11:47 PM Friday17 - January 2025
ಬ್ರೇಕಿಂಗ್ ನ್ಯೂಸ್
ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ… ಗರೋಡಿ ಜಾತ್ರೆಗೂ ಊರವರಿಗೆ ನೀರಿಲ್ಲ!: 5 ದಿನಗಳಿಂದ ನೋ ವಾಟರ್!!; ಮೇಯರ್ ಅವರೇ… ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಸಚಿವ ಜಮೀರ್‌ ಭಾವಚಿತ್ರಕ್ಕೆ ಸಗಣಿ ಬಳಿದು ಬಿಜೆಪಿ…

ಇತ್ತೀಚಿನ ಸುದ್ದಿ

ಹಾಸನ ವಿಮಾನ ನಿಲ್ದಾಣ ಶೀಘ್ರ ಪೂರ್ಣಗೊಳಿಸಿ: ಕೇಂದ್ರ ವಿಮಾನಯಾನ ಸಚಿವರ ಭೇಟಿಯಾಗಿ ಕುಮಾರಸ್ವಾಮಿ ಮನವಿ

17/01/2025, 21:20

ನವದೆಹಲಿ(reporterkarnataka.com): ಕರ್ನಾಟಕದ ಮೂಲಸೌಕರ್ಯ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರ ಜತೆ ಮಹತ್ವದ ಮಾತುಕತೆ ನಡೆಸಿದರು.

ನವದೆಹಲಿಯಲ್ಲಿ ಶುಕ್ರವಾರ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ನಾಯ್ಡು ಅವರನ್ನು ಭೇಟಿಯಾದ ಕುಮಾರಸ್ವಾಮಿ ಅವರು; ಎರಡು ಪ್ರಮುಖವಾದ ಮನವಿ ಪತ್ರಗಳನ್ನು ಸಲ್ಲಿಸಿದರು.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿರುವ ಕೃಷ್ಣರಾಜ ಸಾಗರ (ಕೆ ಆರ್ ಎಸ್) ಜಲಾಶಯದಲ್ಲಿ ಸೀಪ್ಲೇನ್ (ಸಮುದ್ರ ವಿಮಾನ ಸೇವೆ) ಆರಂಭಿಸುವ ಬಗ್ಗೆ ಸಚಿವರು, ವಿಮಾನಯಾನ ಸಚಿವರ ಜತೆ ಚರ್ಚೆ ನಡೆಸಿದರು.
ಸಮುದ್ರವಿಮಾನ ಸೇವೆ ಕರ್ನಾಟಕಕ್ಕೆ ಬಹಳ ಮುಖ್ಯವಾದದ್ದು. ಪ್ರವಾಸೋದ್ಯಮಕ್ಕೆ ಇದು ಹೆಚ್ಚು ಬಳ ತುಂಬಲಿದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಟ್ಟ ಕುಮಾರಸ್ವಾಮಿ ಅವರು; ಮೈಸೂರು, ಮಂಡ್ಯ, ಬೈಂದೂರು, ಆಲಮಟ್ಟಿ, ಬೇಲೂರು-ಹಳೆಬೀಡು ಮತ್ತು ವಿಜಯನಗರ (ಹಂಪಿ) ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಸಮುದ್ರ ವಿಮಾನ ಸೇವೆಗಳನ್ನು ಪ್ರಾರಂಭಿಸುವ ಪ್ರಸ್ತಾವನೆ ಸಲ್ಲಿಸಿದರು.
ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವ ಹೊಂದಿರುವ ಈ ಸ್ಥಳಗಳು ತ್ವರಿತ ಮತ್ತು ಸುಲಭ ಪ್ರಯಾಣದ ಆಯ್ಕೆಯಿಂದ ಹೆಚ್ಚಿನ ಲಾಭವನ್ನು ಪಡೆಯಬಹುದಾಗಿದೆ ಎಂದು ರಾಮಮೋಹನ್ ನಾಯ್ಡು ಅವರಿಗೆ ಸಚಿವರು ಮನವರಿಕೆ ಮಾಡಿಕೊಟ್ಟರು.
ಸಮುದ್ರ ವಿಮಾನ ಸೇವೆ ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರ ಜತೆಗೆ, ಕರ್ನಾಟಕದ ಪ್ರವಾಸೋದ್ಯಮಕ್ಕೆ ಅತಿದೊಡ್ಡ ಅವಕಾಶಗಳನ್ನು ತೆರೆಯಲಿದೆ. ಇದು ಪ್ರಧಾನಿ ನರೇಂದ್ರ ಮೋದಿ ಉಡಾನ್ ಯೋಜನೆ ಮತ್ತು ಆತ್ಮನಿರ್ಭರ ಭಾರತ್ ಪರಿಕಲ್ಪನೆಗೆ ಪೂರಕವಾಗಿವೆ ಎಂದು ಕುಮಾರಸ್ವಾಮಿ ಅವರು ವಿಮಾನಯಾನ ಸಚಿವರಿಗೆ ವಿವರಿಸಿದರು.
ಹಾಸನ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣದ ನಿರ್ಮಾಣವನ್ನು ತ್ವರಿತಗತಿಯಲ್ಲಿ ಮುಗಿಸುವ ಬಗ್ಗೆ ವಿಮಾನಯಾನ ಸಚಿವರಲ್ಲಿ ಬೃಹತ್ ಕೈಗಾರಿಕೆ ಸಚಿವರು ಮನವಿ ಮಾಡಿದರು.
ಹಾಸನ ವಿಮಾನ ನಿಲ್ದಾಣದ ನಿರ್ಮಾಣ ಪೂರ್ಣವಾದರೆ ಪ್ರವಾಸೋದ್ಯಮಕ್ಕೆ ಅನುಕೂಲ ಆಗುವುದರ ಜತೆಗೆ ಕೃಷಿ, ಕೈಗಾರಿಕೆ, ಹೈನುಗಾರಿಕೆ ಸೇರಿದಂತೆ ಅನೇಕ ವಲಯಗಳ ಅಭಿವೃದ್ಧಿಗೆ ವೇಗ ದೊರೆಯಲಿದೆ. ಹಾಸನ ಶೈಕ್ಷಣಿಕ, ಕೃಷಿ ಮತ್ತು ಕೈಗಾರಿಕಾ ಕೇಂದ್ರವಾಗಿದ್ದು, ರಾಷ್ಟ್ರೀಯ ಪ್ರವಾಸಿ ಜಾಲದ ಅತಿ ಪ್ರಮುಖ ಕೊಂಡಿಯಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ ಅವರ ಅಧಿಕಾರಾವಧಿಯಲ್ಲಿ ಪ್ರಾರಂಭವಾದ ವಿಮಾನ ನಿಲ್ದಾಣ ಯೋಜನೆ ವ್ಯೂಹಾತ್ಮಕವಾಗಿ ಬಹಳ ಮಹತ್ವದ್ದಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಹಾಸನ ವಿಮಾನ ನಿಲ್ದಾಣದ ಪ್ರಸ್ತುತ ಯೋಜನೆಗಳು ಈ ಭಾಗದ ಅಗತ್ಯಗಳನ್ನು ಪೂರೈಸಲು ಸಾಕಾಗುವುದಿಲ್ಲ. ಇದನ್ನು ಏರ್‌ಬಸ್ A320 ವಿಮಾನಗಳನ್ನು ನಿರ್ವಹಿಸುವಷ್ಟರ ಮಟ್ಟಿಗೆ ಅಭಿವೃದ್ಧಿಪಡಿಸುವುದು ಅನಿವಾರ್ಯವಾಗಿದೆ. ಇದರಿಂದ ಹಾಸನವು ಕರ್ನಾಟಕದ ಪರಂಪರೆ ಮತ್ತು ಕೈಗಾರಿಕಾ ವಲಯದ ಪ್ರವೇಶದ್ವಾರವಾಗುವಂತೆ ಮಾಡಬಹುದು ಎಂದು ಕುಮಾರಸ್ವಾಮಿ ಅವರು ತಿಳಿಸಿದರು.
ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವಿಮಾನಯಾನ ಸಚಿವರು; ಆದಷ್ಟು ಬೇಗ ತಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹಾಸನ ವಿಮಾನ ನಿಲ್ದಾಣದ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಮುದ್ರ ವಿಮಾನ ಸೇವೆಗಳ ಮೂಲಸೌಕರ್ಯ ಕಾರ್ಯವನ್ನು ತ್ವರಿತಗತಿಯಲ್ಲಿ ಮುನ್ನಡೆಸಲು ನಾಗರಿಕ ವಿಮಾನಯಾನ ಸಚಿವಾಲಯ ಬದ್ಧವಾಗಿದೆ. ತಮ್ಮ ಮನವಿಗಳ ಕೂಡಲೇ ಪರಿಶೀಲಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ ಎಂದು ಅವರು ಕುಮಾರಸ್ವಾಮಿ ಅವರಿಗೆ ಭರವಸೆ ಕೊಟ್ಟರು.
ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ, ಕೋಲಾರ ಸಂಸದ ಮಲ್ಲೇಶ್ ಬಾಬು ಅವರು ಸಚಿವರ ಜತೆಯಲ್ಲಿ ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು