ಇತ್ತೀಚಿನ ಸುದ್ದಿ
ಹನುಮನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನ : ಮುಖ್ಯಮಂತ್ರಿ ಬೊಮ್ಮಾಯಿ
03/04/2022, 20:07
ಬೆಂಗಳೂರು(reporterkarnataka.com): ಹನುಮನ ಜನ್ಮಸ್ಥಳ ಹಂಪಿ ಬಳಿಯ ಅಂಜನಾದ್ರಿ ಶ್ರೀಕ್ಷೇತ್ರವನ್ನ ಅಭಿವೃದ್ಧಿಪಡಿಸಲು ಸರಕಾರ ತೀರ್ಮಾನಿಸಿದ್ದು, ಈ ಉದ್ದೇಶಕ್ಕಾಗಿ 100 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ. ಇದೇ ವರ್ಷ ಯೋಜನೆ ಸಿದ್ದಪಡಿಸಿ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಶ್ರೀರಾಮಸೇವಾ ಮಂಡಳಿ ಆಯೋಜಿಸಿರುವ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಜನಾದ್ರಿ ಬೆಟ್ಟದ ಅಭಿವೃದ್ಧಿಯ ಕೆಲಸ ಈ ವರ್ಷವೇ ಪ್ರಾರಂಭವಾಗಲಿದೆ. ವಿಶಿಷ್ಟವಾದ ಅಭಿವೃದ್ಧಿ ಕಾರ್ಯಕ್ರಮವನ್ನು ಪ್ರಮುಖರ ಸಲಹೆ ಮೇರೆಗೆ ತೆಗೆದುಕೊಳ್ಳಲು ತೀರ್ಮಾನಿಸಿದೆ. ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ತಿಳಿದಿರುವ ತಜ್ಞರ ಹೆಸರುಗಳನ್ನು ಒದಗಿಸಲು ಮನವಿ ಮಾಡಲಾಗಿದೆ ಎಂದರು.
ಶ್ರೀ ರಾಮ ಸೇವಾ ಮಂಡಳಿಯವರು ಸ್ಥಾಪಿಸಲು ಉದ್ದೇಶಿಸಿರುವ ಕಲಾ ಸಾಕೇತ್ ಸ್ಥಾಪನೆಗೆ ಸರಕಾರ ನೆರವು ಒದಗಿಸುವುದು ಎಂದು ಭರವಸೆ ನೀಡಿದರು.
ಸಂಗೀತ ಅವಿಭಾಜ್ಯ ಅಂಗ: ಪ್ರತಿಶಬ್ಧಕ್ಕೂ ತನ್ನದೇ ರಾಗತಾಳವಿರುತ್ತದೆ. ಸಂಗೀತ ಮನುಷ್ಯನ ಸಂಗೀತ ಉತ್ಸಾಹ, ಆನಂದ, ಸಮಾಧಾನ, ಭಾವನೆಗಳನ್ನು ಅಭಿವ್ಯಕ್ತಿ ಪಡಿಸುವ ಮಾಧ್ಯಮವೂ ಹೌದು. ದಣಿದಾಗ ಸಂಗೀತ ಕೇಳಿದರೆ ಆಹ್ಲಾದ ಉಂಟಾಗುತ್ತದೆ ಎಂದರು.
ಕಳೆದ 8 ದಶಕಗಳಿಂದ ಶ್ರೀರಾಮನವಮಿ ಸಂದರ್ಭದಲ್ಲಿ ಸಂಗೀತೋತ್ಸವ ಆಯೋಜಿಸುತ್ತಿರುವ ಶ್ರೀರಾಮ ಸೇವಾ ಮಂಡಳಿಯ ಎಲ್ಲರೂ ಅಭಿನಂದನಾರ್ಹರು. ಸಂಗೀತದಿಂದ ಉತ್ತಮವಾಗಿ ಭಕ್ತಿಯ ಅಭಿವ್ಯಕ್ತಿಯಾಗುತ್ತದೆ. ಕೆಲವು ಭಕ್ತಿ ಗೀತೆಗಳು ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ. ನಾನು ಶ್ರೀರಾಮ ಹಾಗೂ ಹನುಮನ ಭಕ್ತ. ಅದರೊಂದಿಗೆ ಸಂಗೀತದ ಭಕ್ತನೂ ಹೌದು ಎಂದರು.