8:16 PM Wednesday16 - July 2025
ಬ್ರೇಕಿಂಗ್ ನ್ಯೂಸ್
ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ… Vijayapura | ಇಂಡಿಯಲ್ಲಿ 4559 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ

ಇತ್ತೀಚಿನ ಸುದ್ದಿ

ಗಡ್ಕಕರಿ ಭೇಟಿ ವೇಳೆ ಸುರತ್ಕಲ್ ಟೋಲ್ ಸಮಸ್ಯೆ ಇತ್ಯರ್ಥಪಡಿಸಿ: ಸಂಸದ ನಳಿನ್ ಗೆ ಹೋರಾಟ ಸಮಿತಿ ಹಕ್ಕೊತ್ತಾಯ

26/02/2022, 11:06

ಮಂಗಳೂರು(reporterkarnataka.com): ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳೂರು ಭೇಟಿಯ ಸಂದರ್ಭ ಸುರತ್ಕಲ್ ತಾತ್ಕಾಲಿಕ  ಟೋಲ್ ಗೇಟ್ ತೆರವು ಕುರಿತು ಸಭೆ ಏರ್ಪಡಿಸಿ ಸಮಸ್ಯೆ ಇತ್ಯರ್ಥ ಪಡಿಸಲು ಸಂಸದ ನಳಿನ್ ಕುಮಾರ್ ಕಟೀಲ್ ಮಾತು ಉಳಿಸಿಕೊಳ್ಳುವಂತೆ ಹೋರಾಟ ಸಮಿತಿ ಆಗ್ರಹಿಸಿದೆ.

2019ರ ಡಿಸೆಂಬರ್ ತಿಂಗಳಲ್ಲಿ‌ ಫಾಸ್ಟ್ ಟ್ಯಾಗ್ ಕಡ್ಡಾಯ ಸಂದರ್ಭ ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ನಲ್ಲಿಯೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಸ್ಥಳೀಯ ವಾಹನಗಳ ಉಚಿತ ಪ್ರಯಾಣ ರದ್ದುಗೊಳಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿತ್ತು. ಆ ಸಂದರ್ಭ ಟೋಟ್ ಗೇಟ್ ವಿರೋಧಿ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಇದು ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು. ಆ ಸಂದರ್ಭ ಸಂಸತ್ ಅಧಿವೇಶನದ ಪ್ರಯುಕ್ತ ದೆಹಲಿಯಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯದ ಕೆಲವು ಸಂಸದರ ನಿಯೋಗದೊಂದಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದರು. ಸಚಿವ ನಿತಿನ್ ಗಡ್ಕರಿ ಸುರತ್ಕಲ್ ಟೋಲ್ ಗೇಟ್ ತೆರವು ಸಂಬಂಧ ವಿಶೇಷ ಸಭೆ ನಡೆಸಲು ಪ್ರಾಧಿಕಾರ, ಹಾಗೂ ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವುಗೊಳ್ಳಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದರು. ಇದು ಜಿಲ್ಲೆಯ ಪತ್ರಿಕೆಗಳಲ್ಲಿ  ವರದಿಯೂ ಆಗಿತ್ತು. ಈ ಪ್ರಯತ್ನಕ್ಕಾಗಿ ಕೆನರಾ ಬಸ್ಸು ಮಾಲಕರ ಸಂಘದವರು ಪತ್ರಿಕೆಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ‌ ಜಾಹೀರಾತನ್ನೂ ನೀಡಿದ್ದರು. ಆದರೆ ನಿತಿನ್ ಗಡ್ಕರಿಯವರು ಸಭೆ ನಡೆಸಿ ಟೋಲ್ ಗೇಟ್ ಸಮಸ್ಯೆ ಇತ್ಯರ್ಥ ಪಡಿಸಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿ ಈಗ ಎರಡು ವರ್ಷ ಸಂದಿದೆ. ಈ ನಡುವೆ ಮೂರು ಬಾರಿ ಟೋಲ್ ಸಂಗ್ರಹ ಗುತ್ತಿಗೆ ನವೀಕರಣಗೊಂಡಿದೆ. ಆದರೆ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರಕ್ಕೆ ಸಂಬಂಧಿಸಿ ಈವರಗೆ ವಿಶೇಷ ಸಭೆಯಾಗಲಿ, ಸಾಮಾನ್ಯ ಸಭೆಯಾಗಲಿ ನಡೆದಿಲ್ಲ. ಬದಲಿಗೆ ಟೋಲ್ ದರವನ್ನು ಏರಿಸಿ ಪ್ರಯಾಣಿಕರ ಸುಲಿಗೆಯನ್ನು ಹೆಚ್ಚಿಸಲಾಗಿದೆ. ಸುರತ್ಕಲ್ ಟೋಲ್ ಗೇಟ್ ಅಧಿಕೃತ ಎಂದು ಫಲಕವನ್ನೂ ಅಳವಡಿಸಲಾಗಿದೆ. ಇದು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ‌ ಸಚಿವ ನಿತಿನ್ ಗಡ್ಕರಿ ವಿಶ್ವಾಸಾರ್ಹತೆಯನ್ನೆ ಪ್ರಶ್ನಾರ್ಹಗೊಳಿಸಿದೆ.

ಈಗ ಸ್ವತಹ ನಿತಿನ್ ಗಡ್ಕರಿ ಜಿಲ್ಲೆಯ ರಾಷ್ಟ್ರಿಯ ಹೆದ್ದಾರಿಗಳ ಕಾಮಗಾರಿಗಳಿಗೆ ಸಂಬಂಧಿಸಿ ಫೆಬ್ರವರಿ 28  ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಇದೇ ಸಂದರ್ಭ ಅಂದು‌ ಮಾತು ಕೊಟ್ಟಂತೆ ಸುರತ್ಕಲ್ ಟೋಲ್ ಕೇಂದ್ರ ತೆರವಿಗೆ ಸಂಬಂಧಿಸಿ ಸಚಿವ ಗಡ್ಕರಿಯವರ ನೇತೃತ್ವದಲ್ಲಿ‌ ಸಭೆ ನಡೆಸಿ ಈ ಕುರಿತು ಅಂತಿಮ ನಿರ್ಧಾರ ಅಗುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ನೋಡಿಕೊಳ್ಳಬೇಕು. ಆ ಮೂಲಕ ಹಲವು ವರ್ಷಗಳಿಂದ ಜನರ ಅಕ್ರಮ ಸುಲಿಗೆಯಲ್ಲಿ‌ ತೊಡಗಿರುವ ಸುರತ್ಕಲ್ ಟೋಲ್ ಕೇಂದ್ರದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಒಂದು ವೇಳೆ ಸಚಿವರು ಸಭೆ ನಡೆಸಲು‌ ಮುಂದಾಗದಿದ್ದಲ್ಲಿ‌ ಸಂಸದರು, ಸಚಿವರು ಜನತೆಗೆ ಸುಳ್ಳು ಹೇಳಿ ದಾರಿ ತಪ್ಪಿಸಿರುವುದು, ಟೋಲ್ ಮಾಫಿಯಾದೊಂದಿಗೆ ಶಾಮೀಲಾಗಿರುವುದು ಸಾಬೀತಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಹೋರಾಟ ಗಂಭೀರ ಸ್ವರೂಪ ತಾಳಲು ಕಾರಣವಾದರೆ ಅದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಹೊಣೆಯಾಗಲಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ  ಹೋರಾಟ ಸಮಿತಿಯ ಪ್ರಕಟನೆ ತಿಳಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು