ಇತ್ತೀಚಿನ ಸುದ್ದಿ
ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
30/12/2025, 20:10
ಬೆಂಗಳೂರು(reporterkarnataka.com): ರಾಜ್ಯಕ್ಕೆ ಹೊರದೇಶಗಳಿಂದ ಅಕ್ರಮ ವಲಸೆ ಬರುತ್ತಿರುವವರ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಕೇರಳದ ಚುನಾವಣೆಯ ಕಾವು ಕರ್ನಾಟಕದಲ್ಲಿ ಏನು ಕೆಲಸ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಡ್ರಗ್ಸ್ ಮಾಫಿಯ ನಿರತ ಅಕ್ರಮ ವಲಸಿಗರ ವಿರುದ್ಧ ಎಲ್ಲ ಇಲಾಖೆಗಳು ಸೇರಿ ಕ್ರಮ ಕೈಗೊಳ್ಳಲಿ ಎಂದು ವಿನಂತಿಸಿದರು.
ರಾಜ್ಯ ಸರಕಾರವೂ ರೋಹಿಂಗ್ಯಾಗಳನ್ನು ಪತ್ತೆ ಹಚ್ಚಿ ಹೊರಹಾಕಲು ಸಹಕರಿಸಬೇಕಿದೆ. ರಾಜ್ಯದಲ್ಲಿ ಯಾರ ಸರಕಾರ ನಡೆಯುತ್ತಿದೆ. ಯಾರಿಗಾಗಿ ಸರಕಾರ ನಡೆಯುತ್ತಿದೆ ಎಂದು ಪ್ರಶ್ನಿಸಿದರು. ರಾಜ್ಯದ ಮೂಗುದಾರ ಎಲ್ಲಿದೆ? ಕೆ.ಸಿ.ವೇಣುಗೋಪಾಲ್ ಅವರು ಕರ್ನಾಟಕದ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ಟ್ವೀಟ್ ಮಾಡಿ ಸರಕಾರ ಹೇಗೆ ನಡೆಸಬೇಕೆಂದು ಕಿವಿಮಾತು ಹೇಳಿದ್ದಾರೆ. ಅವರದೇ ರಾಜ್ಯದ ಪಿಣರಾಯಿ ವಿಜಯನ್ ಕರ್ನಾಟಕದಲ್ಲಿ ಏನು ಮಾಡಬೇಕು, ಏನು ಮಾಡಬಾರದೆಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಶಿವಕುಮಾರರಿಗೆ ಸರಕಾರ ನಡೆಸಲು ಸಾಂವಿಧಾನಿಕ ಹಕ್ಕು, ಶಕ್ತಿ ಇದೆಯೇ ಇಲ್ಲವೇ? ಎಂದು ಕೇಳಿದರು. ಕೋಗಿಲು ಅಕ್ರಮ ವಲಸಿಗರನ್ನು ನೋಟಿಸ್ ಕೊಟ್ಟು 167 ಮನೆಗಳನ್ನು ತೆರವುಗೊಳಿಸಿದ್ದು ಒಳ್ಳೆಯ ಕೆಲಸ. ತೆರವನ್ನು ಕೆ.ಸಿ.ವೇಣುಗೋಪಾಲ್ ಪ್ರಶ್ನಿಸಿದ್ದಾರೆ. ಪಿಣರಾಯಿ ವಿಜಯನ್ ಒತ್ತಡ ತರುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಈ ವಲಸಿಗರು ಯಾರು? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದರು. ಅಲ್ಲಿದ್ದವರೆಲ್ಲ ಪಶ್ಚಿಮ ಬಂಗಾಲದಿಂದ ಬಂದವರು. ಅಲ್ಲಿಯೂ ಸಮರ್ಪಕ ವಿಳಾಸ ಇಲ್ಲದವರು. ಹೆಬ್ಬಾಳದ ಅಮೀನ್‍ಕೆರೆಯಲ್ಲಿ ವಾಸ ಮಾಡುವವರು. ಅಕ್ರಮ ಚಟುವಟಿಕೆ ಮಾಡುವವರು ಯಾರೆಂದು ಪೊಲೀಸ್ ಕಮೀಷನರ್ ಗೆ ಪತ್ರ ಬರೆದಿದ್ದೇನೆ. ಕ್ರಮ ಕೈಗೊಳ್ಳಲು ಹೇಳಿದ್ದೆ. ಅದೇ ರೀತಿಯ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಕೋಗಿಲುವಿನಲ್ಲಿ ತೆರವು ಮಾಡಿದ್ದಾರೆ ಎಂದು ವಿವರಿಸಿದರು.
ದೆಹಲಿ ಒತ್ತಡಕ್ಕೆ ಮಣಿದು ಸಿಎಂ, ಡಿಸಿಎಂ ಸಭೆ ನಡೆಸುತ್ತಾರೆ. ಬಹಳ ದಿನದಿಂದ ಅವರು ಒಟ್ಟಾಗಿಲ್ಲ; ಕುರ್ಚಿ ಉಳಿಸಿಕೊಳ್ಳಲು ಒಬ್ಬರು, ಕುರ್ಚಿಯನ್ನು ಪಡೆಯಲು ಒಬ್ಬರು ಸ್ಪರ್ಧೆಯ ಮೇಲೆ ದೆಹಲಿ ಹೈಕಮಾಂಡನ್ನು ಸಂತುಷ್ಟಗೊಳಿಸಲು ಒಟ್ಟಿಗೆ ಸಭೆ ನಡೆಸಿ ತೆರವುಗೊಳಿಸಿ ಅಕ್ರಮ ವಲಸಿಗರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆ ಕೊಡಲು ನಿರ್ಧರಿಸಿದ್ದಾರೆ. ಯಾರವರು? ಯಾವಾಗ ಅರ್ಜಿ ಸಲ್ಲಿಸಿದ್ದಾರೆ. ಕರ್ನಾಟಕದ ಅರ್ಜಿ ಸಲ್ಲಿಸಿದವರ ಗತಿ ಏನು ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಹಲವೆಡೆ, ಸರಕಾರಿ ಭೂಮಿಗಳಲ್ಲಿ ಇರುವ ಅಕ್ರಮ ವಲಸಿಗರ ಪಟ್ಟಿ ಯಾವಾಗ ತಯಾರು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಅಮೀನ್‍ಕೆರೆ ಒಂದು ಸ್ಯಾಂಪಲ್ ಅಷ್ಟೇ. ಅಕ್ರಮ ವಲಸಿಗರಿಗೆ, ರೋಹಿಂಗ್ಯಾಗಳಿಗೆ ಸರಕಾರಿ ಮನೆ ಕೊಟ್ಟರೆ ಬೆಂಗಳೂರು ಏನಾದೀತು ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಸರಕಾರ, ಪೊಲೀಸರು ಅಕ್ರಮ ವಲಸಿಗರ ಗುರುತಿಸುವಿಕೆ ವಿಚಾರದಲ್ಲಿ ಸಹಕಾರ ಕೊಡದೇ ಇದ್ದರೆ ಇವರನ್ನು ಪತ್ತೆ ಮಾಡುವುದು ಹೇಗೆ ಎಂದು ಕೇಳಿದರು.

ನೀವೇ ಅವರಿಗೆ ಮನೆ ಕೊಟ್ಟು, ಸರ್ಟಿಫಿಕೇಟ್ ಕೊಟ್ಟು ಅವರನ್ನು ಖಾಯಂ ಮಾಡುತ್ತಿದ್ದೀರಿ. ಇವರ ಮತದಾರರ ಚೀಟಿ, ಆಧಾರ್ ಕಾರ್ಡನ್ನು ತಕ್ಷಣ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಕರ್ನಾಟಕದ ಪೊಲೀಸರು ಆಧಾರ್ ಕಾರ್ಡ್ ವಶಕ್ಕೆ ಪಡೆಯಬೇಕು. ಅವರು ಪಶ್ಚಿಮ ಬಂಗಾಲದವರೇ? ಅಥವಾ ಬೇರೆ ಕಡೆಯಿಂದ ಬಂದಿದ್ದಾರಾ ಎಂದು ಪತ್ತೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ದೇಶದ ಮತ್ತು ಕರ್ನಾಟಕದ ಉಳಿವಿಗಾಗಿ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಆಗ್ರಹವನ್ನು ಮುಂದಿಟ್ಟರು.
ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ರಾಜ್ಯ ವಕ್ತಾರ ಎಂ.ಜಿ. ಮಹೇಶ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಅವರು ಹಾಜರಿದ್ದರು.













