ಇತ್ತೀಚಿನ ಸುದ್ದಿ
ಗಡಿ ಗ್ರಾಮಗಳಲ್ಲಿ ನಿದ್ದೆ ಬಾರದ ರಾತ್ರಿಗಳು!!: ಭೂಕಂಪನ, ಭೂಕುಸಿತ, ವರ್ಷಧಾರೆಗೆ ತತ್ತರಿಸಿದ ಕೊಡಗು
03/07/2022, 13:13

ಕವಿತಾ ಪೊನ್ನಪ್ಪ ತಲಕಾವೇರಿ ಮಡಿಕೇರಿ
info.reporterkarnataka@gmail.com
ಕಳೆದ ಮುಂಗಾರಿನಲ್ಲಿ ಘೋರ ದುರಂತಕ್ಕೆ ಸಾಕ್ಷಿಯಾದ ಕೊಡಗು ಜಿಲ್ಲೆ ಈ ಬಾರಿಯೂ ಮಳೆಗಾಲ ಶುರುವಾದ ಬಳಿಕ ಮತ್ತೆ ಸಂಕಷ್ಟಕ್ಕೀಡಾಗಿದೆ. ಕಳೆದ ಬಾರಿ ಪ್ರವಾಹ, ಭೂಕುಸಿತ ಉಂಟಾದರೆ, ಈ ಬಾರಿ ಭೂಕಂಪನ ಹೊಸತಾಗಿ ಸೇರ್ಪಡೆಯಾಗಿದೆ.
ಭೂಕಂಪನ, ಸತತ ಮಳೆ, ಭೂಕುಸಿತಕ್ಕೆ ಕೊಡಗು-ದಕ್ಷಿಣ ಗಡಿ ಭಾಗದ ಪ್ರದೇಶಗಳು ಸಂಪೂರ್ಣ ನಲುಗಿ ಹೋಗಿದೆ. ಸ್ಥಳೀಯ ನಾಗರಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ನಡೆಸುತ್ತಿದ್ದಾರೆ.
ಯಾವಾಗ, ಏನಾಗುತ್ತದೋ ಎಂಬ ಆತಂಕ ಅವರಲ್ಲಿ ಮನೆ ಮಾಡಿದೆ.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದ ಸಂಪಾಜೆ, ಕರಿಂಜೆ, ಚೆಂಬು ಮುಂತಾದ ಪ್ರದೇಶ ಮಾತ್ರವಲ್ಲದೆ, ಕಳೆದ ಬಾರಿ ಘೋರ ದುರಂತ ಕಂಡ ಭಾಗಮಂಡಲ ಸಹಿತ ಸುತ್ತಮುತ್ತಲಿನ ಐದು ಗ್ರಾಮದ ಜನತೆ ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ. ಪ್ರತಿ ಮನೆಯಿಂದ ಒಬ್ಬ ಇಬ್ಬರು ರಾತ್ರಿ ವೇಳೆ ಸರದಿಯಲ್ಲಿ ಎಚ್ಚರದಲ್ಲಿರುತ್ತಾರೆ. ಯಾವಾಗ ಭೂಕಂಪನವಾಗುತ್ತೋ, ಯಾವಾಗ ಭೂಕುಸಿತ ಉಂಟಾಗುತ್ತದೋ ಎಂದು ಎಚ್ಚರಿಕೆಯಿಂದ ಇರುತ್ತಾರೆ. ಮಳೆ ಮುಂದುವರಿದಿರುವಂತೆಯೇ ಗಡಿ ಭಾಗವಾದ ಕರಿಕೆ, ಸಂಪಾಜೆ, ಪೆರಾಜೆ, ಚೆಂಬು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕವೂ ಹೆಚ್ಚುತ್ತಿದೆ. ಶನಿವಾರ ಒಂದೇ ದಿನ ಚೆಂಬು ಪರಿಸರದಲ್ಲಿ ಎರಡು ಬಾರಿ ಮತ್ತೆ ಭೂಮಿ ನಡುಗಿದೆ. ಆಡಳಿತಗಳು ಆತಂಕಪಡುವ ಅಗತ್ಯವಿಲ್ಲ ಎನ್ನುತ್ತಿದ್ದರೂ, ಇಲ್ಲಿನ ಜನತೆಯ ಕ್ಷಣ ಕ್ಷಣದ ಆತಂಕ ಮಾತ್ರ ಹೆಚ್ಚುತ್ತಲೇ ಇದೆ.