ಇತ್ತೀಚಿನ ಸುದ್ದಿ
ಗರ ಬಡಿದಿರುವ ಗ್ರಾಪಂ: ಗಜಾಪುರದಲ್ಲಿ ರಸ್ತೆಯಲ್ಲೇ ಹರಿಯುವ ಗಟಾರ ನೀರು; ಎಲ್ಲೆಂದರಲ್ಲಿ ಕಸದ ರಾಶಿ !
25/08/2021, 08:52
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಎತ್ತ ನೋಡಿದರತ್ತ ಗಲೀಜು ನೀರಿನ ಗುಂಡಿ, ಕಸದ ರಾಶಿ, ರಸ್ತೆಯಲ್ಲೇ ಹರಿಯುವ ಬಚ್ಚಲು ನೀರು. ಒಟ್ಟಿನಲ್ಲಿ ಕೊಚ್ಚೆಯ ವಿಶ್ವರೂಪ ದರ್ಶನ…
ಇದು ವಿಜಯನಗರ ಜಿಲ್ಲೆಯ ಕಂದಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಜಾಪುರ ಗ್ರಾಮದ ಒಂದು ಸಣ್ಣ ಝಳಕ್.ಇಲ್ಲಿ ಎಲ್ಲಿ ನೋಡಿದರೂ ಕೊಚ್ಚೆ ಗಲೀಜು, ಕಸದ ರಾಶಿಯೇ ರಾಶಿ.
ಪರಿಣಾಮ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳದ್ದೇ ದರ್ಬಾರು ಎನ್ನುತ್ತಾರೆ ಹೋರಾಟಗಾರ ಕೊಟ್ರೇಶ ಅವರು. ಗ್ರಾಪಂ ಅಧಿಕಾರಿಯ ನಿರ್ಲಕ್ಷ್ಯ ಧೋರಣೆಯೇ ಇದಕ್ಕೆ ಕಾರಣ ಎಂದು ಅವರು ದೂರುತ್ತಾರೆ.
ಗ್ರಾಮದಲ್ಲಿ ಎಲ್ಲೆಂದರಲ್ಲಿ ಬಚ್ಚಲು ಮನೆಯ ನೀರು ರಸ್ತೆಯಲ್ಲಿ ಹರಿದಾಡುತ್ತದೆ. ಗಲ್ಲಿ ಗಲ್ಲಿ ಗಳಲ್ಲಿ ನೀರು, ಕಸ ತುಂಬಿದ ಗುಂಡಿಗಳು ನಿರ್ಮಾಣವಾಗಿವೆ. ಗಜಾಪುರದ ಗಲ್ಲಿಗಳು ನೈರ್ಮಲ್ಯ ಕಾಣದೆ ಗಲೀಜು ಎಲ್ಲೆಂದರಲ್ಲಿ ಕಾಣುತ್ತಿದೆ. ಪರಿಣಾಮ ಬಹುತೇಕ ಗ್ರಾಮಸ್ಥರು ಹಲವು ತಿಂಗಳುಗಳಿಂದ ನಿರಂತರ ಅನಾರೋಗ್ಯಕ್ಕೀಡಗುತ್ತಿದ್ದಾರೆ. ರೈತ ಕಾರ್ಮಿಕರೇ ಹೆಚ್ಚಿರುವ ಗ್ರಾಮದಲ್ಲಿ ರೋಗಗಳು ತಾಂಡವಾಡುತ್ತಿರುವುದರಿಂದಾಗಿ ಅವರು ಆರ್ಥಿಕ ಸಂಕಷ್ಟ ಅನುಭವುಸುವಂತಾಗಿದೆ. ಕೂಲಿ ನಾಲಿ ಮಾಡಿ ದುಡಿದು ಜೀವನ ಸಾಗಿಸುವ ಗ್ರಾಮಸ್ಥರು ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್ ಗಳಿಗೆ ತಮ್ಮ ಬೆವರಿನ ಹಣ ವ್ಯಯ ಮಾಡೋದು ಸಾಮಾನ್ಯವಾಗಿದೆ.
ವರ್ಷಕ್ಕೊಮ್ಮೆ ಜರುಗುವ ಗ್ರಾಮದ ಹಬ್ಬಕ್ಕೆ ಮಾತ್ರ ಕಸ ತೆಗೆಯೋದು ಇಲ್ಲಿ ಸಂಪ್ರದಾಯ. ಗ್ರಾಮ ಸ್ವಚ್ಛವಾಗೋದು ಅಲ್ಲಿವರೆಗೆ ಕಸದ ರಾಶಿ ಗುಂಡಿಗಳು ಕಾಣುತ್ತಿರುತ್ತವೆ. ಬಹುತೇಕ ಕಡೆಗಳಲ್ಲ ಚರಂಡಿ ನಿರ್ಮಾಣವಾಗಬೇಕಿದೆ. ಹಲವೆಡೆಗಳಲ್ಲಿ ಹೂಳು ಹಾಗೂ ಕಸ ತುಂಬಿ ಮುಚ್ಚಿರುವ ಚರಂಡಿಗಳನ್ನು ಸ್ವಚ್ಚಗೊಳಿಸಬೇಕಿದೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಪಂ ಸದಸ್ಯರು ಮುಗ್ದರಿದ್ದು ಅವರೂ ಸಾಕಷ್ಟು ಭಾರಿ ಗ್ರಾಪಂ ಅಧಿಕಾರಿಗೆ ನೈರ್ಮಲ್ಯತೆ ಕಾಪಾಡುವಂತೆ ಸೂಚಿದ್ದಾರಾದರೂ,
ಗ್ರಾಪಂ ಅಧಿಕಾರಿ ಅವರಿಗೆ ಕಾಗ್ಗಕ್ಕ ಗುಬ್ಬಕ್ಕನ ಕಥೆ ಕಟ್ಟಿ ಜಾರಿಕೊಳ್ಳುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವರ್ಷಕ್ಕೊಮ್ಮೆ ಮಾತ್ರ ಚರಂಡಿಗಳ ಕಸ ತೆಗೆಯುವುದು ಪರಿಣಾಮ ನಿಂತ ನೀರಲ್ಲಿ ಕಸ ಕೊಳೆತು ಚರಂಡಿಗಳು ದುರ್ನಾತ ಬೀರುತ್ತಿವೆ.
ಚರಂಡಿಗಳು ಸೊಳ್ಳೆ, ಕ್ರಿಮಿಗಳ ವಾಸ ಸ್ಥಾನವಾಗಿವೆ. ಇದರಿಂದಾಗಿ ತಮಗೆ ಆಸ್ಪತ್ರೆಗೆ ಅಲೆಯೋ ವನವಾಸ ತಪ್ಪುವುದಿಲ್ಲ.ಎಂದು ಅಳಲು ತೋಡಿಕೊಂಡಿದ್ದಾರೆ ಗಜಾಪುರ ಗ್ರಾಮಸ್ಥರು. ಸಂಬಂಧಿಸಿದಂತೆ ತಾಪಂ ಅಧಿಕಾರಿಗಳು ಶೀಘ್ರವೇ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಪರಿಸ್ಥಿತಿ ಅವಲೋಕಿಸಿ ನಿರ್ಲಕ್ಷ್ಯ ಧೊರಣೆಯ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನ ಶೀಘ್ರವೇ ಬದಲಿಸಬೇಕೆಂದು ಗ್ರಾಮಸ್ಥರು ಹಾಗೂ ವಿವಿದ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.