ಇತ್ತೀಚಿನ ಸುದ್ದಿ
ಗ್ರೀನ್ ಹಂಟ್- ಸ್ವಚ್ಛ ಜಾಗೃತಿ ಸ್ಪರ್ಧೆ ಹಾಗೂ ಪೌರ ಧ್ವನಿ- ಪೌರ ಕಾರ್ಮಿಕರೊಂದಿಗೆ ಸಂವಾದ
25/11/2021, 16:43

ವರದಿ/ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಸ್ವಚ್ಛ ಭಾರತದ ಕಲ್ಪನೆ ಮೋದಿಜಿಯವರು ಪ್ರಧಾನಮಂತ್ರಿಯಾದಾಗ ಕಂಡ ಕನಸು. ಸತತವಾಗಿ 10 ವರ್ಷ ಗಳಿಂದ ನಾವೆಲ್ಲರೂ ಸೇರಿ ಸ್ವಚ್ಛತೆಗಾಗಿ ಎಲ್ಲರೂ ಸಹಾಭಾಗೀಗಳಾಗಿದ್ದೇವೆ. ಸ್ವಚ್ಛತೆ ಸಮಾಜದ ತೀರಾ ಅಗತ್ಯತೆಯ ವಿಚಾರ ಎಂದು ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಹೇಳಿದರು.
ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಪರಿಸರ ಕಾಳಜಿ ಕೇಂದ್ರ, ರೇಡಿಯೋ ಸಾರಂಗ್ 107.8 ಎಫ್.ಎಂ ಮಂಗಳೂರು, ಆಯೋಜಿಸಿದ್ದ ಗ್ರೀನ್ ಹಂಟ್- ಸ್ವಚ್ಛ ಜಾಗೃತಿ ಸ್ಪರ್ಧೆ ಹಾಗೂ ಪೌರ ಧ್ವನಿ- ಪೌರ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ತ್ಯಾಜ್ಯ ಎನ್ನುವುದು ಸಮಸ್ಯೆಯಾಗಿ ಉಳಿದಿಲ್ಲ. ಇದು ಲಾಭದಾಯಕ ಉದ್ದಿಮೆಯಾಗಿದೆ. ನಮ್ಮ ಮನೆಯ ಕಸವನ್ನು ನಾವು ಸರಿಯಾಗಿ ನಿರ್ವಹಣೆ ಮಾಡುವುದೇ ಪೌರಕಾರ್ಮಿಕರಿಗೆ ನೀಡುವ ನಿಜವಾದ ಸನ್ಮಾನ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಮಾತನಾಡಿ, ವೃತ್ತಿ ಗೌರವ, ವೃತ್ತಿ ಧರ್ಮ ಇವರಡನ್ನು ಗೌರವಿಸಬೇಕು. ಇವು ವಿದ್ಯಾರ್ಥಿ ದೆಸೆಯಿಂದ ಆಗಬೇಕು. ಕಸದ ವಿಲೇವಾರಿಯಲ್ಲಿ ಪೌರ ಕಾರ್ಮಿಕರ ಸೇವೆ ಗಣನೀಯವಾದದ್ದು. ನಾವು ಬಿಸಾಡಿದ ಕಸವನ್ನು ವಿಂಗಡಿಸಿ ಬೆರ್ಪಡಿಸುವುದು ನಿಜವಾಗಿಯೂ ಕಷ್ಟ. ಆದರೆ ನಮ್ಮ ಪೌರ ಕಾರ್ಮಿಕರು ಇದನ್ನು ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಆದರೆ ನಾವೆಲ್ಲ ನಮ್ಮ ಮನೆಗಳಲ್ಲೇ ಈ ಕಸದ ವಿಂಗಡಣೆ ಮಾಡುವುದು ಬಹಳ ಅಗತ್ಯ. ಇಷ್ಟದರೂ ಮಾಡಿದರೆ ನಾವು ಪೌರ ಕಾರ್ಮಿಕರಿಗೆ ನೆರವಾದಂತೆ. ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂತ ಅಲೋಶಿಯಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. (ಫಾ.) ಪ್ರವೀಣ್ ಮಾರ್ಟಿಸ್ ಎಸ್.ಜೆ. ಅವರು ಮಾತನಾಡುತ್ತಾ, ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಅವಶ್ಯಕತೆ ಇರುವವರಿಗೆ ಅವಕಾಶ ನೀಡಬೇಕು. ಇದರಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಸಿರು ದಳದ ನಾಗರಾಜ್ ಬಜಾಲ್, ಪರಿಸರ ಕಾಳಜಿ ಕೇಂದ್ರದ ಮುಖ್ಯಸ್ಥ ಗೆಲ್ವಿನ್ .ಟಿ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಹಾಗೂ ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯ ೪೬ ಸ್ವಚ್ಛತಾ ಕರ್ಮಿಗಳನ್ನು ಸನ್ಮಾನಿಸಲಾಯಿತು. ಸ್ವಚ್ಛತಾ ಕರ್ಮಿಗಳ ಪರವಾಗಿ ಮಾತನಾಡಿದ ಸಂಘದ ಕಾರ್ಯದರ್ಶಿ ಅನಿಲ್ ಅವರು, ಸ್ವಚ್ಛತಾ ಕರ್ಮಿಗಳು ಇನ್ನೂ ಸಮಾಜದ ಕೆಳ ಸ್ಥರದಲ್ಲಿ ಬದುಕುತ್ತಿದ್ದಾರೆ. ಅವರನ್ನು ಗುರುತಿಸುವ ಗೌರವಿಸುವ ಕೆಲಸಗಳು ಆಗಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಗ್ರೀನ್ ಹಂಟ್ ಕಾರ್ಯಕ್ರಮದಲ್ಲಿ ಜಯಗಳಿಸಿದ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ನ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಡಾ.(ಫಾ.) ಮೆಲ್ವಿನ್ ಪಿಂಟೋ ಎಸ್. ಜೆ ಸ್ವಾಗತಿಸಿ,ರೇಡಿಯೋ ಸಾರಂಗ್ ಆರ್ . ಜೆ ಅಭಿಷೇಕ್ ಶೆಟ್ಟಿ ನಿರೂಪಿಸಿದರು.ಪರಿಸರ ಕಾಳಜಿ ಕೇಂದ್ರ ದ ಬಿಂದ್ಯಾ ಶೆಟ್ಟಿ ಬಹುಮಾನಿತರ ಪರಿಚಯ ಮಾಡಿದರು.