ಸಚಿವರಿಗೆ ಪತ್ರ ಬರೆದು ಆಕ್ರೋಶ ಹೊರಹಾಕಿದೆ.
ಶನಿವಾರ ಮಧ್ಯಾಹ್ನ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ಭೇಟಿ ನೀಡಿ ಕಾರ್ಯನಿರ್ವಾಹಕ ನಿರ್ದೇಶಕರಿಗೆ ದೂರು ನೀಡಿದ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್, ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯು ಖಾಸಗಿ ಮೆಡಿಕಲ್ ಕಾಲೇಜುಗಳನ್ನು ಮಾಫಿಯಾ ಹಿಡಿತಕ್ಕೆ ಒಪ್ಪಿಸಲು ಪಿತೂರಿ ನಡೆಸಿದೆ ಎಂದು ಆರೋಪಿಸಿದರು. ವಿದ್ಯಾರ್ಥಿಗಳು ಎಲ್ಲಿ ಪರೀಕ್ಷೆ ಬರೆಯಬಹುದು ಎಂಬ ಬಗ್ಗೆ ಅಫಿಡವಿಟ್ ಸಲ್ಲಿಸಲು ಹೈಕೋರ್ಟ್ ನಿರ್ದೇಶನ ನೀಡಿದ್ದರೂ ಸರ್ಕಾರ ಕೆಇಎ ಮೂಲಕ ವಿದ್ಯಾರ್ಥಿಗಳನ್ನು ಬೇರೆ ಕಾಲೇಜಿಗೆ ಶಾಶ್ವತವಾಗಿ ವರ್ಗಾಯಿಸಲು ಕ್ರಮ ಕೈಗೊಂಡಿದೆ ಎಂದು ದೂರಿದರು. ಹೈಕೋರ್ಟ್ ಆದೇಶಕ್ಕೆ ವ್ಯತಿರಿಕ್ತವಾಗಿ ಸುತ್ತೋಲೆ ಹೊರಡಿಸಿ, ಕ್ರಮ ಕೈಗೊಂಡಿರುವ ಬೆಳವಣಿಗೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರೇ ಹೊಣೆಯಾಗಿದ್ದು ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಲೋಕೇಶ್ ರಾಮ್ ಒತ್ತಾಯಿಸಿದ್ದಾರೆ.