ಇತ್ತೀಚಿನ ಸುದ್ದಿ
ಹೆದ್ದಾರಿ ಕಾಮಗಾರಿಗೆ 20 ಅಡಿ ಕಂದಕ: ಕುಸಿತದ ಭೀತಿಯಲ್ಲಿ ಸಾಣೂರು ಸರಕಾರಿ ಹೈಸ್ಕೂಲ್, ಪಶು ಚಿಕಿತ್ಸಾಲಯ ಕೇಂದ್ರ; ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂದೇಟು
04/07/2023, 22:33
ಕಾರ್ಕಳ(reporterkarnataka.com): ಸಾಣೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಸಾಣೂರು ಸರಕಾರಿ ಹೈಸ್ಕೂಲ್ ಕಟ್ಟಡ ಹಾಗೂ ಪಶು ಚಿಕಿತ್ಸಾಲಯ ಕೇಂದ್ರಕ್ಕೆ ಕುಸಿಯುವ ಭೀತಿ ಎದುರಾಗಿದೆ.
ಕರಾವಳಿಯಲ್ಲಿ ಭಾರೀ ಮಳೆ ಆರಂಭವಾಗಿರುವುದರಿಂದ ಕುಸಿತದ ಭೀತಿ ಇನ್ನಷ್ಟು ಹೆಚ್ಚಾಗಿದೆ. ಸಾಣೂರು ಪಶುಚಿಕಿತ್ಸಾಲಯ ಹಾಗೂ ಸರಕಾರಿ ಪ್ರೌಢಶಾಲೆ ಕಟ್ಟಡಗಳು ರಾಷ್ಟ್ರೀಯ ಹೆದ್ದಾರಿ ಬದಿಯಿಂದ ಕೇವಲ ಮೂರು ಮೀಟರ್ ದೂರದಲ್ಲಿದೆ. ಪಕ್ಕದಲ್ಲಿ ಹೆದ್ದಾರಿ ಕಾಮಗಾರಿ ವೇಳೆ ಸಮಾನವಾಗಿ ಹಾಗೂ ಸುಗಮವಾಗಿ ವಾಹನಗಳು ಸಂಚರಿಸಲು ಅನುಕೂಲವಾಗುವಂತೆ 20 ಅಡಿ ಆಳವಾದ ಕಂದಕ ಮಾಡಲಾಗಿದೆ. ಇದರಿಂದಾಗಿ ಶಾಲೆ ಕಟ್ಟಡವು ರಸ್ತೆಯಿಂದ 20 ಅಡಿ ಹಾಗೂ ಪಶು ಚಿಕಿತ್ಸಾಲಯ ಕಟ್ಟಡವು 15 ಅಡಿ ಆಳವಾಗಿದ್ದ ಕಾರಣ ಮಳೆಗಾಲದ ಸಮಯದಲ್ಲಿ ಮಳೆನೀರಿನಿಂದ ಗುಡ್ಡದ ಮಣ್ಣು ಮೆದುವಾಗಿ ಸವಕಳಿಯಾಗಿ ಗುಡ್ದ ಕುಸಿಯಬಹುದು ಎಂಬ ಆತಂಕ ಎದುರಾಗಿದೆ.
ಕಟ್ಟಡ ಸ್ಥಳಾಂತರಿಸಲು ಗ್ರಾಮಸ್ಥರ ಪಟ್ಟು: ಹೆದ್ದಾರಿ ರಸ್ತೆ ಪಕ್ಕದಲ್ಲಿ ಶಾಲೆ ಹಾಗೂ ಪಶು ಚಿಕಿತ್ಸಾಲಯ ಕಟ್ಟಡವನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಜನರು ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಸರಕಾರಿ ಕಾಮಗಾರಿಗಳು ವಿವಿಧ ಇಲಾಖೆ ಗಳ ಮಂಜೂರಾತಿ ಪಡೆದು ಹೊಸ ಕಟ್ಟಡ ನಿರ್ಮಾಣ ಮಾಡಲು ಅನೇಕ ತಿಂಗಳುಗಳೆ ಬೇಕಾಗಬಹುದು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮಣ್ಣು ಕುಸಿಯದಂತೆ ಗುಡ್ಡಕ್ಕೆ ಪ್ಲಾಸ್ಟರಿಂಗ್ ವ್ಯವಸ್ಥೆಯನ್ನು ಕಲ್ಪಿಸುವಂತೆ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದಿರುವ ಕಂಪೆನಿಗೆ ಒತ್ತಾಯಿಸಿದ್ದಾರೆ.
ಪಶು ಚಿಕಿತ್ಸಾಲಯ ಕೇಂದ್ರದ ಪಕ್ಕ ಹೈಟೆನ್ಷನ್ ವೈಯರ್ : ಪಶು ಚಿಕಿತ್ಸಾಲಯ ಪಕ್ಕದಲ್ಲಿ ಹೈಟೆನ್ಷನ್ ವೈಯರ್ ಹಾದು ಹೋಗಿದ್ದು ಗುಡ್ಡದ ಮೇಲಿರುವ ಮಣ್ಣು ಕುಸಿದರೆ ಅಪಾಯ ಕಟ್ಟಿಟ್ಟ ಬುತ್ತಿ, ಸ್ಥಳೀಯರಿಗೆ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಗಬಹುದು ಹಾಗೂ ಪ್ರಾಣ ಹಾನಿಯು ಸಂಭವಿಸಬಹುದು.
ಸ್ಥಳಕ್ಕೆ ಸುಳಿಯದ ಅಧಿಕಾರಿಗಳು: ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಹೈಸ್ಕೂಲ್ ಕಟ್ಟಡದ ಸಮೀಪ ಗುಡ್ಡ ಕುಸಿದು ಕಟ್ಟಡಕ್ಕೆ ಹಾನಿಯುಂಟಾಗಿತ್ತು. ಜಿಲ್ಲಾಧಿಕಾರಿ ಪ್ರಕೃತಿ ವಿಕೋಪ ಪರಿಹಾರದಡಿ 2 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡವನ್ನು ಸರಿಪಡಿಸಲಾಗಿತ್ತು. ಆದರೆ ಈಗ ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ ಆಳವಾಗಿ ರಸ್ತೆ ಅಗೆದ ಕಾರಣ ಶಾಲೆ ಕಟ್ಟಡ ಕುಸಿತ ಭೀತಿ ಉಂಟಾಗಿದೆ.
ಈಗಾಗಲೇ ಪ್ರೌಢಶಾಲೆ ಕಟ್ಟಡ ಹಾಗೂ ಪಶು ಚಿಕಿತ್ಸಾಲಯ ಕಟ್ಟಡ ಸ್ಥಳಾಂತರಿಸುವಂತೆ ವಿವಿಧ ಇಲಾಖೆಗಳಿಗೆ ಮನವಿ ಸಲ್ಲಿಸಿದರು , ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಇದರಿಂದಾಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ಮೀನಮೇಷವೆನಿಸುತ್ತಿದ್ದಾರೆ. ಈಗಾಗಲೇ ಸಾಣೂರು ಯುವಕ ಮಂಡಲ, ಸಾಣೂರು ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಗುತ್ತಿಗೆದಾರ ಸಂಸ್ಥೆಯ ಮ್ಯಾನೇಜರ್ ಮತ್ತು ಹೆದ್ದಾರಿ ಇಂಜಿನಿಯರ್ ರವರ ಗಮನಕ್ಕೆ ತಂದರು ಕೂಡ ಯಾವುದೇ ಸುರಕ್ಷತಾ ಕ್ರಮಗಳನ್ನು ಈವರೆಗೆ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
400 ವಿದ್ಯಾರ್ಥಿಗಳು: ಗ್ರಾಮೀಣ ಭಾಗದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸರಕಾರವು ಹತ್ತಿರದಲ್ಲೇ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲೆಯನ್ನು ನಿರ್ಮಿಸಿತ್ತು. ಈಗ ಈ ಕಾಲೇಜಿನಲ್ಲಿ 250 ಹಾಗೂ ಹೈಸ್ಕೂಲ್ ನಲ್ಲಿ ಸುಮಾರ175 ಕ್ಕೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತಿದ್ದಾರೆ. ಆದರೆ ಪ್ರೌಢಶಾಲೆ ಹೆದ್ದಾರಿ ಕಾಮಗಾರಿ ಪಕ್ಕದಲ್ಲಿಯೆ ಇದೆ. ಕಟ್ಟಡ ಕುಸಿತವಾಗಬಹುದೆಂಬ ಪ್ರಾಣಭಯದಲ್ಲಿ ಶಾಲೆಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಎರಡು ಸಾವಿರ ಲೋಡ್ ಮಣ್ಣು ನೀಡಲಾಗಿದೆ. ಆದರೆ ಗುತ್ತಿಗೆ ಪಡೆದು ನಿರ್ಮಾಣ ಮಾಡುತ್ತಿರುವ ಕಂಪನಿಯು ನಮ್ಮ ಮನವಿ ಗೆ ಸ್ಪಂದಿಸಿಲ್ಲ. ದ.ಕ ಜಿಲ್ಲಾಧಿಕಾರಿ, ಉಡುಪಿ ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರು, ಸ್ಥಳೀಯ ಪಂಚಾಯತ್ , ತಹಸಿಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತವಾಗಿ ಪತ್ರ ನೀಡಲಾಗಿದೆ ಎಂದು ಸಾಣೂರು ಎಸ್ ಡಿಎಂಸಿ ಅಧ್ಯಕ್ಷ
ಅಶೋಕ್ ಶೆಟ್ಟಿ ಹೇಳುತ್ತಾರೆ.