ಇತ್ತೀಚಿನ ಸುದ್ದಿ
ಹೆಬ್ರಿ: ‘ಕನ್ನಡ ಡಿಂಡಿಮ’ ಸರಣಿ ಕಾರ್ಯಕ್ರಮ; ಕನ್ನಡದಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ
25/06/2023, 11:04
ಕಾರ್ಕಳ(reporterkarnataka.com): ಸಾಹಿತ್ಯದಿಂದ ಮನಸ್ಸು,ಪ್ರತಿಭೆ ಅರಳಬೇಕು. ಸಾಹಿತ್ಯ ಪರಿಷತ್ತಿನ ಪ್ರಯೋಜನ ಪಡೆದು ಪ್ರತಿಭೆಗಳನ್ನು ಅರಳಿಸುವ ಕೆಲಸವಾದಾಗ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಕಲಿಕೆಯ ಮಾಧ್ಯಮ ಮುಖ್ಯವಲ್ಲ ಕಲಿಯುವ ಮನಸ್ಸು ಮುಖ್ಯ. ಮಾತೃಭಾಷೆಯಲ್ಲಿ ಉತ್ತಮ ಪ್ರತಿಭೆ ತೋರ್ಪಡಿಸಲು ಸಾಧ್ಯ. ಅಂತಹ ಎಲ್ಲಾ ಪ್ರತಿಭೆಗಳು ಇಂತಹ ಕಾರ್ಯಕ್ರಮಗಳ ಮೂಲಕ ಅನಾವರಣಗೊಳ್ಳಬೇಕು ಎಂದು ಎಚ್. ನಾಗರಾಜ ಶೆಟ್ಡಿ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ,ಹೆಬ್ರಿ ತಾಲೂಕು ಘಟಕ ಹಾಗೂ ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆ ಹೆಬ್ರಿ ಇವರ ಸಹಯೋಗದೊಂದಿಗೆ ನಡೆದ ‘ಕನ್ನಡ ಡಿಂಡಿಮ’ ಸರಣಿ ಕಾರ್ಯಕ್ರಮದನ್ವಯ ಎಸ್.ಎಸ್.ಎಲ್.ಸಿ ಮತ್ತು ಪದವಿ ಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಹೆಬ್ರಿ ಘಟಕದ ಅಧ್ಯಕ್ಷರಾದ ಶ್ರೀನಿವಾಸ ಭಂಡಾರಿ ಮಾತನಾಡಿ ಹೆಬ್ರಿ ಘಟಕದ ವತಿಯಿಂದ ನಿರಂತರವಾಗಿ ಕನ್ನಡದ ಕೆಲಸಗಳನ್ನು ನಡೆಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲೂ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತೇವೆ ಎಂದರು.
ಕ.ಸಾ.ಪ ಉಡುಪಿ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಅವರು ಮಾತನಾಡಿ ಬೇವಿನ ಮರ ನೆಟ್ಟು ಮಾವಿನ ಫಲ ಪಡೆಯಲು ಸಾಧ್ಯವಿಲ್ಲ ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸಾಧಿಸುವ ಛಲ ಬೇಕು ಎಂದು ಡಿ.ವಿ.ಜಿಯವರ ಕಗ್ಗ, ಮರುಳ ಮುನಿಯನ ಕಗ್ಗ ಮತ್ತು ದೃಷ್ಟಾಂತ ಕಥೆಗಳ ಹಿನ್ನೆಲೆಯಲ್ಲಿ ವಿವರಿಸಿದರು.
ವೇದಿಕೆಯಲ್ಲಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ, ಕಸಾಪ ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪಿ.ವಿ ಆನಂದ ಸಾಲಿಗ್ರಾಮ, ಕಾರ್ಕಳ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರವೀಣ್ ಕುಮಾರ್, ರಾಜ್ಯ ಸರಕಾರಿ ನೌಕರರ ಸಂಘ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷರಾದ ಹರೀಶ್ ಪೂಜಾರಿ, ಉಡುಪಿ ಜಿಲ್ಲಾ ಕ.ಸಾ.ಪ ಪದಾಧಿಕಾರಿ ನರಸಿಂಹ ಮೂರ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪದವಿ ಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ಹೆಬ್ರಿ ತಾಲೂಕಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಎಸ್.ಆರ್.ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ದೀಪಕ್ ಎನ್ ಸ್ವಾಗತಿಸಿ,ಕ.ಸಾ.ಪ ಗೌರವ ಕಾರ್ಯದರ್ಶಿ ಡಾ ಪ್ರವೀಣ ಕುಮಾರ್ ವಂದಿಸಿ, ಕ.ಸಾ.ಪ ಗೌರವ ಕಾರ್ಯದರ್ಶಿ ಮಂಜುನಾಥ ಕೆ ಶಿವಪುರ ಕಾರ್ಯಕ್ರಮ ನಿರೂಪಿಸಿದರು.