ಇತ್ತೀಚಿನ ಸುದ್ದಿ
ಗುರು ಪರಂಪರೆಗೆ ಪ್ರಸಿದ್ಧವಾದ ಮಖಣಾಪುರದ ಶ್ರೀ ಸಿದ್ದಜ್ಯೋತಿ ಆಶ್ರಮ: ಭಕ್ತರಿಗೆ ಸಿಗಲಿದೆ ಅನ್ನ ದಾಸೋಹ
06/10/2021, 16:29
ಭೀಮಣ್ಣ ಪೂಜಾರಿ ಶಿರನಾಳ ವಿಜಯಪುರ
info.reporterkarnataka@gmail.com
ವಿಜಯಪುರ ಜಿಲ್ಲೆಯ ಮಖಣಾಪುರದ ಶ್ರೀ ಸಿದ್ದಜ್ಯೋತಿ ಮಠದ ಸ್ವಾಮಿಗಳ ಸೇವಾ ಸಮಿತಿ ಸಹಯೋಗದಲ್ಲಿ ನಡೆಯುವ ಶ್ರೀ ಸಿದ್ಧಲಿಂಗ ಆಶ್ರಮವು ಅನ್ನದಾಸೋಹಕ್ಕೆ ಇಡೀ ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧಿ ಪಡೆದಿದೆ. ಆಶ್ರಮದ ಗುರುಗಳಾದ ಶ್ರೀ ದೇವೇಂದ್ರ ಒಡೆಯರ್ ಅವರು ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಶ್ರಮದಲ್ಲಿ ಸಕಲ ವ್ಯವಸ್ಥೆಯನ್ನು ಮಾಡಿದ್ದಾರೆ.
ಈ ಆಶ್ರಮವು 1700 ಮಠ ಮುನಿಗಳನ್ನು ಹೊಂದಿದ ಭವ್ಯ ಪರಂಪರೆಯಿಂದ ಬಂದಿದೆ. ಇದೀಗ ಗುರುಗಳು ಇಲ್ಲಿನ ಅನ್ನದಾಸೋಹದ ಮುಂದಾಳತ್ವ ವಹಿಸಿದ್ದಾರೆ. ಆರೋಗ್ಯ ಭಾಗ್ಯ, ಸಂತಾನ ಭಾಗ್ಯಕ್ಕಾಗಿ ಉತ್ತರ ಕರ್ನಾಟಕ ಹಾಗೂ ನೆರೆಯ ಆಂಧ್ರ ಪ್ರದೇಶದಿಂದ ಸಾವಿರಾರು ಭಕ್ತರು ಇಲ್ಲಿಗೆ ಹರಕೆ ಹೊತ್ತುಕೊಳ್ಳುತ್ತಾರೆ. ಗುರುಗಳು ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಭಕ್ತರ ಉದ್ದಾರದಲ್ಲಿ ನಿರತರಾಗಿದ್ದಾರೆ.
ಇದರೊಂದಿಗೆ 4 ಎಕರೆ ಜಾಗದಲ್ಲಿ 108 ಅಡಿ ಎತ್ತರದ ಶಿವಲಿಂಗ ನಿರ್ಮಾಣದ ಸಂಕಲ್ಪವನ್ನು ಗುರುಗಳು ಕೈಗೊಂಡಿದ್ದಾರೆ. ಇದರ ಜತೆ ವೃದ್ದಾಶ್ರಮವೂ ತಲೆ ಎತ್ತಲಿದೆ. ಈ ಮಹಾನ್ ಕಾರ್ಯಕ್ಕೆ ಆಶ್ರಮದ ಸದಸ್ಯರು ಹಾಗು ಸುತ್ತಮುತ್ತಲಿನ ಗ್ರಾಮದ ಭಕ್ತರು, ರಾಜ್ಯ ಮತ್ತು ದೇಶದ ಮೂಲೆ ಮೂಲೆಯ ಶಿವಭಕ್ತರು ನೆರವಿನ ಹಸ್ತದೊಂದಿಗೆ ಪಾಲ್ಗೊಳ್ಳುವ ಅಗತ್ಯವಿದೆ. ಭಕ್ತರು ಈ ಬೃಹತ್ ಶಿವಲಿಂಗ ನಿರ್ಮಾಣ ಕಾರ್ಯದಲ್ಲಿ ತನು- ಮನ- ಧನದಿಂದ ಸಹಾಯ ಮಾಡಿ ಪುನಿತರಾಗಬೇಕು ಎಂದು ಆಶ್ರಮದ ಗುರುಗಳು ಹಾಗೂ ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಶಿವಲಿಂಗ ನಿರ್ಮಾಣದ ಜತೆಗೆ ಅಸಹಾಯಕ, ನಿರ್ಗತಿಕ ವೃದ್ಧರಿಗೆ ಸಹಾಯವಾಗುವ ನಿಟ್ಟಿನಲ್ಲಿ ವೃದ್ದಾಶ್ರಮ ನಿರ್ಮಾಣ ಮಾಡುವ ಸಂಕಲ್ಪ ಕೂಡ ಮಾಡಲಾಗಿದೆ.