ಇತ್ತೀಚಿನ ಸುದ್ದಿ
ಒಂಟಿ ವೃದ್ದ ಮಹಿಳೆಯ ಮನೆಗೆ ನುಗ್ಗಿ 1.75 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ: ಆರೋಪಿ ಬಂಧನ
12/09/2025, 22:48

ಕಾರ್ಕಳ(reporterkarnataka.com): ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಎಳ್ಳಾರೆ ಗ್ರಾಮದ ಮುಳ್ಕಾಡು ಎಂಬಲ್ಲಿ 80 ವರ್ಷದ ಕುಮುದಾ ಶೆಟ್ಟಿ ಅವರ ಮನೆಗೆ ನುಗ್ಗಿ ಲೂಟಿ ನಡೆಸಿದ ಆರೋಪಿ ಕೇವಲ ಮೂರೇ ದಿನಗಳಲ್ಲೇ ಪತ್ತೆ ಹಚ್ಚುವಲ್ಲಿ ಅಜೆಕಾರು ಠಾಣಾ ಪಿ.ಎಸ್.ಐ ಮಹೇಶ್ ಟಿ.ಎಂ ನೆತೃತ್ವದ ತಂಡ ಯಶಸ್ವಿಯಾಗಿದೆ.
ಸೆಪ್ಟೆಂಬರ್ 9ರಂದು ಸಂಜೆ ಅಪರಿಚಿತ ವ್ಯಕ್ತಿ ಮನೆಯೊಳಗೆ ನುಗ್ಗಿ, ಮಹಿಳೆಯನ್ನು ನೆಲಕ್ಕೆ ತಳ್ಳಿಹಾಕಿ ಗಾಯಗೊಳಿಸಿ, 25 ಗ್ರಾಂ ತೂಕದ ರೋಪ್ ಚೈನ್ (ಅಂದಾಜು ಮೌಲ್ಯ ₹1.75 ಲಕ್ಷ) ಕಿತ್ತುಕೊಂಡು ಪರಾರಿಯಾಗಿದ್ದನು. ಈ ಪ್ರಕರಣದ ಆಧಾರದಲ್ಲಿ ಅಜೆಕಾರು ಠಾಣೆಯಲ್ಲಿ ಅ.ಕ್ರ 27/2025 ಕಲಂ 329(3), 309(4) BNS ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರದೇಶ ಕಾಡಿನಿಂದ ಆವೃತವಾದ ಪ್ರದೇಶವಾಗಿರುವುದರಿಂದ ತನಿಖೆಗೆ ಅಡ್ಡಿಯಾಗಿತ್ತು. ತನಿಖೆಯನ್ನು ಆಧರಿಸುತ್ತ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷಾ ಪ್ರಿಯಂವದಾ ಅವರ ಮಾರ್ಗದರ್ಶನದಲ್ಲಿ, ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ತಾಂತ್ರಿಕ ಹಾಗೂ ಮಾನವ ಬುದ್ಧಿಜೀವಿ ಮಾಹಿತಿ ಆಧರಿಸಿ, ಸೆಪ್ಟೆಂಬರ್ 12 ರಂದು ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಳಿ ಆರೋಪಿ ಸುನೀಲ್ ರಮೇಶ್ ಲಮಾಣಿ (29), ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕು, ವಶಕ್ಕೆ ಪಡೆಯಲು ಯಶಸ್ವಿಯಾಯಿತು.
ಆತನ ವಶದಿಂದ ₹2 ಲಕ್ಷ ಮೌಲ್ಯದ 4.20 ಗ್ರಾಂ ಹಾಗೂ 18.80 ಗ್ರಾಂ ತೂಕದ 2 ತುಂಡಾದ ರೋಪ್ ಚೈನ್
KA-20-ED-5326 ನಂಬರಿನ ಮೋಟಾರ್‌ಸೈಕಲ್
ಒಪ್ಪೋ ಮೊಬೈಲ್ ಫೋನ್ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಜೆಕಾರು ಠಾಣಾ ಪಿ.ಎಸ್.ಐ ಮಹೇಶ್ ಟಿ.ಎಂ, ಸಿಬ್ಬಂದಿ ಸತೀಶ್ ಬೆಳ್ಳೆ, ಪ್ರದೀಪ್ ಶೆಟ್ಟಿ, ಮೂರ್ತಿ ಕೆ. ಪಡುಬಿದ್ರೆ ಠಾಣಾ ಸಿಬ್ಬಂದಿ ಕೃಷ್ಣ ಪ್ರಸಾದ, ಸಹಾಯಕ ಪೊಲೀಸ್ ಅಧೀಕ್ಷಕರ ಕಛೇರಿಯ ಶಿವಾನಂದ, ಕಾರ್ಕಳ ವೃತ್ತ ನಿರೀಕ್ಷಕರ ಕಛೇರಿಯ ವಿಶ್ವನಾಥ ಮತ್ತು ಶಶಿಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯ ತಾಂತ್ರಿಕ ಸಿಬ್ಬಂದಿ ದಿನೇಶ್ ಹಾಗೂ ನಿತೀನ್ ಸಕ್ರಿಯ ಪಾತ್ರವಹಿಸಿದ್ದರು.
ಈ ಶ್ರೇಯಸ್ಕರ ಕಾರ್ಯಾಚರಣೆಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಹರಿರಾಮ್ ಶಂಕರ್ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ್ ಎಸ್ ಅವರು ಅಧಿಕಾರಿಗಳನ್ನೂ ಸಿಬ್ಬಂದಿಯನ್ನೂ ಅಭಿನಂದಿಸಿದ್ದಾರೆ.