9:20 PM Saturday5 - April 2025
ಬ್ರೇಕಿಂಗ್ ನ್ಯೂಸ್
Rajbhavana | ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಫಾಂಟ್ – ರಾಜ್ಯಪಾಲ ಗೆಹ್ಲೋಟ್… HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ… HDK | ವಿಧಾನ ಸೌಧ 3ನೇ ಮಹಡಿಯಲ್ಲಿ ಘಜ್ನಿ , ಘೋರಿ, ಮಲ್ಲಿಕ್… FKCCI Udyog Mela | ಉದ್ಯೋಗ ನೀಡುವ ಜತೆಗೆ ಉತ್ತಮ ಸಂಬಳ ನೀಡಿ:… Bangalore | ಮೋಸ ಹೋಗಬೇಡಿ; ಇಲಾಖೆಯಲ್ಲಿ ಯಾವುದೇ ನೇಮಕಾತಿ ಇಲ್ಲ: ಸಚಿವೆ ಲಕ್ಷ್ಮೀ… Bangaluru | ಚಿಲಿ ಅಧ್ಯಕ್ಷ ಗ್ಯಾಬ್ರಿಯಲ್ ಬೋರಿಕ್ ಫಾಂಟ್ ಬೆಂಗಳೂರಿಗೆ ಭೇಟಿ: 2… Mangaluru | ಸ್ಪೆಲ್‌ ಬೀ ವಿಜ್‌ ನ್ಯಾಶನಲ್‌ ಸ್ಪೆಲ್‌ ಬೀ: ಮಂಗಳೂರಿನ ಸಿಯೆಲ್‌… Bangaluru | ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಜಲ ಮಂಡಳಿಯಿಂದ ವಿನೂತನ ಯೋಜನೆ:… Good News | ರೈತರಿಗೆ 7 ವರ್ಷಗಳ ನಂತರ ಮತ್ತೆ ಸೂಕ್ಷ್ಮ ನೀರಾವರಿಗೆ… Chikkamagaluru | ಕಾಫಿನಾಡಿನಲ್ಲಿ ಭಾರೀ ಮಳೆ: ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಯಲ್ಲಿ ವರ್ಷಧಾರೆ

ಇತ್ತೀಚಿನ ಸುದ್ದಿ

HDK | ಮೇಕೆದಾಟು ವಿಷಯದಲ್ಲಿ ಕಾಂಗ್ರೆಸ್ ಸರಕಾರದಿಂದ ದ್ವಿಮುಖ ನೀತಿ: ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿ

05/04/2025, 20:50

ಬೆಂಗಳೂರು(reporterkarnataka.com): ನಮ್ಮ ನೀರು ನಮ್ಮ ಹಕ್ಕು ಎಂದು ಹೇಳುತ್ತಾ ನಮ್ಮ ತೆರಿಗೆ ಹಣದಲ್ಲಿ ಅಣೆಕಟ್ಟುಗಳನ್ನು ಕಟ್ಟಿ ತಮಿಳುನಾಡಿಗೆ ನೀರು ಹರಿಸುತ್ತಾ ನಾವು ನೀರಗಂಟಿ ಕೆಲಸ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಅತೀವ ಬೇಸರ ವ್ಯಕ್ತಪಡಿಸಿದರು.


ಬೆಂಗಳೂರಿನ ಕುವೆಂಪು ಕಲಾಕ್ಷೇತ್ರದಲ್ಲಿ ಕಾವೇರಿ ನದಿ ರಕ್ಷಣಾ ಸಮಿತಿ ಹಮ್ಮಿಕೊಂಡಿದ್ದ ಕಾವೇರಿ ನದಿ ನೀರಿನ ಹಂಚಿಕೆ ಕುರಿತ ಕಾರ್ಯಗಾರ, ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಾವೇರಿ ವಿಷಯದಲ್ಲಿ ನಮಗೆ ಅನ್ಯಾಯ ಆಗಿದೆ. ರಾಜ್ಯ ಬಹಳಷ್ಟು ಹಿಂದಕ್ಕೆ ಹೋಗಿದೆ. ಯಾವಾಗಲೂ ನಮ್ಮ ರಾಜ್ಯಕ್ಕಿಂತ ನೆರೆ ರಾಜ್ಯಕ್ಕೆ ಅನುಕೂಲ ಆಗುತ್ತಿದೆ. ಕನ್ನಡಿಗರಲ್ಲಿ ಒಗ್ಗಟ್ಟು ಇಲ್ಲ. ನೀರಿನ ವಿಷಯದಲ್ಲಿಯೂ ಅದೇ ಆಗುತ್ತಿದೆ ಎಂದ ಅವರು; ಅವರು ಮೇಕೆದಾಟು ಯೋಜನೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ತಮಿಳುನಾಡಿನ ಡಿಎಂಕೆ ಜತೆ ನಮ್ಮ ಸಂಬಂಧ ರಾಜಕೀಯಕ್ಕೆ ಮಾತ್ರ ಸೀಮಿತ. ಡಿಎಂಕೆ ಜತೆ ಮೇಕೆದಾಟು ವಿಷಯ ಮಾತನಾಡುವುದಕ್ಕೆ ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇಲ್ಲಿ ನೋಡಿದರೆ ಮೇಕೆದಾಟು ಪಾದಯಾತ್ರೆ ಮಾಡಿ ನಮ್ಮ ನೀರು ನಮ್ಮ ಹಕ್ಕು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ನಮ್ಮಲ್ಲಿ ಒಗ್ಗಟ್ಟು ಬರದಿದ್ದರೆ ಕಾವೇರಿ ವಿಷಯದಲ್ಲಿ ನ್ಯಾಯ ಸಿಗಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜನ ದಟ್ಟಣೆಯಿಂದ ಮುಂದೆ ಇಡೀ ಕನ್ನಂಬಾಡಿ ಕಟ್ಟೆಯ ನೀರೆಲ್ಲವನ್ನು ಕೊಟ್ಟರೂ ರಾಜಧಾನಿಗೆ ಕುಡಿಯುವ ನೀರು ಸಾಕಾಗದ ಪರಿಸ್ಥಿತಿ ಬರಬಹುದೇನೋ? ಮುಂದೆ ಈ ರೀತಿಯ ನೀರಿನ ಸಂಕಷ್ಟ ಬರುತ್ತದೆ ಎನ್ನುವ ದೂರದೃಷ್ಟಿಯಿಂದ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ನಾವು ಮುಂದಾಗಿದ್ದೇವೆ. ಮಂಡ್ಯದಲ್ಲಿ ಗೆಲ್ಲಿಸಿದರೆ ಐದು ನಿಮಿಷದಲ್ಲಿ ಯೋಜನೆಗೆ ಕೇಂದ್ರದ ಅನುಮತಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರು. ಈಗ ಕೊಡಿಸಲಿ ಎಂದು ಡಿಕೆ ಶಿವಕುಮಾರ್ ಹೇಳುತ್ತಿದ್ದಾರೆ. ಅದಕ್ಕಿಂತ ಮೊದಲು ಅವರು ಮಾಡಬೇಕಾದ ಕೆಲಸ ಒಂದಿದೆ, ಅವರ ಮಿತ್ರಪಕ್ಷವೇ ಆಡಳಿತ ನಡೆಸುತ್ತಿರುವ ತಮಿಳುನಾಡಿನ ಒಪ್ಪಿಗೆ ಕೊಡಿಸಲಿ, ಆಮೇಲೆ ನಮ್ಮ ಬಗ್ಗೆ ಮಾತನಾಡಲಿ ಎಂದು ಕೇಂದ್ರ ಸಚಿವರು ಹೇಳಿದರು.
ಸಂಸತ್ ನಲ್ಲಿ ಕಾವೇರಿ ವಿಷಯ ಪ್ರಸ್ತಾಪ ಆದಾಗ ನಾನು ನೋಡುತ್ತಿದ್ದೇನೆ. ಆ ನದಿಯ ವಿಷಯ ಪ್ರಸ್ತಾಪವಾದರೆ ತಮಿಳುನಾಡಿನ ಎಲ್ಲಾ ಸಂಸದರು ರಾಜಕೀಯ ಭಿನ್ನಾಭಿಪ್ರಾಯ ಬದಿಗಿಟ್ಟು ಒಟ್ಟಾಗಿಬಿಡುತ್ತಾರೆ. ಆದರೆ, ನಮ್ಮಲ್ಲಿ ಏನಾಗುತ್ತಿದೆ? ಎಲ್ಲಕ್ಕೂ ರಾಜಕೀಯ ತರುತ್ತೇವೆ, ಜಾತಿ ತರುತ್ತೇವೆ. ಇದೇ ನಮಗೆ ಮುಳುವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

*ಒಗ್ಗಟ್ಟಾಗದಿದ್ದರೆ ನ್ಯಾಯ ಸಿಗಲ್ಲ:* ಈಗ ಡಿಸಿಎಂ ಅವರು ಉಲ್ಟಾ ಹೊಡೆಯುತ್ತಿದ್ದಾರೆ. ಡಿಎಂಕೆ ಜತೆ ಕೇವಲ ರಾಜಕೀಯ ಒಪ್ಪಂದ ಮಾತ್ರ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ನಮ್ಮ ನೀತಿ, ಧೋರಣೆ ಹೀಗೆ ಇರಬಾರದು. ನೆಲ ಜಲ ಭಾಷೆ ವಿಷಯ ಬಂದಾಗ ರಾಜಕೀಯ, ಭಿನ್ನಾಭಿಪ್ರಾಯ ಎಲ್ಲವನ್ನೂ ಬದಿಗೊತ್ತಬೇಕು. ಇಲ್ಲವಾದರೆ ನಮ್ಮ ರಾಜ್ಯಕ್ಕೆ ನ್ಯಾಯ ಸಿಗಲ್ಲ. 93 ವರ್ಷಗಳ ಇಳಿ ವಯಸ್ಸಿನಲ್ಲಿಯೂ ದೇವೇಗೌಡರು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಸದನದಲ್ಲಿ ವೀಲ್ ಚೇರ್ ಮೇಲೆ ಬಂದು ಹೋರಾಟ ಮಾಡುತ್ತಿದ್ದಾರೆ ಎಂಬುದನ್ನು ಯಾರು ಮರೆಯಬಾರದು ಎಂದು ಕುಮಾರಸ್ವಾಮಿ ಅವರು ಹೇಳಿದರು.
ಕಾವೇರಿ ಬಗ್ಗೆ ಹಿಂದೆ ರಾಜ್ಯದಲ್ಲಿ ನಡೆದಿರುವ ಹೋರಾಟ, ತ್ಯಾಗವನ್ನು ಮರೆಯುತ್ತಿದ್ದೇವೆ. ಚನ್ನಬಸಪ್ಪ, ಎಚ್.ಎನ್. ನಂಜೇಗೌಡ, ದೇವೇಗೌಡರು ನಡೆಸಿದ ಹೋರಾಟಗಳನ್ನು ನಾವು ನೆನಪಿಸಿಕೊಳ್ಳಬೇಕು. ಮುಂಚೂಣಿಯಲ್ಲಿ ನಿಂತು ರಾಜ್ಯಕ್ಕೆ ನ್ಯಾಯ ದೊರಕಿಸಿಕೊಟ್ಟವವರು ಇವರು ಎಂದು ಕೇಂದ್ರ ಸಚಿವರು ಹೇಳಿದರು.

*ನಿನ್ನಿಂದಲೇ ನ್ಯಾಯ ಸಿಗುತ್ತದೆ!!:* ನಮ್ಮ ತಂದೆ ಅವರು ಯಾವಾಗಲೂ ನನಗೆ ಹೇಳುತ್ತಿರುತ್ತಾರೆ. ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯಕ್ಕೆ ನಿನ್ನ ಒಬ್ಬನಿಂದಲೇ ಈಪರಿಹಾರ, ನ್ಯಾಯ ಸಿಗುತ್ತದೆ ಎಂದು ಅನೇಕ ಸಲ ಹೇಳಿದ್ದಾರೆ. ನಾನು ದೇವರಲ್ಲಿ ಅಚಲ ನಂಬಿಕೆ ಇಟ್ಟಿದ್ದೇನೆ. ನನ್ನ ಕನಸು ಈಡೇರುತ್ತದೆ ಎಂದು ಅವರು ಯಾವಾಗಲೂ ಹೇಳುತ್ತಿರುತ್ತಾರೆ ಎಂಬ ಮಾತನ್ನೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

((((*ಬಾಕ್ಸ್*))))

*ನಾವು ನಿಮಗೆ ಎಷ್ಟು ಬೇಕಾದರೂ ಕಾವೇರಿ ನೀರು ಬಿಡುತ್ತೇವೆ. ನೀವು ನಮಗೆ ಭತ್ತ ಬೆಳೆದುಕೊಡಿ:!!*

ಕರ್ನಾಟಕದ ಮುಖ್ಯಮಂತ್ರಿ ಒಬ್ಬರು ಬಹಳ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಆಗಿದ್ದ ಕಾಮರಾಜ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಂದಿನ ಮದರಾಸಿಗೆ (ಇಂದಿನ ಚೆನ್ನೈ) ಹೋಗುತ್ತಿದ್ದರು. ಆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಅಂದಿನ ನಮ್ಮ ಮುಖ್ಯಮಂತ್ರಿಗಳು ಕಾಮರಾಜ್ ಅವರನ್ನು ಉದ್ದೇಶಿಸಿ, “ನಾವು ನಿಮಗೆ ಎಷ್ಟು ಬೇಕಾದರೂ ಕಾವೇರಿ ನೀರು ಬಿಡುತ್ತೇವೆ. ನೀವು ನಮಗೆ ಭತ್ತ ಬೆಳೆದುಕೊಡಿ ಸಾಕು..” ಎಂದು ಹೇಳಿದ್ದರಂತೆ. ಇದು ನಮ್ಮ ರಾಜ್ಯದ ಉದಾರತೆಗೆ ಪ್ರತೀಕ. ಇದೇ ಇವತ್ತು ನಮಗೆ ಮುಳುವಾಗುತ್ತಿದೆ ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
ಆದರೆ, ಆಗಷ್ಟೇ ಪಕ್ಷೇತರ ಶಾಸಕರಾಗಿ ವಿಧಾನಸಭೆಗೆ ಬಂದಿದ್ದ ದೇವೇಗೌಡಡು, ಅವತ್ತಿನ ಮುಖ್ಯಮಂತ್ರಿ ಹೇಳಿಕೆಯನ್ನು ಮುಲಾಜಿಲ್ಲದೆ ಖಂಡನೆ ಮಾಡಿದ್ದರು. ಸದನದಲ್ಲಿ ಖಾಸಗಿ ನಿರ್ಣಯ ಮಂಡಿಸಿ ರಾಜ್ಯಕ್ಕೆ ಕಾವೇರಿ ನೀರಿನಲ್ಲಿ ನ್ಯಾಯ ಸಿಗುವಲ್ಲಿ ಹೋರಾಟ ನಡೆಸಿದರು. ಅವರ ಹೋರಾಟದ ಫಲವೇ ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳು ನಿರ್ಮಾಣವಾದವು. ಇದನ್ನು ಯಾರೂ ಮರೆಯಬಾರದು ಎಂದು ಅವರು ಹೇಳಿದರು.
ಕಾವೇರಿ ಕೊಳ್ಳಕ್ಕೆ ಮಾತ್ರವಲ್ಲ, ಕೃಷ್ಣ ಕೊಳ್ಳಕ್ಕೂ ನೀರು ಒದಗಿಸಲು ದೇವೇಗೌಡರು ಕೊಡುಗೆ ಕೊಟ್ಟರು. ಪ್ರಧಾನಿಯಾಗಿ ಉತ್ತರ ಕರ್ನಾಟಕದ ಭಾಗದ ಜನರಿಗೆ ಅಪಾರ ಸೇವೆ ಸಲ್ಲಿಸಿದರು. ಆದರೆ, ಕೆಲವರು ತುಂಡು ಗುತ್ತಿಗೆ ಎಂದು ಅಸತ್ಯವನ್ನು ಹಬ್ಬಿಸಿ ಅವರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದರು ಎಂದು ಕುಮಾರಸ್ವಾಮಿ ಅವರು ನಾವು ವ್ಯಕ್ತಪಡಿಸಿದರು.
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನದ ಶ್ರೀ ಡಾ. ನಿರ್ಮಲಾನಂದ ನಾಥ ಮಹಾಸ್ವಾಮಿ, ಶ್ರೀ ಸೌಮ್ಯನಾಥ ನಾಥ ಸ್ವಾಮೀಜಿ, ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ನಿಶ್ಚಲಾನಂದನಂದ ನಾಥ ಸ್ವಾಮೀಜಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

ಪ್ರತಿಪಕ್ಷ ನಾಯಕ ಆರ್. ಅಶೋಕ್, ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಸಂಸದ ಡಾ. ಸಿ ಎನ್ ಮಂಜುನಾಥ್, ಮಾಜಿ ಐಎಎಸ್ ಅಧಿಕಾರಿ ಟಿ. ತಿಮ್ಮೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಕಾವೇರಿ ನದಿ ರಕ್ಷಣಾ ಸಮಿತಿ ಅಧ್ಯಕ್ಷ ಹೆಚ್.ಕೆ. ರಾಮು, ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಆಂಜನೇಯ ರೆಡ್ಡಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು