5:15 AM Sunday5 - October 2025
ಬ್ರೇಕಿಂಗ್ ನ್ಯೂಸ್
ಕುಶಾಲನಗರ: ಸಂಬಂಧಿಕರ ಸಾವಿಗೆ ತೆರಳಿದ್ದ ಯುವಕ ಹಾರಂಗಿ ಮುಖ್ಯ ನಾಲೆಯಲ್ಲಿ ಈಜಲು ಹೋಗಿ… ಮೈಸೂರು ದಸರಾ ಜಂಬೂ ಸವಾರಿ: ಚಿತ್ರದುರ್ಗದ ಸ್ತಬ್ದಚಿತ್ರಕ್ಕೆ ಪ್ರಥಮ ಸ್ಥಾನ ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗರ ಆತಂಕಗೊಳಿಸಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ Kodagu | ಡಿವೈಎಸ್ಪಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗೆ ಅ. 16 ರವರೆಗೆ… ಹೆತ್ತಬ್ಬೆಯನ್ನೇ ಕೊಂದ ಪಾಪಿ ಪುತ್ರ: ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಹತ್ಯೆ; ಆರೋಪಿಯ… Kodagu | ಮಂಜಿನ ನಗರಿ ಮಡಿಕೇರಿಯಲ್ಲಿ ಜನೋತ್ಸವಕ್ಕೆ ಜನಜoಗುಳಿ: ದಶ ಮಂಟಪಗಳಿಂದ ಶೋಭಾ… Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ

ಇತ್ತೀಚಿನ ಸುದ್ದಿ

ಮೃತ್ಯು ಮುಟ್ಟದ ಮುನ್ನ..

16/05/2021, 09:24

ಡಾ. ಸುಬ್ರಹ್ಮಣ್ಯ ಸಿ ಕುಂದೂರು
subramanyac1@gmail.com

ReporterKarnataka.com

ಹುಟ್ಟು ಮತ್ತು ಸಾವು ಲೋಕದ ಕಾಲಚಕ್ರದಲ್ಲಿ ಸತ್ಯತೆಯಾಗಿ ಕಾಣಿಸಿದರೂ ಮನುಷ್ಯ ಮಾತ್ರ ಸಾವನ್ನು ಸಾಂಸ್ಕೃತಿಕ ಚೌಕಟ್ಟಿನಲ್ಲಿಟ್ಟು ಅದಕ್ಕೊಂದು ಆಚರಣೆ, ನಂಬಿಕೆ, ಸಂಸ್ಕಾರದಂತಹ ಅಂಗಿಯನ್ನು ತೊಡಿಸಿ ಸಾಮಾಜಿಕ ಮೌಲ್ಯವೊಂದನ್ನು ಹೊಂದಿಕೊಳ್ಳುವಂತೆ ಮಾಡಿದ್ದಾನೆ.

ಮನುಷ್ಯನನ್ನು ಬಿಟ್ಟು ಈ ಪ್ರಕೃತಿಯಲ್ಲಿ ಕೋಟ್ಯಾಂತರ ಜೀವಿಗಳು ಸಾವು ಕಾಣುತ್ತವೆ. ಇದರ ದೃಷ್ಟಿ ಪ್ರಕೃತಿಯಲ್ಲಿ ಹುಟ್ಟಿ ಅಲ್ಲಿಯೇ ತನ್ನನ್ನು ಕಳೆದುಕೊಳ್ಳುವುದು. ಇಲ್ಲಿ ಸಾವಿನ ಸಂಕೇತವು ಶಕ್ತಿಯ ಉತ್ಪಾದನೆ ಹಾಗೂ ಅದರ ಚಲನೆಯ ಬಲವನ್ನು ಕಳೆದುಕೊಳ್ಳುವುದಾಗಿದೆ. ಪ್ರಕೃತಿಯ ಜೀವಿಯೇ ಆಗಿರುವ ಮನುಷ್ಯ ಮಾತ್ರ ಸಾವನ್ನು ಎದುರುಗೊಂಡದ್ದು ವಿಭಿನ್ನ ಹಾಗೂ ವಿಚಿತ್ರ. ವ್ಯಕ್ತಿಯೊಬ್ಬ ತನ್ನ ಸಾವನ್ನು ಶೋಧಿಸಿಕೊಳ್ಳುವ ಬಗೆ ಒಂದಾದರೆ ಸಮಾಜವೊಂದು ವ್ಯಕ್ತಿಯ ಸಾವನ್ನು ಅನುಸಂಧಾನ ಮಾಡುವ ಬಗೆ ಮಗದೊಂದು. ಪ್ರತಿಯೊಬ್ಬನಿಗೂ ಸಾವು ಖಚಿತವಾದದ್ದು, ಅದು ಯಾವಾಗ ತನ್ನನ್ನು ಆವರಿಸಿಕೊಳ್ಳುತ್ತದೆ ಎಂಬ ಪ್ರಜ್ಞೆಯ ನಿಖರತೆಯಿಲ್ಲದೆ ದೇಹ ಕೇಂದ್ರಿತವಾಗಿ ಬದುಕುತ್ತಾನೆ. ಸಾವು ಬಾರದಿರಲಿ ಎಂಬುವುದಕ್ಕೆ ಹೋರಾಟವಿದೆ, ಪ್ರಾರ್ಥನೆಯೂ ಇದೆ. ಇದಕ್ಕಿಂತ ಹೆಚ್ಚಾಗಿ ಭಯವಿದೆ, ಈ ಭಯದ ಹಿಂದೆ ಬದುಕಿದೆ ಎಂಬುವುದು ಅವನ ಸಾಂಸ್ಕೃತಿಕ ಪ್ರಜ್ಞೆಯಾಗಿದೆ. ಸಾವು ಎಂಬುವುದು ಪ್ರಕೃತಿಯ ಭಾಗ ಮತ್ತು ಚಲನಶೀಲತೆಯ ಪ್ರತಿರೂಪ. ‘ದೇಹದಲ್ಲಿ ಉಸಿರು ನಿಂತು, ದೇಹಕೋಶಗಳು ತಮ್ಮ ಕಾರ್ಯವನ್ನು ನಿಲ್ಲಿಸುವ ಒಂದು ತಟಸ್ಥ ಸ್ಥಿತಿಯೇ ಸಾವು’ ಎಂಬ ಸರಳ ಅರಿವು ಇರುವ ಮನುಷ್ಯ ತನ್ನ ಸಾವು ಎನ್ನುವಾಗ ಸಂಕಟಗೊಳ್ಳುತ್ತಾನೆ. ವಿಚಲಿತನಾಗುತ್ತಾನೆ. ಇನ್ನೊಬ್ಬರನ್ನು ಕೊಲ್ಲುವ ಮತ್ತು ತನ್ನ ಜೀವವನ್ನು ತಾನೇ ತಗೆದುಕೊಳ್ಳುವುದು ಅಪರಾಧವೆಂದು ಕಾನೂನು ಮಾಡಿಕೊಂಡು ಪ್ರಕೃತಿ ಸಹಜವಾದ ಸಾವಿಗೆ ಎದುರು ನೋಡುತ್ತಾನೆ. ಒಳ್ಳೆಯ ಸಾವು ಬರಲಿ ಎನ್ನುವುದು ವ್ಯಕ್ತಿಯೊಬ್ಬನ ಆಂತರಿಕ ಭಯಕೆ. ಒಳ್ಳೆಯ ಸಾವಿನ ಹಿಂದೆ ಎರಡು ಕಲ್ಪನೆಗಳಿವೆ ಬೇಗ ಜೀವ ಹೋಗಬೇಕು ಅಂದರೆ ಯಾವುದೇ ನರಗೊರವಿಲ್ಲದೆ, ರೋಗಕ್ಕೆ ತುತ್ತಾಗದೆ ನರಳಿ ಸಾವು ಕಾಣಬಾರದೆಂಬುದೊAದಾದರೆ ಸತ್ತ ಮೇಲೆ ಬೀದಿಯ ಹೆಣವಾಗಬಾರದು. ಸೂಕ್ತ ಸಂಸ್ಕಾರಕ್ಕೆ ಒಳಗಾಗಬೇಕೆಂಬುವುದು ಮಗದೊಂದು. ಇಲ್ಲಿ ಪಾಪ, ಪುಣ್ಯ ಹಾಗೂ ಯಮನ ಲೆಕ್ಕಚಾರಗಳೆಲ್ಲವು ಇದೆ.

ಕುಲ, ಜಾತಿ, ಧರ್ಮ ಹಾಗೂ ರಾಜಕೀಯ ಪೆಡಸನ್ನು ಹೊಂದಿರುವ ಸಮಾಜ ಸಾವನ್ನು ಭಾವನಾತ್ಮಕ ಸಂವೇದನೆ ಒಳಪಡಸಿದೆ. ದ್ವೇಷ, ಸಂತಸ, ದು:ಖ, ಸಂಕಟ, ವಿಜೃಂಭಣೆ ಹಾಗೂ ಮುಕ್ತಿಯ ತಾತ್ವಿಕ ರೂಪವನ್ನು ಒಳಗೊಂಡಿದೆ. ಪುನರ್ಜನ್ಮ ಮತ್ತು ಮುಕ್ತಿಯ ಭಾವದಲ್ಲಿ ಗಾಢವಾದ ನಂಬಿಕೆ ಇರುವ ನಮ್ಮ ಸಮಾಜವು ಸಾವನ್ನು ದೈವತ್ವದ ಪರಿದಿಯಲ್ಲಿಯೇ ಅನುಸಂಧಾನಕ್ಕೆ ಒಳಗು ಮಾಡಿತು. ಭಕ್ತರಾದವರು ಸಾವು ಕಂಡರೇ ದೇವರ ಪಾದ ಸೇರಿದರು ಎಂಬ ಸಾಮಾಜಿಕ ಅರಿವು ಮುಕ್ತಿಯನ್ನು ಮುನ್ನೆಲೆಗೆ ತಂದಿತು. ಯುದ್ಧದ ಸಂದರ್ಭದಲ್ಲಿ ಸಾವು ಪಡೆದರೆ ವೀರಮರಣವೆಂದು ಹೆಮ್ಮೆಪಟ್ಟಿತ್ತು. ಕೆಲವು ದುರಂತಕ್ಕೆ ಬಲಿಯಾದರೆ ಪಾಪದ ಫಲ, ಹಣೆ ಬರೆಹ ತಪ್ಪಿಸಲು ಸಾಧ್ಯವೇ ಎಂಬ ಹೇಳಿಕೆಯ ಮುಂದೆ ಮುಂದಿನ ಜನ್ಮದಲ್ಲಿಯಾದರೂ ಪರಿಪೂರ್ಣ ಬದುಕು ಕಾಣಲಿ ಎನ್ನುವ ಹಾರೈಕೆಯು ದು:ಖದ ಬಿಕ್ಕುವಿನಲ್ಲಿ ಬಂದು ಹೋಗುತ್ತದೆ. ಶಿವೈಕ್ಯ, ಲಿಂಗೈಕ್ಯ, ವಿಷ್ಣುಪಾದಸೇರು, ದೈವಾಧೀನರಾಗುವಿಕೆ ಎಂಬ ಮಾತಗಳು ಶಿಷ್ಟ ಪರಂಪರೆಯನ್ನು ಕಾಣಿಸಿದಂತಿದೆ. ಜಾನಪದದ ಬಾಯಿಯಲ್ಲಿ ಅಸುನೀಗು, ದೀಪನಂದಿತು, ಪ್ರಾಣಪಕ್ಷಿಹಾರಿತು, ಕೊನೆಯೂಸಿರು ಎಳೆದರು, ಹೋಗಿಬಿಟ್ಟರು, ಬಾಯಿಗೆ ಮಣ್ಣು ಹಾಕಿಕೊಂಡರು, ಮರಣಕಂಡರು, ಜೀವಹೋಯಿತು, ನೆಗೆದುಬಿದ್ದರು, ಸೆಟೆದುಗೊಂಡರು, ಉಸಿರು ನಿಂತಿತು, ಟಿಕೆಟ್ ಪಡೆದರು, ತೀರಿಹೋದರು, ಹೊಗೆಹಾಕಿಸಿಕೊಂಡರು, ನಿಗಿರಿಕೊಂಡರು, ಪಿಂಡಬಿಡಿಸಿಕೊಂಡರು, ಮಣ್ಣುಕಂಡರು ಇತ್ಯಾದಿ ಮಾತುಗಳು ನಿರಂತರ ಸಾವಿನೊಂದಿಗೆ ಜೀವಪಡೆದು ನಡೆದಾಡುತ್ತವೆ. ಇದು ಮನುಷ್ಯ ಸಮುದಾಯದಲ್ಲಿ ಮಾತ್ರ.
ಕನ್ನಡ ಸಾಹಿತ್ಯವು ಸಾವನ್ನು ಕುರಿತಾಗಿ ಅನುಸಂಧಾನ ಮಾಡುತ್ತ ಬಂದಿದೆ. ಕವಿಯೊಬ್ಬನ ಲೋಕಪ್ರಜ್ಞೆಯು ವರ್ಣನೆಗೆ ಪಲ್ಲಟವಾದ ಕಾರಣ ಸಾವಿನ ಬಗೆಗಿನ ಅಭಿವ್ಯಕ್ತಿಯು ಬಹುಸ್ತರವಾಗಿ ಕಾಣುತ್ತದೆ. ದೇವರಲ್ಲಿ ಲೀನವಾಗುವ ತನವಿದ್ದರೆ ಅದನ್ನು ಮುಕ್ತಿ ಎಂದು, ಯುದ್ಧದಲ್ಲಿ ಸಾವು ಕಂಡರೆ ಅದನ್ನು ವೀರಮರಣವೆಂದು, ಪ್ರೀತಿಸಿ ಬದುಕು ಕೂಡುವಾಗ ಸಾವು ಕಂಡರೆ ಅದನ್ನು ಅಮರಪ್ರೇಮವೆಂದು, ಗಂಡನ ಚಿತೆಗೆ ಹೆಂಡತಿ ಬಿದ್ದು ಸಾವು ಕಂಡರೇ ಅದನ್ನು ಮಹಾಸತಿ ಎಂದು ಚಿತ್ರಿತವಾಗುವ ನೆಲೆಯಲ್ಲಿ ದೇಹದಿಂದ ಆತ್ಮವನ್ನು ಬಿಡಿಸಿಕೊಳ್ಳುವ ತಾರ್ಕಿವಾದ ಚರ್ಚೆಯನ್ನು ಸಾಹಿತ್ಯ ಪಠ್ಯ ಮಾಡುತ್ತದೆ. ಪಂಪನ ‘ಆದಿಪುರಾಣ’ವು ಸಾವಿನ ನೆಲೆಯನ್ನು ಧಾರ್ಮಿಕ ಚೌಕಟ್ಟಿನಲ್ಲಿಟ್ಟು ನೋಡುತ್ತದೆ. ಇಲ್ಲಿ ಸಾವು ದು:ಖದ ಸಂಗತಿಯಲ.್ಲ ಬದಲಿಗೆ ಜನ್ಮದ ಅವಸ್ಥೆಯನ್ನು ದಾಟಿಕೊಂಡು ಮುಕ್ತಿ ಹೊಂದುವುದು, ಇಲ್ಲಿ ಸಾವಿನ ಮೀಮಾಂಸೆಯು ಜೈನಧರ್ಮದ ಸತ್ವವನ್ನು ಹೊಂದಿಕೊಂಡಿದೆ. “ಓಪರೋಪರೊಳೊಡಸಾಯಲ್ ಪಡೆದರಿನ್ನವೇರಿ ಸಯ್ಪೊಳವೇ” ಪಂಪನ ಈ ಸಾಲು ಸಾವನ್ನು ದು:ಖದಿಂದ ಮೀರಿಸಿಕೊಂಡು ಪುಣ್ಯದ ದಾರಿಗೆ ದಾಟಿಸಿದಂತೆ ಕಾಣುತ್ತದೆ. ಸಾವು ಯಾರನ್ನು ಬಿಡುವುದಿಲ್ಲ ನಾವು ಬದುಕುವ ಮೂರು ದಿನದಲ್ಲಿ ಗರ್ವ, ದರ್ಪ, ಆಸ್ತಿ, ಅಧಿಕಾರವೆಲ್ಲವೂ ಸ್ಥಿರವಲ್ಲವೆಂಬ ಆದರ್ಶವನ್ನು ಪಂಪ ವೀರತ್ವದ ನೆಲೆಯಲ್ಲಿ ಅಭಿವ್ಯಕ್ತಿಸುತ್ತಾನೆ “ಸೂಳ್ಪ್ಡೆಯಲಪ್ಪುದು ಕಾಣ ಮಹಾಜಿರಂಗದೊಳ್” ಎಂಬ ಭೀಷ್ಮನ ಮಾತು ಸಾವಿನ ನಿಖರತೆಯನ್ನು ಧ್ವನಿಸುತ್ತದೆ. ಅವರವರ ಕಾರ್ಯ ಮುಗಿಸಿಕೊಂಡಾಗ ಅವರು ತಮ್ಮ ಸಾವನ್ನು ಲೋಕದ ಕ್ರಮದಂತೆ ಕಾಣುತ್ತಾರೆ ಎನ್ನುವುದು ವ್ಯಕ್ತಿಯೊಬ್ಬನು ಅಂಜಿಕೆಯಿಲ್ಲದೆ ತನ್ನ ಅಂತ್ಯಕ್ಕೆ ಸಿದ್ಧನಾಗಬೇಕು ಎನ್ನುವ ತಾತ್ವಿಕತೆಯಿದೆ.

ಸಮಾಜದಲ್ಲಿ ಅನೇಕ ಬಗೆಯ ಸಾವನ್ನು ಕಂಡ ನಾವು ದು:ಖಪಟ್ಟು ಊಟ, ತಿಂಡಿ, ನಿದ್ರೆಯಲ್ಲ ಬಿಟ್ಟದ್ದು ಉಂಟು. ಕೆಲವು ಭಾರಿ ಅವನಿಗೆ ಬರುವ ಸಾವು ನನಗೆ ಬರಬಾರದಿತ್ತೆ ಎಂದು ಹೇಳಿದ್ದು ಉಂಟು. ಇತರರ ಸಾವಿನ ಬಗ್ಗೆ ಮಿಡಿಯುವ ನಾವು ನಮ್ಮ ಸಾವಿನ ಬಗ್ಗೆ ಆತಂಕ ಪಡುತ್ತ ಆ ಸಾವನ್ನು ಗೆಲ್ಲುವುದಕ್ಕೆ ಒಂದಲ್ಲ ಒಂದು ರೀತಿಯ ತಂತ್ರವನ್ನು ರೂಪಿಸುವುದಕ್ಕೆ ಯೋಚಿಸುತ್ತೇವೆ. ರನ್ನನು ತನ್ನ ಗದಾಯುದ್ಧ ಕಾವ್ಯದಲ್ಲಿ ‘ದುರ್ಯೋಧನ ವಿಲಾಪ’ವು ಇದಕ್ಕೆ ಹತ್ತಿರವಾದ ಆಧಾರವೆನ್ನಬಹುದು. ಯುದ್ಧದಲ್ಲಿ ಸಾವುಕಂಡ ದ್ರೋರ್ಣಚಾರ್ಯ, ಅಭಿಮನ್ಯು, ಲಕ್ಷ್ಮಣ ಕುಮಾರ, ಕರ್ಣ ಇತ್ಯಾದಿ ತನ್ನ ಹಿರಿಯ, ಕಿರಿಯ ಸಂಗಡಿಗರ ಹೆಣವನ್ನು ಕಂಡು ದು:ಖಿತನಾಗುತ್ತಾನೆ ಮತ್ತು ನಿಮಗಿಂತ ಮೊದಲು ನನಗೆ ಸಾವು ಬರಬೇಕಿತ್ತೆಂದು ದುರ್ಯೋಧನ ವಿಲಾಪಿಸುತ್ತಾನೆ. “ಮರಣಕ್ಕೆನ್ನಿಂದೆ ನೀಂ ಮುಂಚಿದಯ್ ಮೊನೆಯೊಳ್ ಸೂಳ್‌ತಡಮಾಯ್ತಿದೊಂದೆಡೆಯೊಳ್” ಎಂಬ ಮಾತನ್ನು ಗಮನಿಸಬಹುದು
ಸಾವು ಎನ್ನುವುದು ಸೂತಕವೆಂಬ ನಿಲುವುಗಳನ್ನು ಒಡೆದು ಹಾಕಿ ಸಾವು ಎನ್ನುವುದು ಐಕ್ಯವಾಗುವ ಪವಿತ್ರವಾದ ಘಟ್ಟವೆಂದು ಅಭಿವ್ಯಕ್ತಿಸುವ ವಚನಕಾರರು ಆತ್ಮ ಹಾಗೂ ಪರಮಾತ್ಮನಲ್ಲಿ ಭಿನ್ನತೆಯಿಲ್ಲ ಅಂತರಂಗದಲ್ಲಿ ಎರಡು ಕೂಡುವುದೇ ಐಕ್ಯ. ಶಿವನಿಂದ ಜೀವಹುಟ್ಟಿ ದ್ವೆöÊತವಾಗಿ ಪುನಾ: ಕಾರ್ಯ ಸಾಧನೆಯ ಮೂಲಕ ಅವನಲ್ಲಿ ಒಂದಾಗುವುದು ಇದನ್ನು ಶೂನ್ಯಸ್ಥಿತಿ ಅಥವಾ ಐಕ್ಯವೆಂದು ಕರೆದರು. ಸಾಂಸ್ಕೃತಿಕ ಲೇಪನವನ್ನು ಹೊಂದಿದ್ದ ಸಾವಿನ ಬಗ್ಗೆ ವಚನಕಾರರಲ್ಲಿ ಆಸಕ್ತಿಯಿರಲಿಲ್ಲ. ಬದಲಿಗೆ ದೇವರಲ್ಲಿ ಲೀನವಾಗುವುದೇ ಅವರ ಅಂತಿಮ ಸ್ಥಿತಿಯಾಗಿತ್ತು. ಐಕ್ಯವೆಂಬುವುದರ ಬಗ್ಗೆ ಖಚಿತತೆಯಿದ್ದರೂ ಕಾಯಕವನ್ನು ಬದುಕಿನ ಸಾಧನವಾಗಿ ಬಳಸಿಕೊಂಡಿದ್ದರು ‘ನಾಳೆ ಬಪ್ಪುದು ನಮಗಿಂದೆ ಬರಲಿ’, ‘ಮೃತ್ಯುಮುಟ್ಟದ ಮುನ್ನ ಪೂಜಿಸು ಲಿಂಗವಾ’ ಎನ್ನುವ ವಚನಗಳು ಸಾವಿನ ನೈಜ್ಯತೆಯನ್ನು ಧರಿಸಿದಂತೆ ಕಾಣುತ್ತದೆ.
ಸಾವು ಎನ್ನುವುದು ಬಿಡುಗಡೆಯ ಸಂಕೇತವು ಹೌದು. ದೇಹದಿಂದ ಆತ್ಮದ ಬಿಡುಗಡೆ ಒಂದು ಕಡೆಯಾದರೆ, ಒಬ್ಬರ ಸಾವು ಇನ್ನೊಬ್ಬರ ಬಿಡುಗಡೆಯ ದಾರಿಯಾಗುವುದು ಸಹಜ. ವೀಣಾಶಾಂತೇಶ್ವರ ಅವರ ‘ಬಿಡುಗಡೆ’ ಕತೆಯಲ್ಲಿನ ಸರೋಜ ತನ್ನ ಗಂಡ ಸತ್ತ ಸುದ್ದಿಯು ತನ್ನ ಅರಿವಿಗೆ ಬಂದಾಗ ತನ್ನಬದುಕಿನ ಬಿಡುಗಡೆಯ ದಾರಿ ಎಂದುಕೊಳ್ಳುತ್ತಾಳೆ. “ಆತ ಸತ್ತು ಹೋಗಿದ್ದಾನೆ, ತನ್ನನ್ನು ಲಗ್ನವಾದಾತ, ಮೂರು ಮಕ್ಕಳನ್ನು ಹುಟ್ಟಿಸಿದಾತ, ಜೊತೆಗೆ ಮೂವತ್ತೆರಡು ವರ್ಷ ಬಾಳಿದಾತ, ಮೂವತ್ತೇರಡು ವರ್ಷಗಳ ಕಾಲ ತನ್ನ ಕನಸುಗಳನೆಲ್ಲ ಕನಸುಗಳಾಗಿಯೇ ಉಳಿಸಿದಾತ, ಇಂದು ಸತ್ತಿದ್ದಾನೆ..” ಈ ಸಾವು ಅವಳ ಬದುಕಿಗೆ ಸ್ವಾತಂತ್ರö್ಯವನ್ನು ಒದಗಿಸಿದಂತಾಗುತ್ತದೆ. “ಅಡುಗೆ ಮನೆಗೆ ಹೋದ ಸರೋಜ ಹಾಲು ಬಗ್ಗಿಸಿ, ಅದಕ್ಕೆ ಸಕ್ಕರೆ ಹಾಕಿ ಬೆರಸಿ ಕುಡಿದು ಗಂಡನ ಹೆಣ ಮಲಗಿಸಿದ ಹಾಲಿಗೆ ಬರುತ್ತಾಳೆ” ಹೆಣ್ಣೊಬ್ಬಳು ಗಂಡನ ಸಾವನ್ನು ತನ್ನ ಬಿಡುಗಡೆಯ ನೆಲೆಯಿಂದ ಗ್ರಹಿಸುವುದು ದು:ಖ ಹಾಗೂ ಸೂತಕವನ್ನು ಮೀರಿದಂತೆ ತೋರುತ್ತದೆ.
ಅಮರೇಶ ನುಗಡೋಣಿಯವರ ‘ಸವಾರಿ’ ಕತೆಯಲ್ಲಿ ಸಾವಿನ ಸಂದರ್ಭವನ್ನು ಅಧಿಕಾರಶಾಹಿತ್ವವು ತನ್ನ ಲಾಭಕ್ಕೆ ಬಳಸಿಕೊಳ್ಳುವ ಬಗೆ, ಮಲ್ಲಪ್ಪಗೌಡನ ಸಾವನ್ನು ಊರಿನ ಜನ ಪಾಪಿಯ ಸಾವು ಎಂದು ನೋಡುವ ದೃಷ್ಟಿಯನ್ನು ಯಜಮಾನಿಕೆಯ ವ್ಯವಸ್ಥೆಯು ಪುಣ್ಯದ ಸಾವಾಗಿಸಿ ಪಲ್ಲಟಿಸುವ ತಂತ್ರವನ್ನು ತಾತ್ವಿಕರಿಸುವ ಜೊತೆಯಲ್ಲಿ ಬಂಡವಾಳ ಹಾಗೂ ರಾಜಕೀಯ ಪ್ರಜ್ಞೆಯು ಸಾವಿನ ಮೌಲ್ಯವನ್ನು ವ್ಯವಕಲಿಸಿದನ್ನು ಗುರುತಿಸಬಹುದು. “ಯಜಮಾನ ಕೊನೆ ಉಸರು ಎಳೆದಂಗ ಕಾಣ್ತದ, ಪಂಚಾAಗ ತೆಗೆದು ನೋಡ್ತೀನಿ ಮುಂದಿನ ಕಾರ್ಯ”. ಎಂದು ಹೇಳುತ್ತಿದಂತೆ ಶಿವಪ್ಪಗೌಡ “ತಾತಾ, ಹೌದೇನು? ಇಂಥ ಸಮಯದಾಗ! ಛೆಛೇ.. ಎಂಥ ಫಜೀತಿ ಬಂತು! ಎಂದು ಚಡಪಡಿಸಿ, “ತಾತಾ ಸುದ್ದಿನ್ನ ಹೊರಗ ಹಾಕೋದುಬ್ಯಾಡ! ನನ್ಗ ಅರ್ಜಂಟ್ ಕೆಲ್ಸ ಐತೆ.” ಎಂದು ಸಾವಿನ ಸುದ್ದಿಯನ್ನು ಒಂದು ದಿನ ಮುಚ್ಚಿಟ್ಟು ತಮ್ಮ ಕಾರ್ಯವನ್ನು ಸಾಧಿಸುವುದನ್ನು ಕತೆ ಧ್ವನಿಸುತ್ತದೆ. ಸಾವನ್ನು ಸಮುದಾಯವು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುವ ಹಾಗೂ ಸಾವಿನ ನೆಲೆಯಲ್ಲಿದ್ದ ಮೌಲ್ಯ ಸರಳೀಕರಣಕ್ಕೆ ಒಳಗಾಗುವುದನ್ನು ನಾವು ಕಾಣುತ್ತೇವೆ. ಸಾವು ಎನ್ನುವುದು ನಮಗೆ ಖಚಿತವಾದ ಘಟ್ಟವೆಂಬ ಅರಿವಿದ್ದರೂ ಸಾಂಸ್ಕೃತಿಕ ರೂಪಗಳನ್ನು ಕಾಯಕವಾಗಿ ಕಟ್ಟಿ ಇಲ್ಲಿಂದ ಬಿಡುಗಡೆಯಾಗುವುದೇ ಸಹಜ ಧರ್ಮ ಎನಿಸುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು