8:03 AM Tuesday2 - September 2025
ಬ್ರೇಕಿಂಗ್ ನ್ಯೂಸ್
ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ… Kaali river | ಸೂಪಾ ಅಣೆಕಟ್ಟು ಪ್ರದೇಶದಲ್ಲಿ ಭಾರೀ ಮಳೆ: ಪ್ರವಾಹದ ಕುರಿತು… ಸಿದ್ದರಾಮನಹುಂಡಿಯಲ್ಲಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ಉದ್ಘಾಟನೆ: ಸಿಎಂ ಚಾಲನೆ ಧರ್ಮಸ್ಥಳ ಯಾತ್ರೆಯಿಂದ ಬಿಜೆಪಿಗೆ ರಾಜಕೀಯ ಲಾಭ ಸಿಗಲಾರದು: ಸಿಎಂ ಸಿದ್ದರಾಮಯ್ಯ ಗಣೇಶ ವಿಸರ್ಜನೆ: ಕುಶಾಲನಗರದಲ್ಲಿ ನಿಯಮ ಉಲ್ಲಂಘಿಸಿದ 5 ಡಿಜೆ ವಾಹನ ಪೊಲೀಸ್ ವಶಕ್ಕೆ ದಂತ ವೈದ್ಯಕೀಯ ಸೇವೆ ಹಳ್ಳಿ ಹಳ್ಳಿಗಳಿಗೂ ತಲುಪಲಿ: ಡೆಂಟಿಸ್ಟ್‌ ಶೃಂಗಸಭೆ-2025 ಸಮಾವೇಶದಲ್ಲಿ ಸಚಿವ… ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: ಮಾಲು ಸಹಿತ ಆರೋಪಿ ಬಂಧನ Kodagu | ‘ಹುಡುಗಿ, ಆಂಟಿ ಸರ್ವಿಸ್…’ ಎಂದು ಜಾಲತಾಣದಲ್ಲಿ ಹರಿಯ ಬಿಟ್ಟ: ಮಡಿಕೇರಿ… Kerala | ವಯನಾಡು ತಮರಶೆರಿ ಘಾಟ್ ಬಳಿ ಭೂಕುಸಿತ: ಬದಲಿ ಮಾರ್ಗಕ್ಕೆ ಸಲಹೆ ಕೆಪಿಟಿಸಿಎಲ್ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ಅಯ್ಕೆ ಪಟ್ಟಿ…

ಇತ್ತೀಚಿನ ಸುದ್ದಿ

ಎಚ್ಚೆಸ್ವಿ ಎಂದರೆ ಯಶಸ್ವಿ ಎಂದರ್ಥ: ವಿದಾಯಗಳು ಸರ್

30/05/2025, 11:17

ವಿ.ಚಂದ್ರಶೇಖರ ನಂಗಲಿ

info.reporterkarnataka@gmail.com

ಎಚ್ಚೆಸ್ವಿ ಅವರ ಕಿರಿಯ ತಲೆಮಾರಿಗೆ ಸೇರಿದ ನಾನು, ಅವರಂತೆಯೇ ಕನ್ನಡ ಪ್ರಾಧ್ಯಾಪಕನಾಗಿದ್ದರೂ ಸಹಜವಾಗಿ ಮಾನಸಿಕ ಅಂತರವಿತ್ತು. ವರ್ಷಕ್ಕೊಮ್ಮೆ ಕೇಂದ್ರೀಯ ಮೌಲ್ಯಮಾಪನ ಸಂದರ್ಭದಲ್ಲಿ ಕನ್ನಡ ಅಧ್ಯಾಪಕರೆಲ್ಲರೂ ಬೆಂಗಳೂರು ಸೆಂಟ್ರಲ್ ಕಾಲೇಜು ಆವರಣದಲ್ಲಿ ಒಂದಾಗಿ ಸೇರುತ್ತಿದ್ದೆವು. ಆಗ ಎಚ್ಚೆಸ್ವಿ , ನರಹಳ್ಳಿ , ಎಚ್ಚೆಸ್ಸಾರ್, ಶ್ರೀನಿವಾಸರಾಜು, ಸುಬ್ಬರಾವ್, ಮಾಧವರಾವ್, ವೆಂಕಣ್ಣ ಯುಂತಾದವರೆಲ್ಲಾ ಒಟ್ಟಿಗೆ ಭೇಟಿ ಮಾಡುತ್ತಿದ್ದೆವು. ಇದು ನಮ್ಮ ಆತ್ಮೀಯತೆ ವರ್ಧಿಸುವ ಸಂದರ್ಭವಾಗಿತ್ತು.
ಒಮ್ಮೆ ಚಿತ್ರದುರ್ಗದ ಸರ್ಕಾರಿ ಕಾಲೇಜಿನಲ್ಲಿ ಎಚ್ಚೆಸ್ವಿ ಮತ್ತು ನಾನು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದೆವು. ಪದವಿ ತರಗತಿಯ ಗ್ರಾಮಾಂತರ ವಿದ್ಯಾರ್ಥಿಗಳ ಬಹುದೊಡ್ಡ ಸಭೆಯನ್ನು ಉದ್ದೇಶಿಸಿ ನಾವಿಬ್ಬರೂ ಅಂದು ಮಾತನಾಡ ಬೇಕಿತ್ತು. ಮೊದಲ ಭಾಷಣ ಎಚ್ಚೆಸ್ವಿ ಅವರದು. ಅತ್ಯುತ್ತಮ ವಾಗ್ಮಿಗಳಾದ ಎಚ್ಚೆಸ್ವಿ ಅವರು ತಮ್ಮ ಸಾಹಿತ್ಯ ಸಂಪತ್ತಿನ ವಾಗ್ಝರಿಯನ್ನು ಹರಿಸುತ್ತಾ ಅಕ್ಷರಷಃ ಮೋಡಿಯನ್ನೇ ಮಾಡಿ ಬಿಟ್ಟಿದ್ದರು. ಒಂದು ಗಂಟೆಯ ಕಾಲ ಸೂಜಿ ಬಿದ್ದರೆ ಕೇಳಿಸುವಷ್ಟು ನಿಃಶಬ್ದದ ವಾತಾವರಣ ಸೃಷ್ಟಿಯಾಗಿ, ಎಲ್ಲರೂ ಮಂತ್ರಮುಗ್ದರಾಗಿ ಕುಳಿತಿದ್ದರು. ನಾನು ಕೂಡಾ ಎಚ್ಚೆಸ್ವಿ ಅವರ ಯಶಸ್ವಿ ಭಾಷಣದ ಒಬ್ಬ ಸಹೃದಯನಾಗಿ ಆನಂದಮಯವಾಗಿದ್ದೆನು.
ನಂತರದ ಸರದಿ ನನ್ನದು. ನಿಶಃಬ್ದ ಶ್ರೋತೃ ಸಮುದಾಯಕ್ಕೆ ಊನವಾಗದ ರೀತಿಯಲ್ಲಿ ಮಾತನಾಡುವ ಸವಾಲ್ ನನ್ನದಾಗಿತ್ತು. ಹೇಗೋ ಏನೋ ಎಂಬ ಅಳುಕಿನಿಂದ ಮಾತು ಆರಂಭಿಸಿದ ನಾನು ನನಗೆ ಪ್ರಿಯವಾದ “ಗ್ರೀನ್ ರೀಡಿಂಗ್ – ಭೂಮಿತಾಯಿ ತತ್ವ” ಕುರಿತು ಮಾತಾಡಿದೆನು. ಏನಚ್ಚರಿಯೋ ? ಶ್ರೋತೃಗಳು ನನ್ನ ಮಾತುಗಳನ್ನು ಕಿವಿಗೊಟ್ಟು ಅಲ್ಲ ! ಎದೆಗೊಟ್ಟು ನಿಃಶಬ್ದವಾಗಿ ಆಲಿಸಿದರು. ಎಚ್ಚೆಸ್ವಿ ಬೀಸಿದ ಮಾಯೆಯನ್ನು ನಾನು ಕೂಡಾ ಬೀಸಿದ್ದೆ.
ಇಡೀ ಸಭೆ ದೀರ್ಘ ಚಪ್ಪಾಳೆಯ ಮೂಲಕ ನನ್ನನ್ನು ಅಭಿನಂದಿಸಿತು. ಮೊದಲು ಮಾತನಾಡಿದ್ದ ಎಚ್ಚೆಸ್ವಿ ಅವರು ಕೂಡಲೇ ಎದ್ದು ಬಂದು ಮುಕ್ತ ಮನಸ್ಸಿನಿಂದ ನನ್ನ ಭಾಷಣವನ್ನು ಹೊಗಳಿ ಸಹೃದಯ ನಮನ ಸಲ್ಲಿಸಿದರು. ಇದೊಂದು ವಿರಳಾತಿವಿರಳ ನಿರ್ಮತ್ಸರ ಪ್ರಸಂಗ. ಇದರಿಂದ ಎಚ್ಚೆಸ್ವಿ ಮತ್ತು ನಾನು ತುಂಬಾ ಹತ್ತಿರಾದೆವು.
2000 ದಲ್ಲಿ ಬಳ್ಳಾರಿಯ ಲೋಹಿಯಾ ಪ್ರಕಾಶನದ ಮೂಲಕ ನನ್ನ ಹಸಿರು ಕೃತಿ “ಕಾಡು ಮತ್ತು ತೋಪು” ಪ್ರಕಟವಾಯಿತು. ಇಪ್ಪತ್ತನೇ ಶತಮಾನದ ಪರಿಸರ ನಾಶದ ತಲ್ಲಣಗಳಿಗೆ ಪ್ರತಿಸ್ಪಂದಿಯಾಗಿ ಈ ಕೃತಿ ರೂಪುಗೊಂಡಿತ್ತು.
ಇದಕ್ಕೆ ಡಾ.GSS, ಡಾ.ಎಲ್.ಬಸವರಾಜು, ವ್ಯಾಸರಾಯ ಬಲ್ಲಾಳ ಮತ್ತು ಡಾ.URA, ಗಿರೀಶ್ ಕಾರ್ನಾಡ್ ಇತರರು ಖಾಸಗಿಯಾಗಿ ನನಗೆ ಪತ್ರ ಬರೆದು ಬೆನ್ನು ತಟ್ಟಿದ್ದರು. ಆದರೆ ಇವೆಲ್ಲ ಖಾಸಗಿ ಪತ್ರ ವ್ಯವಹಾರ, ಎಚ್ಚೆಸ್ವಿ ಅವರು ಕನ್ನಡಪ್ರಭ ದಿನಪತ್ರಿಕೆಯ ತಮ್ಮ ಅಂಕಣದಲ್ಲಿ “ಕಾಡು ಮತ್ತು ತೋಪು” ಕೃತಿಯನ್ನು ಕುರಿತು “ಹಸಿರು ಓದಿನ ಕಡ್ಡಾಯ ಪಠ್ಯ” ಎಂಬ ಶೀರ್ಷಿಕೆಯಲ್ಲಿ ಬಹುದೀರ್ಘವಾಗಿ ಅರ್ಧ ಪುಟದಷ್ಟು ವಿಸ್ತಾರದಲ್ಲಿ ಹೃದಯ ತುಂಬಿ ವಿಮರ್ಶೆ ಮಾಡಿದ್ದರು. ಇದು ನನಗೆ ಸಾರ್ವಜನಿಕವಾಗಿ ಸಂದ ಸಹೃದಯ ಪ್ರಶಸ್ತಿ. ಒಬ್ಬ ಲೇಖಕನಿಗೆ ನಿಜವಾದ ಪ್ರಶಸ್ತಿ ಯಾವುದೆಂದರೆ ಇಂಥ ಫತ್ರಗಳು ಮತ್ತು ವಿಮರ್ಶೆ.
ಇದೀಗ ಎಚ್ಚೆಸ್ವಿ ತಮ್ಮ ಪಾತ್ರವನ್ನು ಯಶಸ್ವಿಯಾಗಿ ಮುಗಿಸಿ ನಮಗೆಲ್ಲರಿಗೂ ವಿದಾಯ ಹೇಳಿದ್ದಾರೆ. ಪ್ರೀತಿಯ ನಮಸ್ಕಾರ. ಹೋಗಿ ಬನ್ನಿ ಗುರುವೇ ! ಆದಿಕವಿ ಪಂಪ ಹೇಳಿದಂತೆ “ಸೂಳ್ ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್” !

ಇತ್ತೀಚಿನ ಸುದ್ದಿ

ಜಾಹೀರಾತು