10:49 PM Tuesday3 - December 2024
ಬ್ರೇಕಿಂಗ್ ನ್ಯೂಸ್
ಕೇರಳದಲ್ಲಿ ಭೀಕರ ರಸ್ತೆ ಅಪಘಾತ: 5 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ದಾರುಣ ಸಾವು ಫೆಂಗಲ್ ಎಫೆಕ್ಟ್: ಬೆಂಗಳೂರಿನಲ್ಲಿ ಸಾಧಾರಣ ಮಳೆ; ಎಂದಿನಂತೆ ತೆರೆದುಕೊಂಡ ಶಾಲಾ- ಕಾಲೇಜು ಕೂಡ್ಲಿಗಿ: ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು; ಇಬ್ಬರ ಬಂಧನ; ಸಾಮಗ್ರಿ ಜಪ್ತಿ ಮಲೆನಾಡಲ್ಲಿ ಫೆಂಗಲ್ ಅಬ್ಬರ: ಮೂಡಿಗೆರೆ ತಾಲೂಕಿನಲ್ಲಿ ಭಾರೀ ಮಳೆ; ಕಾಫಿ ಬೆಳೆಗಾರರು ಕಂಗಾಲು ತುಮಕೂರು: ಭೀಕರ ರಸ್ತೆ ಅಪಘಾತ; 3 ಮಂದಿ ಮಹಿಳೆಯರ ದಾರುಣ ಸಾವು ಜೀ ಕನ್ನಡ ಡ್ರಾಮಾ ಜೂನಿಯರ್ಸ್ ವಿಜೇತೆ ರಿಷಿಕಾ ಕುಂದೇಶ್ವರಗೆ ಮುಖ್ಯಮಂತ್ರಿ ಮೆಚ್ಚುಗೆ ಫೆಂಗಲ್ ಚಂಡಮಾರುತ: ದ.ಕ., ಉಡುಪಿ ಜಿಲ್ಲೆಯ ಶಾಲೆ ಹಾಗೂ ಪಿಯು ಕಾಲೇಜಿಗಳಿಗೆ ನಾಳೆ… ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಂಪನ್ನ: ದಾಖಲೆ ಸಂಖ್ಯೆಯಲ್ಲಿ ನೆರೆದ… ಸಂಘ ಪರಿವಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಕಮಿಷನರ್ ವರ್ಗಾಯಿಸಿ: ಪ್ರತಿಭಟನೆಯಲ್ಲಿ ಮುನೀರ್ ಕಾಟಿಪಳ್ಳ… ನಿಡುವಾಳೆ ಶ್ರೀ ರಾಮೇಶ್ವರ ಕ್ಷೇತ್ರದಲ್ಲಿ ಕಾರ್ತಿಕ ದೀಪೋತ್ಸವ: ಬೆಳಗಿದ 3 ಸಾವಿರಕ್ಕೂ ಹೆಚ್ಚು…

ಇತ್ತೀಚಿನ ಸುದ್ದಿ

ಹೆಣ್ಣಿಗೆ ಬೇಕಾಗಿರುವುದು ಸಹಾನುಭೂತಿ ಅಲ್ಲ; ಸಮಾನತೆ, ಗೌರವ ಹಾಗೂ  ಬದುಕುವ ಹಕ್ಕು

08/03/2022, 11:36

ಹಿತೈಷಿ, ಚಿಕ್ಕಮಗಳೂರು
info.reporterkarnataka@gmail.com

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:,  ಅಂದರೆ ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ಇದು  ವೇದಗಳ ಕಾಲದಿಂದಲೂ ನಾವು ಕೇಳುತ್ತಾ ಬಂದಿರುವ ಮಾತು.  ಅಂದರೆ ನಾವು ಭಾರತೀಯರು ನಮ್ಮ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ವೇದಗಳ ಮೇಲೆ ಅವಲಂಬಿತರಾಗಿದ್ದೇವೆ .  ಸರಿಸುಮಾರು ಎಂಟು ಸಾವಿರ ವರ್ಷಗಳ ಹಿಂದಿನ ಕಾಲವೇ ವೇದಗಳ ಕಾಲ ಎನ್ನಬಹುದು .  ಅಂದಿನಿಂದ ಇಂದಿನವರೆಗೂ  ಇಡೀ ಪ್ರಪಂಚಕ್ಕೆ ಭಾರತೀಯರಾದ ನಾವು ಒಂದೊಳ್ಳೆ ಸಂಸ್ಕಾರದ ಬುನಾದಿಯನ್ನು ಹಾಕಿ ಕೊಟ್ಟಿದ್ದೇವೆ.  ಇಂತಹ ಸಂಸ್ಕಾರ ಕೊಟ್ಟ ನಮಗೆ ನಿಜಕ್ಕೂ ಮಹಿಳಾ ದಿನಾಚರಣೆಯ ಅವಶ್ಯಕತೆಯಾದರೂ ಇದೆಯೇ?? ಏಕೆಂದರೆ ಮಹಿಳೆಯರಿಗೆ  ಒಂದು  ದಿನವನ್ನು ಮೀಸಲಿಟ್ಟು ಈ ದಿನ ನಿಮಗೆ ಎಂದರೆ ನನ್ನ ಪ್ರಕಾರ ಅದು ಮಹಿಳೆಯರಿಗೆ ನಾವು ತೋರುವ ತೀರಾ ಸಣ್ಣ ಗೌರವ.  

ಹೆಣ್ಣು ಎಂದರೇನು ಒಂದು ಶಕ್ತಿ. ಅನಾದಿಕಾಲದಿಂದಲೂ  ಭಾರತೀಯ ಹೆಣ್ಣು   ಹಲವು ಕ್ಷೇತ್ರಗಳಲ್ಲೂ ಸಾಧನೆಯನ್ನು ಮಾಡುತ್ತಾ ಬಂದಿದ್ದಾಳೆ 16ನೇ ಶತಮಾನದಲ್ಲಿ  ಪೋರ್ಚುಗೀಸ್ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ, 18ನೇ ಶತಮಾನದಲ್ಲಿ ಹೈದರಾಲಿಯ ವಿರುದ್ಧ ಒನಕೆ ಹಿಡಿದು ಹೋರಾಡಿದ ಓಬವ್ವ, ರಂತಹ ಹಲವು ಸಾಹಸಿ ಮಹಿಳೆಯರು ಹೋರಾಟಗಾರರು ಒಂದೆಡೆಯಾದರೆ, ನಂತರದಲ್ಲಿ, ಆದುನಿಕ ಯುಗದಲ್ಲಿ ಸಾಡಿಸಿದವರು ಹಲವರು, ಅವರಲ್ಲಿ, ಮೊದಲ  ಮಹಿಳಾ ಮುಖ್ಯಮಂತ್ರಿ  ಸುಚೇತಾ ಕೃಪಲಾನಿ , ಮೊದಲ ಮಹಿಳಾ ಪೈಲಟ್ ಸರಳ ತಕರಾಲ, ಇಂಗ್ಲೀಷ್ ಕಡಲ್ಗಾಲುವೆ ದಾಟಿದ  ಆರತಿ ಶಾ, ಮೊದಲ ಮಹಿಳಾ ಪ್ರಧಾನ  ಮಂತ್ರಿ ಇಂದಿರಾಗಾಂಧಿ ,  ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆ ಬಚೇಂದ್ರಿ ಪಾಲ್ ಹೀಗೆ ಸಾಲು ಸಾಲು ಹೆಸರುಗಳನ್ನು  ಹೇಳುತ್ತಾ  ಹೋಗಬಹುದು. ಇವರೆಲ್ಲಾ ಮದ್ಯ ಯುಗ ಆಧುನಿಕ ಯುಗದ ಮಹಿಳೆಯರಾದರೆ,  ಶಕ್ತಿ ದೇವತೆಗಳೆಲ್ಲಾ  ಮಹಿಳೆಯರೇ!  ದುರ್ಗಿ , ಲಕ್ಷ್ಮಿ , ಸರಸ್ವತಿ ಹೀಗೆ ಪ್ರತಿಯೊಂದಕ್ಕೂ ಅಧಿದೇವತೆ ಈ ಶಕ್ತಿ ಸ್ವರೂಪಿಣಿ. ಹಾಗೆಯೇ ವೇದಗಳ ಕಾಲದಲ್ಲಿ  ಹೆಣ್ಣು  ಸಹ ಋಷಿಯಾಗಿ ಗುರುತಿಸಿಕೊಂಡಿದ್ದಾಳೆ. ಅದರಲ್ಲಿ ಮೈತ್ರೇಯಿ,  ಗಾರ್ಗಿ ಪ್ರಮುಖರು.ಹೀಗೆ ತಾನು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದನ್ನು ಅನಾದಿಕಾಲದಿಂದಲೂ ತೋರಿಸಿಕೊಟ್ಟಿದ್ದಾಳೆ ಸ್ತ್ರೀ.

ಇನ್ನು ಭಕ್ತಿ,  ಪ್ರೀತಿ,  ನಿಸ್ವಾರ್ಥ ಹೀಗೆ ಯಾವುದೇ ಭಾವವಾಗಲಿ ಅದರಲ್ಲಿ ತನ್ನನ್ನೇ   ತಾನು   ಅರ್ಪಿಸುವವಳು  ಹೆಣ್ಣು .  ಅಂದಿನ ಶಬರಿ,  ಸತ್ಯವಾನ್ ಸಾವಿತ್ರಿ , ಸೀತಾದೇವಿ,  ದ್ರೌಪದಿ ಹೀಗೆ ಯಾರೇ ಆಗಿರಬಹುದು ಅಥವಾ ಇಂದಿನ ನಮ್ಮ ಅಮ್ಮ ಅಕ್ಕ-ತಂಗಿ ಹೀಗೆ ಯಾವುದೇ ಒಂದು ಹೆಣ್ಣುಜೀವ , ತನ್ನ ಕುಟುಂಬ , ತನ್ನವರು ಅಂತ ಬಂದಾಗ ಹಿಂದೆ ಮುಂದೆ ಯೋಚಿಸದೆ ತನ್ನೆಲ್ಲವನ್ನೂ ಪಣಕ್ಕಿಟ್ಟು ತನ್ನವರನ್ನು  ರಕ್ಷಿಸುತ್ತಾ ಬಂದಿದ್ದಾಳೆ. ಅದಕ್ಕೆ ಹೇಳಿರಬಹುದು ಕೆಟ್ಟ ಮಕ್ಕಳಿರಬಹುದು ಆದರೆ ಕೆಟ್ಟ ತಾಯಿ ಇರೋದು ಸಾಧ್ಯವಿಲ್ಲ ಎಂದು .ಅಂದರೆ  ಪ್ರತಿ ಹೆಣ್ಣು ಸಹ ತಾಯಿಯ ಪ್ರತಿರೂಪ.  ಇಂತಹ ಹೆಣ್ಣನ್ನು ಆದರದಿಂದ ಗೌರವಿಸುವ ಸಂಪ್ರದಾಯ ನಮ್ಮದು. ಶಿವ-ಪಾರ್ವತಿಯ ಅರ್ಧನಾರೀಶ್ವರ ತತ್ವ ಅದನ್ನೇ ಸಾರುವುದು. 

ಹೆಣ್ಣು ಎಲ್ಲರಿಗೂ ಎಲ್ಲದರಲ್ಲೂ ಸಮಾನಳು. ಅವಳಿಗೂ ಅವಳದೇ ಆದ  ಬದುಕುವ ಹಕ್ಕು ಇದೆ ಎಂಬುದನ್ನು ಹೇಳಿರುವ  ಪರಿಕಲ್ಪನೆಯೇ ಅರ್ಧನಾರೀಶ್ವರ ಅವತಾರ.

ಇಂತಿಪ್ಪ ನಮ್ಮ ಸಮಾಜ ಇಂದು  ಬಂದು ನಿಂತಿರುವ ಸ್ಥಿತಿ ನೋಡಿದಾಗ ಎಂಥವರಿಗೂ ದಿಗ್ಬ್ರಮೆ ಯಾಗುವುದು ಖಂಡಿತ.  ಏಕೆಂದರೆ  ಅಂದು, ಗಂಡಿನಂತೆ ಸರ್ವವೂ ಸಮಾನವಾಗಿ ಬದುಕುತ್ತಿದ್ದ , ವಿದ್ಯಾಭ್ಯಾಸ ಪಡೆಯುತ್ತಿದ್ದ, ತನ್ನ ಇಚ್ಛೆಯ ಬದುಕನ್ನು ನಡೆಸುತ್ತಿದ್ದ  ಹೆಣ್ಣು  ಇಂದು ಪ್ರತಿಯೊಂದಕ್ಕೂ ಆಚಾರ-ವಿಚಾರ  ಎಂಬ ಹೆಸರಿನಲ್ಲಿ ಮೂಲೆಗುಂಪಾಗುವ ಪರಿಸ್ಥಿತಿ ಬಂದಿದೆ.

ಅಂದು ಯಜ್ಞಯಾಗಾದಿಗಳನ್ನು ಉಪನಯನ ಗಳನ್ನು ಮಾಡಿ ಕಲೆ-ಸಾಹಿತ್ಯದಲ್ಲಿ ಗುರುತಿಸಿಕೊಂಡುು,  ಸಕಲ ವಿದ್ಯೆಗಳನ್ನು ಪಾರಂಗತ ಮಾಡಿಕೊಳ್ಳುತ್ತಿದ್ದ  ಅದೇ ಹೆಣ್ಣು ಇಂದು ಬಸ್ಸಿನಲ್ಲಿ “ಡ್ರೈವರ್ ಸೀಟಿನ ಹಿಂದಿನ ನಾಲ್ಕು ಸೀಟುಗಳು ಮಹಿಳೆಯರಿಗೆ ಮೀಸಲು” ಎಂಬ ವಾಕ್ಯವನ್ನು ಬರೆದು ತನ್ನ ಹಕ್ಕನ್ನು ಕೇಳುವ ಪರಿಸ್ಥಿತಿ ಬಂದಿದೆ ಎಂದರೆ ನಾವೇ ಅರ್ಥೈಸಿಕೊಳ್ಳಬೇಕು ಎಂತಹ ಶೋಚನೀಯ ಪರಿಸ್ಥಿತಿಯಲ್ಲಿ ಸಮಾಜ ಇದೆ ಎಂದು.

ಯಾರೋ ಮಾಡಿದ ಕೇವಲ ಪುರುಷರೇ ಪ್ರಧಾನ ಎಂಬ ಕಟ್ಟಲೆಗಳನ್ನು ನಂಬಿ  ಹೆಣ್ಣನ್ನು ಹತ್ತಿಕ್ಕುವ ಪ್ರಯತ್ನ ಮಧ್ಯದಲ್ಲೆಲ್ಲೋ ಶುರುವಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ. ಹಾಗಾದರೆ,  ಹೆಣ್ಣೆಂದರೆ ಕೇವಲ ಭೋಗದ  ವಸ್ತುವೆ?? ಅಲಂಕಾರಿಕ ಗೊಂಬೆಯೇ? ಅಥವಾ ವಿಶ್ವ ಮಹಿಳಾ ದಿನಾಚರಣೆಯ ದಿನವಾದ ಮಾರ್ಚ್ 8 ಹಾಗೂ ಭಾರತೀಯ ಮಹಿಳಾ ದಿನಾಚರಣೆ ದಿನವಾದ ಫೆಬ್ರವರಿ 13ರಂದು  ‘ ಕೇವಲ ಶುಭಾಶಯ  ‘ವಿನಿಮಯಕ್ಕೆ ಇರುವ ಒಂದು ಜೀವವೇ??

ಈ ಪ್ರಶ್ನೆ ಉದ್ಭವಿಸಲು ಕಾರಣವೂ ಇಲ್ಲದಿಲ್ಲ ;ಯಾಕೆಂದರೆ, ಮಹಿಳಾ ದಿನಾಚರಣೆಯ ದಿನದಂದೇ ಮಾರುಕಟ್ಟೆಗಳಲ್ಲಿ ಮಹಿಳಾ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ  ಘೋಷಿಸುತ್ತಾರೆ. ಅಂದರೆ ಹೆಣ್ಣಿಗೆ ಅಂದ ಅಲಂಕಾರ ಬಿಟ್ಟು ಬೇರೆ ಜೀವನವೇ ಇಲ್ಲವೇ ?   ಇನ್ನೂ ಹತ್ತು ಹಲವು ತೊಂದರೆಗಳನ್ನು ಮೆಟ್ಟಿನಿಂತು ಪಡೆದ ಸ್ವಾತಂತ್ರ್ಯಕ್ಕೆ 73 ವರ್ಷ ಕಳೆದರೂ ಇಂದಿಗೂ ನಾವು  ಮಹಿಳಾ ಮೀಸಲಾತಿ , ಹೆಣ್ಣು ಮಕ್ಕಳನ್ನು ರಕ್ಷಿಸಿ, ಓದಿಸಿ,( ಭೇಟಿ ಬಚಾವೋ ಭೇಟಿ ಪಡಾವೋ)     ಎಂದು ಅರಚುವು ದನ್ನು ಬಿಟ್ಟಿಲ್ಲ.

ಹೆಣ್ಣನ್ನು ಗುರಿಯಾಗಿಸಿ ನಡೆಯುತ್ತಿರುವ ನೀಚ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಲೇ ಇವೆ. ಇಂದಿಗೂ ಹೆಣ್ಣಿನ ಅತ್ಯಾಚಾರ ಭ್ರೂಣಹತ್ಯೆ ತರಹದ ಪಿಡುಗು  ನಾಯಿ  ಕೊಡೆಯಂತೆ  ಹೆಚ್ಚುತ್ತಲೇ ಇದೆ. ಇದೆಲ್ಲವೂ ನಿಲ್ಲಬೇಕು ಹಾಗೂ ನಮ್ಮ ಮೂಲ ಪರಂಪರೆಯ ಅರ್ಧನಾರೀಶ್ವರ ತತ್ವ  ಮತ್ತೆ ಅಸ್ತಿತ್ವಕ್ಕೆ ಬರಬೇಕು ಎಂದರೆ, ಮೊದಲು ಎಲ್ಲರೂ,  ಹೆಣ್ಣು ಗಂಡು ಎಂಬ ಭೇದ ಭಾವವನ್ನು ತಮ್ಮ ತಮ್ಮ ಮನೆಗಳಲ್ಲೇ ಇಲ್ಲವಾಗಿಸಿ  ಜಾಗೃತರಾಗಬೇಕು.  ಈ ನಿಟ್ಟಿನಲ್ಲಿ  ಯೋಚಿಸಬೇಕು.  ಜೊತೆಗೆ ಮೀಸಲಾತಿ ಎಂಬ ಪದಕ್ಕೆ   ಜೋತು ಬೀಳುವುದನ್ನು ಬಿಡಬೇಕು.  ಹೆಣ್ಣಿಗೆ ಬೇಕಾಗಿರುವುದು ಮೀಸಲಾತಿ ಅಲ್ಲ ಬದಲಾಗಿ ಸಮಾನತೆ,  ಗೌರವ ಹಾಗೂ  ಬದುಕುವ ಹಕ್ಕು.

ಬಸ್ಸಿನಲ್ಲಿ  ಮಹಿಳೆಯರ ಸೀಟಿನಲ್ಲಿ ಪುರುಷ ಕೂತಾಗ ಪ್ರಶ್ನಿಸುವ ಬದಲು ಕೇವಲ 4 ಸೀಟುಗಳ ಮೀಸಲಾತಿಯ ಅವಶ್ಯಕತೆಯಾದರೂ ಏನು  ಎಂದು ಪ್ರಶ್ನಿಸಬೇಕು.  ಜೊತೆಗೆ ಮಹಿಳಾ ದಿನಾಚರಣೆಯಂದು ಮಾತ್ರ ಮಹಿಳೆಯರನ್ನು ವಿಶೇಷವಾಗಿ ಗುರುತಿಸುವ  ಅನಿವಾರ್ಯತೆ ನಿಜವಾಗಿಯೂ ಇದೆಯೇ ಎಂಬುದನ್ನು ಪ್ರತಿಯೊಬ್ಬ  ಪ್ರಜ್ಞಾವಂತ ನಾಗರಿಕರು   ಯೋಚಿಸಬೇಕು . 

ಇದೆಲ್ಲದರ ಜೊತೆಗೆ  ದಿನದ 24 ಗಂಟೆಗಳು ಹಗಲಿರುಳು ಲೆಕ್ಕಿಸದೆ ದುಡಿಯುವ ಗೃಹಿಣಿಯನ್ನು ಯಾವಾಗ ದುಡಿಯುವ ಪುರುಷ ನನ್ನಂತೆಯೇ ಆಕೆ , ಅವಳು ಸಹ ದುಡಿಯುತ್ತಾಳೆ ಎಂದು ಪರಿಗಣಿಸುತ್ತಾನೋ ಎಂದು ಇಡೀ ಜಗತ್ತು ಬೆಳಕಾಗುತ್ತದೆ .

ಯಶಸ್ವಿ ಪುರುಷನ  ಹಿಂದೆಯೇ ಏಕೆ ಹೆಣ್ಣಿರಬೇಕು??  ಅದೇ ಹೆಣ್ಣು  ಅದೇ ಯಶಸ್ವಿ ಪುರುಷನ  ಜೊತೆಜೊತೆಯಾಗಿ ಏಕೆ ಹೆಜ್ಜೆ ಹಾಕಬಾರದು!? 

ಪ್ರತಿ ಪುರುಷನ ಸಾಧನೆಯ ಹಿಂದೆ  ಹೆಣ್ಣು ಇದ್ದಾಳೆ ಎಂದು ಹಾಡಿ ಹೊಗಳುವುದು ಸಮಾನತೆ ಅಲ್ಲ,  ಬದಲಾಗಿ ಪ್ರತಿ  ಹೆಜ್ಜೆಯನ್ನು ಜೊತೆಯಾಗಿ ಹಾಕಿದಾಗ ಮಾತ್ರ ಸಮಾನತೆ ಸಾಧ್ಯ.  ಅಂತಹ ದಿನ ಬಂದಾಗ ಇಂತಹ ಲೇಖನಗಳ ಅನಿವಾರ್ಯತೆ ಇರುವುದಿಲ್ಲ.  ಅದು ನಿಜವಾದ  ಮಹಿಳಾ ದಿನಾಚರಣೆ.

ಲೇಖಕಿ ಕುರಿತು
ಲೇಖಕಿ ಹಿತೈಷಿ ಎಚ್. ಎನ್. ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಮಂಗಳೂರಿನಲ್ಲಿ ಎಂ.ಟೆಕ್ ಪೂರೈಸಿ ಇಲ್ಲೇ ಎಂಜಿನಿಯರಿಂಗ್ ಕಾಲೇಜ್ ನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಬರವಣಿಗೆ ಇವರ ಹವ್ಯಾಸ. 

ಇತ್ತೀಚಿನ ಸುದ್ದಿ

ಜಾಹೀರಾತು